
ಚಾಮರಾಜನಗರದಲ್ಲಿ ಹುಲಿ ಸಾವಿಗೆ ಕಾರಣ ಪತ್ತೆ: ವ್ಯಕ್ತಿಯೊಬ್ಬನ ಬಂಧನ
ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯ ವ್ಯಾಪ್ತಿಯ ಕೆಬ್ಬೇಪುರ ಗ್ರಾಮದ ಮಲ್ಲಯ್ಯನಕಟ್ಟೆ ಕೆರೆಯಲ್ಲಿ ಫೆ. 7ರಂದು ಹುಲಿಯ ಕಳೇಬರ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಅರಣ್ಯಾಧಿಕಾರಿಗಳು ಹುಲಿ ಸಾವಿಗೆ ಕಾರಣ ಪತ್ತೆಹಚ್ಚಿದಲ್ಲದೆ, ಕೃತ್ಯ ಎಸಗಿದವರ ಪೈಕಿ ಒಬ್ಬನನ್ನು ಬಂಧಿಸಿದ್ದಾರೆ.
ಕೆಬ್ಬೇಪುರ ಗ್ರಾಮದ ರೇಚಪ್ಪ (34) ಬಂಧಿತ ಆರೋಪಿ. ಈತನೊಂದಿಗೆ ಕೃತ್ಯದಲ್ಲಿ ಇನ್ನು ಐವರು ಭಾಗಿಯಾಗಿದ್ದು, ಅವರು ತಲೆಮರೆಸಿಕೊಂಡಿರುವುದರಿಂದ ಪತ್ತೆ ಕಾರ್ಯ ನಡೆಸಲಾಗುತ್ತಿದೆ.
ಅಂದಾಜು ಐದು ವರ್ಷ ವಯಸ್ಸಿನ ಗಂಡು ಹುಲಿಯ ಮೃತದೇಹ ಫೆ.7ರಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯ ವ್ಯಾಪ್ತಿಯ ಕೆಬ್ಬೇಪುರ ಗ್ರಾಮದ ಮಲ್ಲಯ್ಯನಕಟ್ಟೆ ಕೆರೆಯಲ್ಲಿ ಪತ್ತೆಯಾಗಿತ್ತು. ಹುಲಿಯ ಕಾಲುಗಳು ಹಾಗೂ ಕುತ್ತಿಗೆಗೆ ತಂತಿಯಿಂದ ಕಟ್ಟಿ, ಅದಕ್ಕೆ ಭಾರವಾದ ಕಲ್ಲು ಕಟ್ಟಿ ಕೆರೆಗೆ ಹಾಕಿರುವುದು ಮೇಲ್ನೋಟಕ್ಕೆ ಕಂಡು ಬಂದಿತ್ತು. ಹೀಗಾಗಿ ಹುಲಿಯ ಸಾವಿನ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿದ್ದವು.
ಹುಲಿ ಕೂದಲಿನ ಜಾಡು ಹಿಡಿದು ತನಿಖೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಹತ್ವರವಾದ ಮಾಹಿತಿ ದೊರೆತಿತ್ತು ಅದೇನೆಂದರೆ? ‘ಕೆಬ್ಬೇಪುರ ಗ್ರಾಮದ ಶಿವಬಸಪ್ಪ ಎಂಬ ರೈತರಿಗೆ ಸೇರಿದ ಸರ್ವೆ ನಂಬರ್ 262ರಲ್ಲಿ ಬೆಳೆ ರಕ್ಷಣೆಗಾಗಿ ತಂತಿ ಬೇಲಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿತ್ತು. ಈ ಜಮೀನಿನತ್ತ ಬಂದಿದ್ದ ಹುಲಿ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿತ್ತು. ಜಮೀನಿನ ಬಳಿಯೇ ಹುಲಿ ಕಳೇಬರ ಸಿಕ್ಕಿದರೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ರೈತ ಶಿವಬಸಪ್ಪ ಅವರ ಮಗ ರೇಚಪ್ಪ ಹಾಗೂ ಇತರ ಐವರಿದ್ದ ತಂಡ ಹುಲಿಯ ಕುತ್ತಿಗೆ ಮತ್ತು ಕಾಲುಗಳಿಗೆ ಕಲ್ಲುಗಳನ್ನು ಕಟ್ಟಿ ಕೆರೆಗೆ ಎಸೆದಿದ್ದರು ಎಂಬುದು ತನಿಖೆ ವೇಳೆ ಗೊತ್ತಾಗಿದೆ.
ಖಚಿತ ಮಾಹಿತಿ ಮೇರೆಗೆ ರೇಚಪ್ಪ ಅವರನ್ನು ಕರೆಯಿಸಿ ವಿಚಾರಣೆ ಮಾಡಿದಾಗ, ನಿಜಾಂಶ ಒಪ್ಪಿಕೊಂಡಿದ್ದಾರೆ. ಆರು ಮಂದಿ ಸೇರಿ ಈ ಕೃತ್ಯ ನಡೆಸಿರುವುದಾಗಿ ಅವರು ತಪ್ಪೊಪ್ಪಿಕೊಂಡಿದ್ದು, ಉಳಿದ ಐವರಿಗೆ ಹುಡುಕಾಟ ನಡೆಸಲಾಗುತ್ತಿದೆ.