ಚಾಮರಾಜನಗರದಲ್ಲಿ ಒಡೆದ ಕೆರೆಗಳು: ಅಪಾರ ಹಾನಿ

Spread the love

ಚಾಮರಾಜನಗರದಲ್ಲಿ ಒಡೆದ ಕೆರೆಗಳು: ಅಪಾರ ಹಾನಿ

ಚಾಮರಾಜನಗರ: ಜಿಲ್ಲೆಯಲ್ಲಿ ಕಳೆದ ಎರಡು ಮೂರು ದಿನಗಳಿಂದ ಸುರಿದ ನಿರಂತರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಯ ಹೊಂಗನೂರುಕೆರೆ, ಗುಂಬಳ್ಳಿಕೆರೆ, ಯರಗಂಬಳ್ಳಿ ಕೆರೆಗಳು ಒಡೆದ ಪರಿಣಾಮ ತಗ್ಗು ಪ್ರದೇಶಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿದೆ. ಇತ್ತ ಕೃಷ್ಣಯ್ಯನಕಟ್ಟೆ ಡ್ಯಾಂ, ಹೊಮ್ಮದ ಕೆರೆ, ಕಣ್ಣೆಗಾಲ ಕೆರೆ, ಮಂಗಲದಕೆರೆ, ಹೊಸಹಳ್ಳಿ ಕೆರೆ, ಇರಸವಾಡಿ ಕೆರೆಗಳು ತುಂಬಿ ಕೋಡಿಬಿದ್ದ ಪರಿಣಾಮ ಹೆಚ್ಚುವರಿ ನೀರು ತಗ್ಗುಪ್ರದೇಶಗಳಿಗೆ ನುಗ್ಗಿದೆ.

ಇತ್ತ ಸುವರ್ಣಾವತಿಯ ನದಿಯ ಪ್ರವಾಹವು ಸುರಿದ ಮಳೆಗೆ ಹೆಚ್ಚಿನ ಪ್ರಮಾಣದಲ್ಲಿ ಹರಿದಿದ್ದರಿಂದ ರೈತರು ಬೆಳೆದಿದ್ದ ಸಾವಿರಾರು ಹೆಕ್ಟೇರ್ ಬಾಳೆ, ಅಡಿಕೆ, ತೆಂಗು, ಕಬ್ಬು, ಭತ್ತ, ಅರಿಶಿಣ ಸೇರಿದಂತೆ ಇನ್ನಿತರ ಬೆಳೆಗಳು ಜಲಾವೃತಗೊಂಡಿದೆ. ಕಣ್ಣೇಗಾಲದಿಂದ ಆಲೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ನೀರಿನ ರಭಸ ಹೆಚ್ಚಿದ್ದರಿಂದ ಐದಾರು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಸಾವಿರಾರು ಮನೆಗಳು ಹಾನಿಗೀಡಾಗಿವೆ. ಕೆಲವೊಂದು ರಸ್ತೆಗಳ ಮೇಲೆ ನೀರು ಹರಿದಿದ್ದರಿಂದ ರಸ್ತೆಗಳು ಹಾಳಾಗಿದ್ದು, ಸಂಚಾರಕ್ಕೆ ಅಡಚಣೆಯುಂಟಾಗಿದೆ.

ನೂರಾರು ವಿದ್ಯುತ್ ಕಂಬಗಳಿಗೆ ಹಾನಿ ಉಂಟಾಗಿದೆ. ಯಳಂದೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜು, ಅರಣ್ಯ ಇಲಾಖೆ, ಚೆಸ್ಕಾಂ ಇಲಾಖೆ, ಹೊಂಗನೂರು ಬಿಸಿಎಂ ಹಾಸ್ಟೆಲ್ ಸೇರಿದಂತೆ ಇನ್ನಿತರ ಸರ್ಕಾರಿ ಕಛೇರಿಗಳಿಗೆ ನೀರು ನುಗ್ಗಿದ ಪರಿಣಾಮ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಅಡಚಣೆ ಉಂಟಾಗಿದೆ. ಇತ್ತ ಕಂದಾಯ ಇಲಾಖಾಧಿಕಾರಿಗಳು ಹಾನಿಗೀಡಾಗಿರುವ ಮನೆಗಳು ಹಾಗೂ ಬೆಳೆಗಳ ಸರ್ವೇ ಕಾರ್ಯದಲ್ಲಿ ನಿರತರಾಗಿದ್ದಾರೆ. ಯಳಂದೂರು ತಾಲ್ಲೂಕಿನ ಅಗರ ಗ್ರಾಮದಲ್ಲಿ ಕಾಳಜಿ ಕೇಂದ್ರವನ್ನು ತೆರೆಯಲಾಗಿದೆ. ಅತಿಯಾದ ಮಳೆಯ ನೀರು ತಗ್ಗು ಪ್ರದೇಶಗಳಿಗೆ ನುಗ್ಗಿದ ಪರಿಣಾಮ ಕಂದಹಳ್ಳಿ ಯಳಂದೂರು ಪಟ್ಟಣ ಉಪ್ಪಿನಮೋಳೆ, ಕಟ್ಟೆ ಗಣಿಗನೂರು, ಮದ್ದೂರು, ಅಗರ, ಮಾಂಬಳ್ಳಿ ಗ್ರಾಮಗಳಲ್ಲಿ ಸಾವಿರಾರು ಮನೆಗಳು ಮಳೆಯಿಂದ ಹಾನಿಗೊಳಗಾಗಿದೆ.

ಯಳಂದೂರು ತಹಶೀಲ್ದಾರ್ ಆನಂದಪ್ಪನಾಯಕ ಮಾತನಾಡಿ ಯಳಂದೂರು ತಾಲ್ಲೂಕಿನ ಗುಂಬಳ್ಳಿ ಹಾಗೂ ಯರಗಂಬಳ್ಳಿ ಕೆರೆ ಒಡೆದ ಪರಿಣಾಮ ಕೃಷ್ಣಯ್ಯನಕಟ್ಟೆ ಡ್ಯಾಂ, ಇನ್ನಿತರ ಗ್ರಾಮಗಳ ಕೆರೆಗಳು ಕೋಡಿ ಬಿದ್ದ ಪರಿಣಾಮ ಜೊತೆಗೆ ಸುವರ್ಣಾವತಿ ನದಿಯ ಪ್ರವಾಹದಿಂದ ಈ ಅವಘಡ ಸಂಭವಿಸಿದ್ದು, ಕಂದಹಳ್ಳಿಯಲ್ಲಿ 140, ಅಗರದಲ್ಲಿ 180, ಮಾಂಬಳ್ಳಿಯಲ್ಲಿ 200 ಮನೆಗಳು ಸೇರಿದಂತೆ ಹಾನಿಗೀಡಾಗಿವೆ. ಇನ್ನಿತರ ಗ್ರಾಮಗಳ ಸರ್ವೇ ಕಾರ್ಯ ನಡೆಯುತ್ತಿದ್ದು, ಅಗತ್ಯ ಪರಿಕರ ಹಾಳಾದವರಿಗೆ 10 ಸಾವಿರರೂಗಳ ನೆರವು, ಮನೆ ಶಿಥಿಲ ಗೊಂಡವರಿಗೆ 50 ಸಾವಿರರೂಗಳ ನೆರವು ನೀಡುವುದಾಗಿ ತಿಳಿಸಿದರು. ಮುಂಜಾಗ್ರತ ಕ್ರಮವಾಗಿ ಅಗರ ಗ್ರಾಮದಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ ಎಂದರು.

ಗೂಳಿಪುರ ಗ್ರಾಮದ ರೈತ ಪ್ರಮೋದ್ ಮಾತನಾಡಿ ಅತಿಯಾದ ಮಳೆಯಿಂದ ಕೆರೆಗಳು ಕೋಡಿ ಬಿದ್ದ ಪರಿಣಾಮ ಹಾಘೂ ಸುವರ್ಣಾವತಿ ನದಿಯ ಪ್ರವಾಹದಿಂದ ತಮ್ಮ ಮೂರು ಎಕರೆ ಜಮೀನಿನಲ್ಲಿ ಬೆಳೆದಿದ್ದ ಬಾಳೆ, ಅಡಿಕೆ, ತೆಂಗು ಹಾನಿಗೀಡಾಗಿವೆ. ಸಂಬಂಧಪಟ್ಟ ಅಧಿಕಾರಿಗಳು ಸರ್ವೇ ನಡೆಸಿ, ಪರಿಹಾರ ಕೊಡಬೇಕೆಂದು ಮನವಿ ಮಾಡಿದರು.

ಕಣ್ಣೇಗಾಲ ಗ್ರಾಮದ ರೈತ ರವಿಕುಮಾರ್ ಮಾತನಾಡಿ ಅತಿಯಾದ ಮಳೆಯಿಂದ ತಮ್ಮ ಜಮೀನಿನಲ್ಲಿ ಬೆಳೆದಿದ್ದ ಬಾಳೆ ತೆಂಗು ಫಸಲಿಗೆ ಹಾನಿಗೊಳಗಾಗಿದ್ದು, ಪರಿಹಾರ ಕೊಡಬೇಕೆಂದು ಸರ್ಕಾರವನ್ನು ಮನವಿ ಮಾಡಿದರು.

ಕಣ್ಣೇಗಾಲ ಗ್ರಾಮದ ಮತ್ತೋರ್ವ ರೈತ ಸುರೇಶ್ ಮಾತನಾಡಿ ಸುವರ್ಣಾವತಿ ನದಿಯ ಪ್ರವಾಹದಿಂದ ಕಣ್ಣೇಗಾಲ ಗ್ರಾಮದಿಂದ ಆಲೂರಿಗೆ ಹಾದು ಹೋಗುವ ರಸ್ತೆಯ ಮೇಲೆ ನೀರಿನ ಸೆಳೆತ ಹೆಚ್ಚಿರುವುದರಿಂದ ಗ್ರಾಮದ ಸಂಪರ್ಕಗಳು ಕಡಿವಾಣಗೊಂಡು ಸಂಚಾರಕ್ಕೆ ತುಂಬಾ ತೊಂದರೆಯುಂಟಾಗಿದೆ ಎಂದರು.


Spread the love