
ಚಾಮರಾಜನಗರದಲ್ಲಿ ಅನಧಿಕೃತ ಕ್ಲೀನಿಕ್ ಗಳಿಗೆ ಬೀಗ
ಚಾಮರಾಜನಗರ: ಗ್ರಾಮೀಣ ಪ್ರದೇಶದಲ್ಲಿ ಕ್ಲೀನಿಕ್ ತೆರೆದು ಶೀತ, ಜ್ವರಗಳಿಗೆ ಮಾತ್ರೆ ಕೊಟ್ಟು ಜನರಿಗೆ ವಂಚಿಸುತ್ತಾ ಬಂದಿದ್ದ ಹಲವರು ನಕಲಿ ವೈದ್ಯರ ಬಣ್ಣ ಕೊರೊನಾ ಕಾಲದಲ್ಲಿ ಬಯಲಾಗುತ್ತಿದೆ.
ಇದುವರೆಗೆ ಕ್ಲೀನಿಕ್ ತೆರೆದ ವ್ಯಕ್ತಿ ನಿಜವಾಗಿಯೂ ಎಂಬಿಬಿಎಸ್ ಓದಿದ್ದಾನೋ ಅವನ ಬಳಿ ಇರುವ ಸರ್ಟಿಫಿಕೇಟ್ ಅಸಲಿಯೋ ನಕಲಿಯೋ ಎಂದು ನೋಡದೆ ಜನ ಕ್ಲೀನಿಕ್ ಗೆ ತೆರಳಿ ಆತ ನೀಡುತ್ತಿದ್ದ ಮಾತ್ರೆ ನುಂಗಿ, ಟಾನಿಕ್ ಕುಡಿಯುತ್ತಿದ್ದರು. ಆದರೆ ಈಗ ನಕಲಿ ವೈದ್ಯರ ಮೋಸ ವಂಚನೆಗೆ ಕತ್ತರಿ ಬಿದ್ದಿದೆ. ಜಿಲ್ಲಾಡಳಿತ ಖಾಸಗಿ ಕ್ಲೀನಿಕ್ ಗಳತ್ತ ನಿಗಾವಹಿಸಿದ್ದು ಪರಿಶೀಲನೆ ಮಾಡುತ್ತಿದೆ.
ಜಿಲ್ಲೆಯ ಹನೂರು ತಾಲ್ಲೂಕಿನ ಖಾಸಗಿ ಕ್ಲೀನಿಕ್ ಗಳಿಗೆ ಭೇಟಿ ನೀಡಿ ಬೀಗ ಮುದ್ರೆ ಹಾಕುವತ್ತ ಕ್ರಮ ವಹಿಸಿದೆ. ಈಗಾಗಲೇ ಸಾರ್ವಜನಿಕರಿಂದಲೂ ದೂರುಗಳು ಬಂದಿದ್ದು ಸದ್ಯ ಎಚ್ಚೆತ್ತುಕೊಂಡಿರುವ ಹನೂರು ತಾಲ್ಲೂಕು ಆಡಳಿತವು ತಾಲ್ಲೂಕಿನಾದ್ಯಂತ ಇರುವ ಅನಧಿಕೃತ ಕ್ಲೀನಿಕ್ ಗಳನ್ನು ಬಂದ್ ಮಾಡಲು ಮುಂದಾಗಿದೆ.
ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚಾಗಿ ಲೈಸನ್ಸ್ ಹಾಗೂ ವಿದ್ಯಾರ್ಹತೆ ಇಲ್ಲದೇ ವೈದ್ಯರಂತೆ ಫೋಸ್ ನೀಡಿ ಕ್ಲೀನಿಕ್ ಗಳನ್ನು ನಡೆಸುತ್ತಾ ಬಂದಿದ್ದರು. ಈ ನಡುವೆ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ತಾಲೂಕು ಕೋವಿಡ್ ಕ್ಯಾಪ್ಟನ್ ಗಳನ್ನು ರಚಿಸಲಾಗಿದ್ದು ಅವರು ಕ್ಲೀನಿಕ್ ಗಳಿಗೆ ತೆರಳಿ ಪರಿಶೀಲನೆ ನಡೆಸುತ್ತಿದ್ದು ಈ ವೇಳೆ ಖಾಸಗಿ ಕ್ಲೀನಿಕ್ ಗಳ ಬಂಡವಾಳ ಹೊರಬರುತ್ತಿದೆ.
ಸದ್ಯ ಕೋವಿಡ್ ಕ್ಯಾಪ್ಟನ್ ನಂಜುಂಡಯ್ಯ ಅವರು ಹನೂರು ವ್ಯಾಪ್ತಿಯ ಒಂದೆರಡು ಖಾಸಗಿ ಕ್ಲೀನಿಕ್ ಗಳಿಗೆ ಬೀಗ ಮುದ್ರೆ ಹಾಕಿದ್ದು, ಅವರು ಹೇಳುವಂತೆ, ಕ್ಲೀನಿಕ್ ನಡೆಸುವವರು ಸರಿಯಾದ ಪ್ರಮಾಣ ಪತ್ರ ಹಾಗೂ ಲೈಸನ್ಸ್ ಪಡೆದಿರುವ ಬೇಕು, ಆದರೆ ಕೆಲವರು ಸರಿಯಾದ ದಾಖಲೆಗಳು ಇಲ್ಲದೇ ಕ್ಲೀನಿಕ್ ನಡೆಸುತ್ತಿದ್ದರಿಂದ ಕ್ಲೀನಿಕ್ ಗಳನ್ನು ಬಂದ್ ಮಾಡಿಸಿದ್ದಾಗಿ ಹೇಳಿದ್ದಾರೆ. ಇದೊಂದು ಒಳ್ಳೆಯ ಬೆಳವಣಿಗೆಯಾಗಿದ್ದು ಇನ್ನು ಮುಂದೆಯಾದರೂ ವೈದ್ಯರ ಹೆಸರಿನಲ್ಲಿ ಮುಗ್ದ ಜನರನ್ನು ವಂಚಿಸುವ ಕೃತ್ಯಕ್ಕೆ ಕಡಿವಾಣ ಬೀಳಲಿ.