ಚಾಮರಾಜನಗರದಲ್ಲಿ ಸೋಲಿಗರ ನೋವಿಗೆ ಮಿಡಿದ ಟಿಬೆಟಿಯನ್ನರು!
ಚಾಮರಾಜನಗರ: ಕೊರೊನಾದಿಂದಾಗಿ ಕೂಲಿ ಕೆಲಸವೂ ಇಲ್ಲದೆ ಕಾಡಿನ ನಡುವೆ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದ ವ್ಯಾಪ್ತಿಯಲ್ಲಿರುವ ಸೋಲಿಗರ ನೆರವಿಗೆ ಟಿಬೆಟಿಯನ್ ಧಾವಿಸಿದ್ದು ಆಹಾರ ಕಿಟ್ ಸೇರಿದಂತೆ ಅಗತ್ಯ ವಸ್ತುಗಳನ್ನು ನೀಡುವ ಮೂಲಕ ಹಸಿದ ಹೊಟ್ಟೆಗೆ ಅನ್ನ ನೀಡಿ ತಣ್ಣಗಾಗಿಸಿದ್ದಾರೆ.
ಸಾಮಾನ್ಯವಾಗಿ ದಾನಿಗಳು ಪಟ್ಟಣ ಪ್ರದೇಶದ ವ್ಯಾಪ್ತಿಯಲ್ಲಿರುವ ನಿರ್ಗತಿಕರಿಗೆ ಆಹಾರ ಕಿಟ್ ಗಳನ್ನು ನೀಡುತ್ತಿರುವುದು ದಿನನಿತ್ಯ ಕಂಡು ಬರುತ್ತಿದೆ. ಆದರೆ ಕಾಡಿನ ನಡುವೆ ಕೂಲಿ ಮಾಡಿಕೊಂಡು ಜೀವನ ಸಾಗಿಸುವ ಬುಡಕಟ್ಟು ಮಂದಿಗೆ ಇದು ತಲುಪುವುದು ಕಷ್ಟ ಸಾಧ್ಯವೇ. ಬೆಟ್ಟಗುಡ್ಡಗಳ ನಡುವೆ ಕಾಡಿನಲ್ಲಿ ಜೀವನ ಸಾಗಿಸುವ ಸೋಲಿಗರ ಬಳಿ ಹೋಗಿ ಆಹಾರದ ಕಿಟ್ ಗಳನ್ನು ನೀಡುವುದು ಕೂಡ ಕಷ್ಟ ಸಾಧ್ಯವೇ. ಹೀಗಾಗಿ ಕಳೆದೊಂದು ವರ್ಷದಿಂದ ಇವರು ಕಷ್ಟದಲ್ಲಿಯೇ ಜೀವನ ಮಾಡಿಕೊಂಡು ಬರುತ್ತಿದ್ದಾರೆ.
ಈ ನಡುವೆ ಬಡ ಸೋಲಿಗರ ಕಷ್ಟಗಳನ್ನು ಅರಿತ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಒಡೆಯರಪಾಳ್ಯದ ಬಳಿ ಇರುವ ಟಿಬೇಟಿಯನ್ ನಿರಾಶ್ರಿತರು ಅಗತ್ಯ ವಸ್ತುಗಳನ್ನೊಳಗೊಂಡ ಆಹಾರದ ಕಿಟ್ ಗಳನ್ನು ನೀಡುವ ಮೂಲಕ ನೆರವಾಗಿ ಮಾನವೀಯತೆ ಮೆರೆದಿದ್ದಾರೆ. ಹಾಗೆನೋಡಿದರೆ ಚೀನಾ ಆಕ್ರಮಿತ ಟಿಬೇಟ್ ದೇಶದಿಂದ ಭಾರತಕ್ಕೆ ನಿರಾಶ್ರಿತರಾಗಿ ಬಂದು ಚಾಮರಾಜನಗರದ ಒಡೆಯರ ಪಾಳ್ಯದ ಬಳಿ ಬದುಕು ಕಟ್ಟಿಕೊಂಡಿರುವ ಟಿಬೆಟಿಯನ್ನರು ಸ್ವೆಟರ್ ಹೆಣೆಯುವುದು ಸೇರಿದಂತೆ ವಿವಿಧ ರೀತಿಯ ಕೆಲಸಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ ತಮ್ಮ ಕಷ್ಟ ಮರೆತು ಅವರು ಸುಮಾರು ಸೋಲಿಗ ಕುಟುಂಬಗಳ ಸಂಕಷ್ಟಕ್ಕೆ ಕೈಜೋಡಿಸಿರುವುದು ನಿಜಕ್ಕೂ ಸಂತಸದ ವಿಚಾರವಾಗಿದೆ.
ಜಿಲ್ಲೆಯ ಪಿ.ಜಿ.ಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಕಲಕಿಂಡಿ, ಹಾವಿನಮೂಲೆ, ಮಾವತ್ತೂರು, ಯರಗಬಾಳು, ಉದ್ದಟ್ಟಿ, ನೆಲ್ಲಿಕತ್ರಿ, ಕೆರೆದಿಂಬ, ಗೊಂಬೆಗಲ್ಲು ,ಜೀರಿಗೆ ಗದ್ದೆ ವ್ಯಾಪ್ತಿಯಲ್ಲಿ ಸುಮಾರು 450 ಕುಟುಂಬ ಸೋಲಿ ಕುಟುಂಬಗಳು ನೆಲೆಸಿದ್ದು, ಇವರೆಲ್ಲರೂ ಕಾಡು ಉತ್ಪನ್ನ ಹೊರತು ಪಡಿಸಿದರೆ ಕೂಲಿ ಕೆಲಸವನ್ನೇ ನಂಬಿ ಬದುಕುತ್ತಿದ್ದಾರೆ. ಇವರೆಲ್ಲರೂ ಕೆಲಸಕ್ಕಾಗಿ ಬಿಳಿಗಿರಿರಂಗನ ಬೆಟ್ಟದಲ್ಲಿರುವ ಬೇಡಗುಳಿ, ಅತ್ತಿಖಾನೆ ಮೊದಲಾದ ಕಾಫಿ ಎಸ್ಟೇಟ್ ಗಳಿಗೆ ಹೋಗುತ್ತಿದ್ದರು.
ಲಾಕ್ ಡೌನ್ ಆಗಿರುವ ಪರಿಣಾಮ ಕಳೆದ ಒಂದು ತಿಂಗಳಿನಿಂದ ಎಲ್ಲಿಯೂ ಹೋಗಲಾರದೆ, ಮಾಡಲು ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದರು. ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದನ್ನು ಮನಗಂಡ ಒಡೆಯರಪಾಳ್ಯ ನಿರಾಶ್ರಿತರ ವಸಾಹತು ಶಿಬಿರದ ಟಿಬೇಟಿಯನ್ನರು ಸೋಲಿಗರಿಗೆ ಸಹಾಯ ಹಸ್ತ ಚಾಚಿದ್ದಾರೆ. ತಾವು ಕೂಡಿಟ್ಟ ಹಣದಲ್ಲಿ ತಾನಾ ಚಾರಿಟಬಲ್ ಟ್ರಸ್ಟ್ ಮೂಲಕ ಸೋಲಿಗರ ಸಂಕಷ್ಟಕ್ಕೆ ಸ್ಪಂದಿಸಿ ಸೋಲಿಗರ ಮೊಗದಲ್ಲಿ ನಗು ಮೂಡಿಸಿದ್ದಾರೆ. ಟಿಬೆಟಿಯನ್ನರ ಈ ಕಾರ್ಯ ವನ್ನು ಸಾರ್ವ ಜನಿಕರು ಶ್ಲಾಘಿಸಿದ್ದಾರೆ.
ಟಿಬೇಟ್ ದೇಶದಿಂದ ಆಶ್ರಯಕ್ಕಾಗಿ ಬಂದು, ಆಶ್ರಯ ನೀಡಿದ ದೇಶದ ಜನತೆಯ ಸಂಕಷ್ಟಕ್ಕೆ ಮನಮಿಡಿದಿರುವುದು ಅವರ ಹೃದಯವಂತಿಕೆ ತೋರಿಸುತ್ತಿದೆ.. ಕೊರೊನಾದಿಂದ ತಾವೇ ಕಷ್ಟದಲ್ಲಿದ್ದರೂ ಅದನ್ನು ಮರೆತು ತಮ್ಮ ಕೈಲಾದ ನೆರವನ್ನು ಸೋಲಿಗರಿಗೆ ಮಾಡಿರುವುದು ಶ್ಲಾಘನೀಯ ಕಾರ್ಯವಾಗಿದೆ. ಈ ಕುರಿತು ಪಿ.ಜಿ.ಪಾಳ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣಮೂರ್ತಿ.ಮಾತನಾಡಿ, ತಮ್ಮ ದೇಶ ಬಿಟ್ಟು ನಿರಾಶ್ರಿತರಾಗಿ ಬಂದಿರುವ ಟಿಬೆಟಿಯನ್ನರು ಇಲ್ಲಿನ ಬಡವರ ಕಷ್ಟ ಅರಿತು ಸ್ಪಂದಿಸಿರುವುದು ಇತರರಿಗೆ ಮಾದರಿಯಾಗಿದೆ ಎಂದು ಹೇಳಿದ್ದಾರೆ.