ಚಾಮರಾಜನಗರದಲ್ಲಿ ಭಾರೀ ಮಳೆಗೆ ಪರದಾಡಿದ ಜನರು

Spread the love

ಚಾಮರಾಜನಗರದಲ್ಲಿ ಭಾರೀ ಮಳೆಗೆ ಪರದಾಡಿದ ಜನರು

ಚಾಮರಾಜನಗರ: ಚಾಮರಾಜನಗರದಲ್ಲಿ ಮಂಗಳವಾರ ಸುರಿದ ಭಾರೀ ಮಳೆಗೆ ಜನರು ಪರದಾಡುವಂತಾಯಿತು. ಮಳೆ ನೀರು ಹರಿದು ಹೋಗದ ಪರಿಣಾಮ ನಗರದ ಬಿ. ರಾಚಯ್ಯ ಜೋಡಿ ರಸ್ತೆಯಲ್ಲಿ ಕಾಲುವೆಯಂತೆ ನೀರು ನಿಂತು, ವಾಹನ ಸವಾರರಿಗೆ, ಪಾದಚಾರಿಗಳಿಗೆ ತೊಂದರೆಯಾಯಿತು.

ಹಾಗೆನೋಡಿದರೆ ಮಳೆ ಬಂದಾಗಲೆಲ್ಲ ನೀರು ನಿಂತು ಜನ ಪರದಾಡುವುದು ಇವತ್ತು ನಿನ್ನೆಯ ಸಮಸ್ಯೆಯಲ್ಲ ಕಳೆದ ಹತ್ತು ವರ್ಷಗಳಿಂದಲೂ ಈ ಸಮಸ್ಯೆಯನ್ನು ಅನುಭವಿಸುತ್ತಲೇ ಬಂದಿದ್ದು, ಇದುವರೆಗೆ ಯಾರೂ ಕೂಡ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದ ಕಾರಣ ಸಮಸ್ಯೆ ಮುಂದುವರೆದಿದೆ.

2013 ರಲ್ಲಿ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಬಿ.ರಾಚಯ್ಯ ಜೋಡಿ ರಸ್ತೆಯನ್ನು 80 ಅಡಿಯಿಂದ 100 ಅಡಿಗೆ ವಿಸ್ತರಿಸಲಾಯಿತು. ಜತೆಗೆ ಡಾಂಬರು ರಸ್ತೆಯನ್ನು ಸಿಮೆಂಟ್‌ ಕಾಂಕ್ರೀಟ್‌ ರಸ್ತೆಯನ್ನಾಗಿ ಪರಿವರ್ತಿಸಲಾಯಿತು. ಈ ಸಂದರ್ಭದಲ್ಲಿ ಅವೈಜ್ಞಾನಿ‌ಕ ತರಾತುರಿಯ ಕಾಮಗಾರಿ ನಡೆಯಿತು. ಜೋಡಿ ರಸ್ತೆಯನ್ನು ಅಗಲ ಮಾಡುವುದಕ್ಕೆ ಆದ್ಯತೆ ನೀಡಲಾಯಿತೇ ಹೊರತು, ಕೈಗೊಳ್ಳಬೇಕಾದ ಸಮರ್ಪಕ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ.

ರಸ್ತೆ ಅಗಲ ಮಾಡುವ ಸಂದರ್ಭದಲ್ಲಿ ರಸ್ತೆಯಡಿ ಹಾದು ಹೋಗಿರುವ ನೀರು ಸರಬರಾಜು ಪೈಪುಗಳನ್ನು ಸ್ಥಳಾಂತರಿಸಿ ಪಕ್ಕಕ್ಕೆ ಹಾಕಲಿಲ್ಲ. ಮತ್ತು ಹಳೆಯ ಪೈಪುಗಳನ್ನೇ ಉಳಿಸಲಾಯಿತು. ಹೀಗಾಗಿ ಪ್ರತಿ ಬಾರಿ ಮನೆ ಮನೆಗಳಿಗೆ ನೀರು ಬಿಟ್ಟಾಗಲೂ, ಜೋಡಿ ರಸ್ತೆ ಮಧ್ಯ ಇರುವ ಅತ್ಯಂತ ಹಳೆಯ ಪೈಪುಗಳು ಒಡೆದು ನೀರು ರಸ್ತೆಯಲ್ಲೇ ಹರಿಯುತ್ತಿದೆ. ಇದರಿಂದಾಗಿ ನೀರು ಸರಬರಾಜು ಮಾಡಿದಾಗಲೆಲ್ಲಾ ಸಾವಿರಾರು ಲೀಟರ್‌ ನೀರು ವ್ಯರ್ಥವಾಗುತ್ತಿದೆ. ಇದು ಒಂದು ಸಮಸ್ಯೆಯಾಗಿ ಮುಂದುವರೆಯುತ್ತಿದೆ.

2013ರಲ್ಲಿ ದ್ದ ಕಾಂಗ್ರೆಸ್‌ ಸರ್ಕಾರ ಈ ಸಮಸ್ಯೆಯನ್ನು ಬಗೆಹರಿಸಲಿಲ್ಲ. ನಂತರ 2018ರಲ್ಲಿ ಬಂದ ಬಿಜೆಪಿ ಸರ್ಕಾರವೂ ಈ ಸಮಸ್ಯೆ ಬಗೆ ಹರಿಸಲು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಈಗ ಮತ್ತೆ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಿದೆ. ವಿಪರ್ಯಾಸವೆಂದರೆ, ಮೂರು ಅವಧಿಯಲ್ಲೂ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರೇ ಅಧಿಕಾರದಲ್ಲಿದ್ದಾರೆ. ಈ ಸಮಸ್ಯೆ ಬಗೆ ಹರಿಸಲು ಆಸಕ್ತಿಯನ್ನೇ ವಹಿಸಿಲ್ಲ ಎಂದು ನಾಗರಿಕರು ದೂರುತ್ತಾರೆ.

ವಿಪರ್ಯಾಸವೆಂದರೆ, ಇಂಥ ತೀವ್ರ ಸಮಸ್ಯೆ ಜಿಲ್ಲಾಡಳಿತ ಭವನದ ಮುಂದೆಯೇ ನಡೆದರೂ ಅಧಿಕಾರಿಗಳು ಇದನ್ನು ಬಗೆಹರಿಸಲು ದಿವ್ಯ ನಿರ್ಲಕ್ಷ್ಯ ತೋರಿದ್ದಾರೆ. ಒಮ್ಮೆ ಭಾರಿ ಮಳೆ ಬಂದು ಇಡೀ ಜೋಡಿ ರಸ್ತೆ ನೀರು ಜಿಲ್ಲಾಡಳಿತ ಭವನದ ಆವರಣಕ್ಕೇ ನುಗ್ಗಿ, ಜಿಲ್ಲಾಡಳಿತ ಭವನದ ಆವರಣ ನದಿಯಂತೆ ಕಾಣುತ್ತಿತ್ತು. ಇಷ್ಟಾದರೂ ಅಧಿಕಾರಿಗಳು ಸಮಸ್ಯೆ ಬಗೆ ಹರಿಸಲು ಯತ್ನಿಸಲಿಲ್ಲ ಎಂಬುದು ಸಾರ್ವಜನಿಕರ ಆಕ್ರೋಶವಾಗಿದೆ.

ಇಲ್ಲಿ ಮಳೆ ನೀರು ಹರಿದು ಹೋಗಲು, ಚರಂಡಿ ವ್ಯವಸ್ಥೆ ಮಾಡದಿರುವುದು ಜೋಡಿ ರಸ್ತೆ ಅಗಲ ಮಾಡುವ ಕಾಮಗಾರಿ ನಡೆಸಿದ ಸಂದರ್ಭದಲ್ಲಿ ಅಂಗಡಿ ಮುಂಗಟ್ಟುಗಳ ಜಾಗವನ್ನು ಒಡೆಯಲಾಯಿತು. ಆ ಸಂದರ್ಭದಲ್ಲಿ ಕಟ್ಟಡಗಳ ಮಾಲೀಕರಿಗೆ ಪರಿಹಾರ ನೀಡಲಿಲ್ಲ. ಆಗ ನಗರಸಭೆಯಿಂದ ಬಲಾತ್ಕಾರವಾಗಿ ಜಾಗವನ್ನು ತೆರವುಗೊಳಿಸಲಾಯಿತು. ಈ ಬೆದರಿಕೆಗೆ ಜಗ್ಗದ ಕೆಲವರು ನ್ಯಾಯಾಲಯದ ಮೊರೆ ಹೊಕ್ಕರು. ಹಾಗೆಯೇ ನ್ಯಾಯಾಲಯದ ಮೊರೆ ಹೋದವರ ಕಟ್ಟಡಗಳ ಮುಂದೆ ರಸ್ತೆ ಅಗಲ ಮಾಡಲಿಲ್ಲ. ಹಾಗಾಗಿ ಅಲ್ಲಿ ಚರಂಡಿ ನಿರ್ಮಾಣ ಮಾಡಿಲ್ಲ. ಹೀಗೆ ಒಂದಷ್ಟು ದೂರ ಚರಂಡಿ ಇದ್ದು, ಇನ್ನೊಂದಿಷ್ಟು ದೂರ ಚರಂಡಿ ಇಲ್ಲ. ಹೀಗಾಗಿ ಜೋಡಿ ರಸ್ತೆಯಲ್ಲಿ ಸಮರ್ಪಕವಾದ ಚರಂಡಿ ವ್ಯವಸ್ಥೆಯೇ ಇಲ್ಲದ್ದರಿಂದ ತೊಂದರೆ ಅನುಭವಿಸುವಂತಾಗಿದೆ.

ಈಗ ಮಳೆ ಬಂದಾಗ ಮಳೆ ನೀರು ಚರಂಡಿಗೆ ಹೋಗದೇ ರಸ್ತೆಯಲ್ಲೇ ಹರಿಯುತ್ತದೆ. ಪರಿಣಾಮ ನಗರದ ಶ್ರೀನಿವಾಸ ಹೋಟೆಲ್‌ ಬಳಿ ರಾಜಕಾಲುವೆಯಿದ್ದು, ಇದರಲ್ಲಿ ನಗರದ ಅನೇಕ ಬೀದಿಗಳ ನೀರು ಹರಿದುಬರುತ್ತದೆ. ಈ ರಾಜಕಾಲುವೆ ಜೋಡಿ ರಸ್ತೆ ಸೇರುವ ಜಾಗದಲ್ಲಿ ದೊಡ್ಡ ಪೈಪನ್ನು ಹಾಕದ ಕಾರಣ, ರಾಜ ಕಾಲುವೆ ನೀರು ಜೋಡಿ ರಸ್ತೆಯ ಮೇಲೆ ಹರಿಯುತ್ತದೆ. ಒಂದೆಡೆ ಚರಂಡಿ ಇಲ್ಲದ ಕಾರಣ ರಸ್ತೆಯಲ್ಲಿ ನಿಂತ ನೀರು, ಇನ್ನೊಂದೆಡೆ ರಾಜಕಾಲುವೆಯ ನೀರು ಎರಡೂ ಸೇರಿ, ಜಿಲ್ಲಾಡಳಿತ ಭವನ, ಅಧ್ಯಕ್ಷ ಹೋಟೆಲ್‌ ಬಳಿ ಮಳೆ ಬಂದಾಗ ಕೊಳಚೆ ನೀರಿನ ಸರೋವರ ಸೃಷ್ಟಿಯಾಗುತ್ತದೆ. ಹೀಗಾಗಿ ಜೋರು ಮಳೆ ಬಂದಾಗ ಈ ಜಾಗವನ್ನು ದಾಟಲಾಗದೇ, ವಾಹನ ಸವಾರರು, ಪಾದಚಾರಿಗಳು ನಿಲ್ಲಬೇಕಾಗುತ್ತದೆ. ಈ ಸಂದರ್ಭದಲ್ಲಿ ಜೋಡಿ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತವಾಗಿ ಜನರು ನಗರಸಭೆಯನ್ನೂ, ಅಧಿಕಾರಿಗಳನ್ನೂ, ಜನಪ್ರತಿನಿಧಿಗಳನ್ನು ಶಪಿಸುತ್ತಾ ನಿಂತಿರುತ್ತಾರೆ. ಇದು ಪ್ರತಿ ಬಾರಿ ಮಳೆ ಬಂದಾಗಲೂ ಜೋಡಿ ರಸ್ತೆಯಲ್ಲಿ ನಡೆಯುವ ನಿರಂತರ ಪ್ರಹಸನವಾಗಿದೆ.


Spread the love