ಚಾಮರಾಜನಗರದಲ್ಲಿ ಮಳೆಯ ಆರ್ಭಟಕ್ಕೆ ವ್ಯಕ್ತಿ ಬಲಿ

Spread the love

ಚಾಮರಾಜನಗರದಲ್ಲಿ ಮಳೆಯ ಆರ್ಭಟಕ್ಕೆ ವ್ಯಕ್ತಿ ಬಲಿ

ಚಾಮರಾಜನಗರ: ಭಾನುವಾರ ರಾತ್ರಿ ಸುರಿದ ಭಾರೀ ಮಳೆಗೆ ಚಾಮರಾಜನಗರದಲ್ಲಿ ಗೋಡೆ ಕುಸಿದು ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ.

ಚಾಮರಾಜನಗರ ತಾಲೂಕಿನ ತಾಲ್ಲೂಕಿನ ದಡದಹಳ್ಳಿ ಗ್ರಾಮದ ನಿವಾಸಿ ಮೂರ್ತಿ(33) ಸಾವನ್ನಪ್ಪಿದ ದುರ್ದೈವಿ. ಇವರು ತಾಯಿಯೊಂದಿಗೆ ಮನೆಯಲ್ಲಿದ್ದರು. ರಾತ್ರಿ ಸುರಿದ ಮಳೆಗೆ ಮನೆಯ ಗೋಡೆ ಕುಸಿದು ಮೂರ್ತಿ ಮೇಲೆ ಬಿದ್ದ ಪರಿಣಾಮ ಅವರು ಸಾವನ್ನಪ್ಪಿದ್ದಾರೆ. ಆದರೆ ಅವರ ತಾಯಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಚಾಮರಾಜನಗರ ಜಿಲ್ಲೆಯಲ್ಲಿ ಭಾನುವಾರ ತಡರಾತ್ರಿ ಸುರಿದ ಭಾರಿ ಪ್ರಮಾಣದ ಮಳೆಯಿಂದ ಕೆರೆಕಟ್ಟೆಗಳು ತುಂಬಿ ಹರಿದ ಪರಿಣಾಮ ಬಹುತೇಕ ಪ್ರದೇಶಗಳು ಜಲಾವೃತವಾಗಿವೆ. ಇದರಿಂದ ನೂರಾರು ಎಕರೆ ಜಮೀನು ಜಲಾವೃತವಾಗಿ ಫಸಲು ನಾಶವಾಗಿವೆ.

ಚಾಮರಾಜನಗರ ತಾಲ್ಲೂಕಿನ ಮಾಲೆಗೆರೆ ಕೆರೆಗೆ ಮಳೆಯ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದು ಬರುತ್ತಿರುವ ಹಿನ್ನಲೆಯಲ್ಲಿ ಕೋಡಿ ಬಿದ್ದ ಮಾಲೆಗೆರೆ ಕೆರೆಯ ನೀರು ದೊಡ್ಡರಾಯಪೇಟೆ ಕೆರೆಗೆ ಹರಿದು ಬರುತ್ತಿದ್ದು, ದೊಡ್ಡರಾಯಪೇಟೆ ಕೆರೆಯೂ ಸಹ ಎರಡನೇ ಬಾರಿಗೆ ಕೋಡಿ ಬಿದ್ದಿದೆ.

ಇನ್ನು ಜ್ಯೋತಿಗೌಡನಪುರ ಗ್ರಾಮದಲ್ಲಿ ಮಳೆಯ ನೀರು ಮನೆಗಳಿಗೆ ನುಗ್ಗು ಗ್ರಾಮಸ್ಥರ ನಿದ್ದೆಗೆಡಿಸಿದೆ. ಕಥಾನಾಯಕನ ಕೆರೆಯಿಂದ ನೀರು ಹೆಚ್ಚಾಗಿ ಹರಿದು ಬರುತ್ತಿರುವುದರಿಂದ ಗ್ರಾಮದ ಬಹುತೇಕ ಬಡಾವಣೆಗಳು ಜಲಾವೃತವಾಗಿದೆ. ನಾಗವಳ್ಳಿ ಗ್ರಾಮದಲ್ಲೂ ಸಹ ಮಳೆಯ ನೀರಿನ ಅವಾಂತರಕ್ಕೆ ಗ್ರಾಮಸ್ಥರು ತತ್ತರಿಸಿ ಹೋಗಿದ್ದಾರೆ.

ಕೊಂಗಹಳ್ಳಿ ಸುತ್ತಮುತ್ತಲು ಭಾರಿ ಪ್ರಮಾಣದ ಮಳೆಯಾಗಿರುವ ಹಿನ್ನಲೆಯಲ್ಲಿ ಮಳೆಯ ನೀರು ಚಾಮರಾಜನಗರ ತಾಲ್ಲೂಕಿನ ಚಿಕ್ಕಹೊಳೆ ಜಲಾಶಯಕ್ಕೆ ಹರಿದು ಬರುತ್ತಿರುವುದರಿಂದ ಚಿಕ್ಕಹೊಳೆ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿದೆ.

ಗುಂಡ್ಲುಪೇಟೆ ತಾಲ್ಲೂಕಿನ ಬರಗಿ ಕೆರೆಯೂ ಸಹ ಮಳೆಯ ಆರ್ಭಟಕ್ಕೆ ಭರ್ತಿಯಾಗಿದ್ದು, ಕೆರೆ ಕೋಡಿ ಬಿದ್ದಿದೆ. ಕೋಡಿ ಬಿದ್ದ ನೀರು ಹೆಚ್ಚಾಗಿ ಹರಿಯುತ್ತಿರುವುದರಿಂದ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ. ಒಟ್ಟಾರೆ ಭಾರೀ ಪ್ರಮಾಣದಲ್ಲಿ ಸುರಿದ ಮಳೆಯಿಂದ ಚಾಮರಾಜನಗರ ಜಿಲ್ಲೆಯಲ್ಲಿ ಸಂಕಷ್ಟ ಎದುರಾಗಿದ್ದು, ಮಳೆ ಮತ್ತೆ ಸುರಿದರೆ ಹೇಗೆ ಜೀವನ ಮಾಡುವುದು ಎಂಬ ಭಯ ಜನರನ್ನು ಕಾಡತೊಡಗಿದೆ.


Spread the love