ಚಾಮರಾಜನಗರದಲ್ಲಿ ಕೋವಿಡ್ ಪರೀಕ್ಷೆ ಹೆಚ್ಚಳಕ್ಕೆ ತೀರ್ಮಾನ

Spread the love

ಚಾಮರಾಜನಗರದಲ್ಲಿ ಕೋವಿಡ್ ಪರೀಕ್ಷೆ ಹೆಚ್ಚಳಕ್ಕೆ ತೀರ್ಮಾನ

ಚಾಮರಾಜನಗರ: ಕೋವಿಡ್ ಸೋಂಕು ಪರೀಕ್ಷೆ ಸಂಖ್ಯೆಯ ಹೆಚ್ಚಳ, ಪಾಸಿಟಿವಿಟಿ ಪ್ರಮಾಣ ಕಡಿಮೆ ಮಾಡುವುದು, ಕೋವಿಡ್ ಲಸಿಕೆ ನೀಡುವ ಕಾರ್ಯದ ಪ್ರಗತಿಗೆ ವಿಶೇಷ ಒತ್ತು ನೀಡುವ ಮೂಲಕ ಪರಿಣಾಮಕಾರಿಯಾಗಿ ಜಿಲ್ಲೆಯಲ್ಲಿ ಕೊರೊನಾ ಹರಡುವಿಕೆ ತಡೆಯಲು ಪ್ರಾಥಮಿಕ, ಪ್ರೌಢಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಸುರೇಶ್‌ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ಟಾಸ್ಕ್ ಫೋರ್ಸ್ ಸಭೆಯಲ್ಲಿ ನಿರ್ಧರಿಸಲಾಯಿತು.

ಕೋವಿಡ್ ನಿಯಂತ್ರಣ ಸಂಬಂಧ ನಿಗಾ ವಹಿಸಲು ರಚಿಸಲಾಗಿರುವ ಜಿಲ್ಲಾಮಟ್ಟದ 7ನೇ ಟಾಸ್ಕ್ ಫೊರ್ಸ್ ಸಭೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಸುರೇಶ್ ಕುಮಾರ್ ಅವರು ಗೂಗಲ್ ಮೀಟ್ ಮೂಲಕ ನಡೆಸಿ ತೀರ್ಮಾನ ಕೈಗೊಳ್ಳಲಾಯಿತು.

ಸಭೆಯಲ್ಲಿ ಶಾಸಕರಾದ ಆರ್. ನರೇಂದ್ರ, ಎನ್. ಮಹೇಶ್, ಸಿ.ಎಸ್. ನಿರಂಜನ್ ಕುಮಾರ್ ಅವರು ಮಾತನಾಡಿ ಕೋವಿಡ್ ಪರೀಕ್ಷೆ ಸಂಖ್ಯೆಯ ಗುರಿಯನ್ನು ಹೆಚ್ಚಳ ಮಾಡಬೇಕಿದೆ. ಇದರಿಂದ ಸೋಂಕು ಹರಡದಂತೆ ತಡೆಯಲು ಸಾಧ್ಯವಾಗಲಿದೆ. ಸೋಂಕು ಪ್ರಮಾಣವನ್ನು ಗಣಿನೀಯವಾಗಿ ತಗ್ಗಿಸುವ ನಿಟ್ಟಿನಲ್ಲಿ ಇನ್ನಷ್ಟು ಸಕ್ರಿಯವಾಗಿ ಕಾರ್ಯಗಳು ನಡೆಯಬೇಕಿದೆ. ಕೋವಿಡ್ ಲಸಿಕೆ ನೀಡುವ ಪ್ರಗತಿಯನ್ನು ಹೆಚ್ಚಳ ಮಾಡಬೇಕಿದೆ. ವಿಶೇಷವಾಗಿ ಗಿರಿಜನರ ಪ್ರದೇಶಗಳಲ್ಲಿ ವ್ಯಾಪಕವಾಗಿ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಒತ್ತು ನೀಡಬೇಕಿದೆ ಎಂಬುದು ಸೇರಿದಂತೆ ಹಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಸುರೇಶ್‌ಕುಮಾರ್ ಅವರು ಮಾತನಾಡಿ ಜಿಲ್ಲೆಯಲ್ಲಿ ಪಾಸಿಟಿವಿಟಿ ಪ್ರಮಾಣವನ್ನು ತಗ್ಗಿಸುವ ದಿಸೆಯಲ್ಲಿ ಮತ್ತಷ್ಟು ಸುಧಾರಣಾ ಕಾರ್ಯ ಯೋಜನೆ ಮಾಡಬೇಕು. ಪ್ರತಿ ತಾಲೂಕಿನಲ್ಲಿ ಅತಿ ಹೆಚ್ಚು ಸೋಂಕು ಕಂಡು ಬಂದಿರುವ ಗ್ರಾಮಗಳನ್ನು ಗುರುತಿಸಿ ಅಲ್ಲಿ ಸೋಂಕು ಹೆಚ್ಚಾಗಲು ಇರುವ ಕಾರಣಗಳನ್ನು ಪತ್ತೆ ಮಾಡಬೇಕು. ಕೊರೊನಾ ತಡೆಗೆ ನಿಬಂಧ ಏಕೆ ಸಾಧ್ಯವಾಗಿಲ್ಲ ಎಂಬ ಬಗ್ಗೆ ಆಳವಾಗಿ ತಿಳಿದುಕೊಳ್ಳುವ ಕೆಲಸ ಕೈಗೊಂಡು ತುರ್ತಾಗಿ ಸೋಂಕು ತಡೆಗೆ ಮುನ್ನಡೆಯಬೇಕು ಎಂದರು.

ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಪ್ರತೀ ತಾಲೂಕಿನ ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗಿರುವ ೩ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಈ ಭಾಗಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ವಿಶೇಷ ಗಮನ ನೀಡುವ ಕಾರ್ಯದಲ್ಲಿ ತೊಡಗಬೇಕಿದೆ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಬೋಯರ್ ನಾರಾಯಣ್ ರಾವ್, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರ್‌ರಾಜ್, ಉಪವಿಭಾಗಾಧಿಕಾರಿ ಡಾ. ಗಿರೀಶ್ ದಿಲೀಪ್ ಬಡೋಲೆ, ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ.ಸಿ. ರವಿ, ಜಿಲ್ಲಾ ವೈದ್ಯಕೀಯ ಕಾಲೇಜಿನ ಡೀನ್ ಡಾ. ಸಂಜೀವ್, ನೋಡಲ್ ಅಧಿಕಾರಿಗಳಾದ ಮಲೆಮಹದೇಶ್ವರ ವನ್ಯ ಜೀವಿ ವಿಭಾಗದ ಉಪಸಂರಕ್ಷಣಾಧಿಕಾರಿ ಏಡುಕೊಂಡಲು, ಬಿ.ಆರ್.ಟಿ ವಲಯದ ನಿರ್ದೆಶಕರಾದ ಡಾ. ಸಂತೊಷ್‌ಕುಮಾರ್, ಜಿಲ್ಲಾಸ್ಪತ್ರೆಯ ನೋಡಲ್ ಅಧಿಕಾರಿ ಡಾ. ಮಹೇಶ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹೊನ್ನೇಗೌಡ, ಇತರೆ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡರು.


Spread the love