ಚರಂಡಿಗಳಲ್ಲಿ ಮಳೆ ನೀರು ಹರಿವಿಗೆ ತಡೆ ಒಡ್ಡಿದ್ದಲ್ಲೀ ನಿರ್ಧಾಕ್ಷಿಣ್ಯ ತೆರವಿಗೆ ಸಂಸದ ನಳಿನ್  ಸೂಚನೆ

Spread the love

ಚರಂಡಿಗಳಲ್ಲಿ ಮಳೆ ನೀರು ಹರಿವಿಗೆ ತಡೆ ಒಡ್ಡಿದ್ದಲ್ಲೀ ನಿರ್ಧಾಕ್ಷಿಣ್ಯ ತೆರವಿಗೆ ಸಂಸದ ನಳಿನ್  ಸೂಚನೆ

ಮಂಗಳೂರು:  ರಸ್ತೆಯ ಮೇಲೆ ಬಿದ್ದ ಮಳೆಯ ನೀರು ಬದಿಯ ಚರಂಡಿಗಳಲ್ಲಿ ಸರಾಗವಾಗಿ ಹರಿದು ಹೋಗಬೇಕು, ಈ ಪ್ರಕ್ರಿಯೆಗೆ ತಡೆಗಳನ್ನು ಒಡ್ಡಿದ್ದಲ್ಲೀ ನಿರ್ಧಾಕ್ಷಿಣ್ಯವಾಗಿ ಅವುಗಳನ್ನು ತೆರವು ಮಾಡಬೇಕು, ಅಗತ್ಯವಿದ್ದರೆ ಪೊಲೀಸರ ನೆರವು ಪಡೆಯುವಂತೆ ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರು ನಿರ್ದೇಶನ ನೀಡಿದರು.

ಅವರು ಜು.8ರ ಶುಕ್ರವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಗರದಲ್ಲಿ ಮಳೆ ನೀರು ಹರಿದು ಹೋಗದಂತೆ ಎಲ್ಲೆಲ್ಲಿ ಚರಂಡಿಗಳಿಗೆ ತಡೆಗಳನ್ನು ಒಡ್ಡಲಾಗಿದೆಯೋ ಅಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಕೂಡಲೇ ತೆರವು ಮಾಡಬೇಕು, ಬೇಕಿದ್ದರೆ ಯಂತ್ರಗಳನ್ನು ಸಹ ಬಳಸಿಕೊಳ್ಳಿ ಎಂದ ಸಂಸದರು, ಅಗತ್ಯವಿದ್ದರೆ ಪೊಲೀಸರ ನೆರವು ಕೂಡ ಪಡೆಯುವಂತೆ ತಿಳಿಸಿದರು.

ಮಳೆಗಾಲದಲ್ಲಿ ವಿದ್ಯುತ್ ಅವಘಡಗಳು ಸಂಭವಿಸದಂತೆ ಎಚ್ಚರ ವಹಿಸಬೇಕು, ವಿದ್ಯುತ್ ಸೇರಿದಂತೆ ಇತರೆ ಸಮಸ್ಯೆಗಳು ಕಂಡುಬಂದರೆ ಕೂಡಲೇ ಅವುಗಳನ್ನು ನಿಭಾಯಿಸಲು ಅನುಕೂಲವಾಗುವಂತೆ ಸಿಬ್ಬಂದಿಗಳ ದೂರವಾಣಿ, ಮೊಬೈಲ್ ನಂಬರ್‍ಗಳನ್ನು ಸಾರ್ವಜನಿಕರ ಅನುಕೂಲಕ್ಕೆ ಪ್ರಕಟಿಸುವಂತೆ ಸೂಚಿಸಿದರು.

ಪ್ರಾಕೃತಿಕ ಸೇರಿದಂತೆ ಯಾವುದೇ ರೀತಿಯ ಅವಘಡಗಳು ಜಿಲ್ಲೆಯಲ್ಲಿ ಸಂಭವಿಸಿದರೆ ಕೂಡಲೇ ಅಲ್ಲಿ ತೆರಳಿ ಪರಿಸ್ಥಿತಿಯನ್ನು ಅವಲೋಕಿಸಿ, ಮಾರ್ಗದರ್ಶನ ಹಾಗೂ ಚಿಕಿತ್ಸೆಗೆ ನೆರವು ನೀಡುವಂತಹ ವೈದ್ಯರ ತಂಡವನ್ನು ಎಲ್ಲಾ ತಾಲೂಕುಗಳಲ್ಲಿಯೂ ಸನ್ನದ್ದ ಸ್ಥಿತಿಯಲ್ಲಿಟ್ಟುಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್ ಅವರಿಗೆ ತಿಳಿಸಿದರು.

ನಗರದಲ್ಲಿ ಮಳೆ ಹಾಗೂ ಪ್ರವಾಹ ಸ್ಥಿತಿಯನ್ನು ಸೂಕ್ತವಾಗಿ ನಿರ್ವಹಣೆ ಮಾಡಲು ನಿಯೋಜಿಸಲಾಗಿರುವ ಮೂವರು ಎಂಜಿನಿಯರುಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕು, ಮಳೆಗಾಲವಾದ ಕಾರಣ ಯಾವುದೇ ರಸ್ತೆಗಳನ್ನು ತುಂಡರಿಸಬಾರದು ಎಂದರು.

ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಮಾತನಾಡಿ, ಜಿಲ್ಲಾಧಿಕಾರಿಯವರ ಪಿಡಿ ಖಾತೆಯಲ್ಲಿ 15 ಕೋಟಿ ರೂ.ಗಳ ಅನುದಾನವಿದೆ, ಪ್ರತಿ ತಾಲೂಕಿನ ತಹಶೀಲ್ದಾರರ ಖಾತೆಯಲ್ಲಿ 45 ಲಕ್ಷ ರೂ.ಗಳ ವರೆಗೆ ಹಣವಿದ್ದು, ಮಳೆ, ನೆರೆಯಿಂದಾಗಿ ಮನೆ ಹಾನೀಗೀಡಾದಲ್ಲಿ ಕೂಡಲೇ ಚೆಕ್ ಮೂಲಕ ಪರಿಹಾರ ನೀಡುವಂತೆ ಸೂಚಿಸಲಾಗಿದೆ, ಪ್ರತಿಯೊಂದು ಗ್ರಾಮ ಪಂಚಾಯತ್‍ನಲ್ಲಿ ಟಾಸ್ಕ್ ಪೋರ್ಸ್ ಸಮಿತಿ ರಚನೆಯಾಗಿದೆ, ವಿಪರೀತ ಮಳೆಯಿಂದಾಗಿ ಶಾಲಾ ಮಕ್ಕಳಿಗೆ ರಜೆ ನೀಡುವ ಬಗ್ಗೆ ಆಯಾ ಗ್ರಾಮ ವ್ಯಾಪ್ತಿಯಲ್ಲಿ ನಿರ್ಧರಿಸಿ ರಜೆ ನೀಡುವ ಬಗ್ಗೆ ಚಿಂತನೆ ನಡೆದಿದೆ ಎಂದರು.

ಎಸ್‍ಡಿಆರ್‍ಎಫ್‍ನಲ್ಲಿ 67, ಎನ್‍ಡಿಆರ್‍ಎಫ್‍ನಲ್ಲಿ 20 ಸಿಬ್ಬಂದಿಗಳಿದ್ದು, ಪ್ರಾಕೃತಿಕ ಅವಘಡಗಳ ಸಂದರ್ಭದಲ್ಲಿ ನೆರವು ನೀಡುತ್ತಿದ್ದಾರೆ ಎಂದ ಜಿಲ್ಲಾಧಿಕಾರಿಯವರು, ಲೋಕೋಪಯೋಗಿ, ಸಣ್ಣ ನೀರಾವರಿ ಹಾಗೂ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರುಗಳು ಏರ್‍ಪೋರ್ಟ್‍ಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿ ಅವಲೋಕಿಸುವಂತೆ ತಿಳಿಸಿದ ಅವರು, ಏರ್‍ಪೋರ್ಟ್‍ನಲ್ಲಿ ಅಣಕು ಕಾರ್ಯಾಚರಣೆಗಳನ್ನು ಹಮ್ಮಿಕೊಳ್ಳುವಂತೆ ಏರ್‍ಪೋರ್ಟ್ ಅಧಿಕಾರಿಗೆ ಸೂಚನೆ ನೀಡಿದರು.

ಜಿಲ್ಲಾ ವಿಪತ್ತು ನಿರ್ವಹಣಾ ಸಭೆಯಲ್ಲಿ ಸಂಬಂಧಿಸಿದ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಬೇಕು, ಕೇಂದ್ರ ಸ್ಥಾನ ಬಿಡಬೇಕಿದ್ದಲ್ಲೀ ಜಿಲ್ಲಾಧಿಕಾರಿ ಅಥವಾ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ಅನುಮತಿ ಪಡೆಯಬೇಕು, ಅದನ್ನು ಉಲ್ಲಂಘಿಸಿದ್ದಲ್ಲೀ ವಿಪತ್ತು ನಿರ್ವಹಣಾ ಕಾಯ್ದೆಯನುಸಾರ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ನಗರ ಪೊಲೀಸ್ ಆಯುಕ್ತ ಶಶಿಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಷ್ ಭಗವಾನ್ ಸೋನಾವಣೆ, ಮಂಗಳೂರು ಮಹಾನಗರ ಪಾಲಿಕೆಯ ಪ್ರಭಾರ ಆಯುಕ್ತ ಪ್ರಶಾಂತ್ ಮಿಶ್ರ ವೇದಿಕೆಯಲ್ಲಿದ್ದರು. ಸಂಬಂಧಿಸಿದ ಇಲಾಖೆಗಳ ಮುಖ್ಯಸ್ಥರು ಸಭೆಯಲ್ಲಿದ್ದರು.


Spread the love