ಚಾಮರಾಜನಗರದಲ್ಲಿ 4 ದಿನ ದಸರಾ ಮಹೋತ್ಸವ

Spread the love

ಚಾಮರಾಜನಗರದಲ್ಲಿ 4 ದಿನ ದಸರಾ ಮಹೋತ್ಸವ

ಚಾಮರಾಜನಗರ: ಚಾಮರಾಜನಗರದಲ್ಲಿ ದಸರಾ ಮಹೋತ್ಸವ ಸೆ.28ರಿಂದ ಅ.1ರವರೆಗೆ ಒಟ್ಟು 4ದಿನಗಳ ಕಾಲ ಆಚರಿಸಲಾಗುತ್ತಿದ್ದು, ಈ ಸಂಬಂಧ ಸರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

ದಸರಾ ಮಹೋತ್ಸವದ ಹಿನ್ನಲೆಯಲ್ಲಿ ಕೈಗೊಳ್ಳಲಾಗಿರುವ ಪೂರ್ವ ಸಿದ್ದತೆಗಳ ಸಂಬಂಧ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು

ಅಧಿಕಾರಿಗಳ ಸಭೆ ನಡೆಸಿ ವಿವಿಧ ಸಮಿತಿಗಳಿಗೆ ಸಂಬಂಧಪಟ್ಟಂತೆ ಅಧಿಕಾರಿಗಳಿಗೆ ವಹಿಸಲಾಗಿರುವ ಕಾರ್ಯಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ.

ದಸರಾ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿರುವ ದೀಪಾಲಂಕಾರ ನಿರ್ವಹಣೆ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿ ಈ ನಿಟ್ಟಿನಲ್ಲಿ ಈಗಾಗಲೇ ಸೂಚಿಸಲಾಗಿರುವ ಪ್ರಮುಖ ವೃತ್ತಗಳು, ದೇವಾಲಯ, ರಸ್ತೆ, ಇನ್ನಿತರ ಕಡೆ ಸೂಕ್ತ ದೀಪಾಲಂಕಾರ ವ್ಯವಸ್ಥೆಗೆ ಅಗತ್ಯ ಕ್ರಮ ವಹಿಸುವಂತೆ ತಿಳಿಸಿದರಲ್ಲದೆ, ಚಾಮರಾಜೇಶ್ವರ ಸ್ವಾಮಿ ದೇವಸ್ಥಾನ ಮುಂಭಾಗದ ಮುಖ್ಯ ವೇದಿಕೆ, ವರನಟ ಡಾ. ರಾಜ್ ಕುಮಾರ್ ಜಿಲ್ಲಾ ರಂಗಮಂದಿರ, ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ನಾಲ್ಕು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಾಡು ಮಾಡುವ ಸಂಬಂಧ ಸಿದ್ದತೆಗಳನ್ನು ಪೂರ್ಣಗೊಳಿಸಬೇಕೆಂದು ಸೂಚಿಸಿದರು.

ವೇದಿಕೆ ನಿರ್ಮಾಣ, ಶಾಮಿಯಾನ, ಧ್ವನಿ ಬೆಳಕು ವ್ಯವಸ್ಥೆಗೆ ಅಗತ್ಯ ಕ್ರಮಗಳನ್ನು ಆರಂಭಿಸಬೇಕು. ಮಳೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕಿದೆ. ವೇದಿಕೆ ಅಲಂಕಾರ, ಆಸನಗಳ ವ್ಯವಸ್ಥೆ ಸೇರಿದಂತೆ ಇತರೆ ಕಾರ್ಯಗಳು ಸುಸೂತ್ರವಾಗಿ ಕೈಗೊಳ್ಳಬೇಕು. ಸ್ವಚ್ಚತೆಗೆ ವಿಶೇಷ ಆದ್ಯತೆ ನೀಡಬೇಕಿದೆ. ವಾಹನಗಳ ನಿಲುಗಡೆಗೆ, ಸಂಚಾರ ನಿಯಂತ್ರಣಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ರೈತ ದಸರಾ, ಮಹಿಳಾ ದಸರಾ, ಮ್ಯಾರಥಾನ್, ಪಾರಂಪರಿಕ ನಡಿಗೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳ ಸಂಬಂಧ ಕೈಗೊಳ್ಳಬೇಕಿರುವ ವ್ಯವಸ್ಥೆಗಳ ಬಗ್ಗೆ ಸಿದ್ದತೆ ಆರಂಭಿಸಬೇಕೆಂದು ಅಧಿಕಾರಿಗಳಿಗೆ ತಿಳಿಸಿದರಲ್ಲದೆ, ದಸರಾ ಮಹೋತ್ಸವದ ವಿಶೇಷ ಪೂಜಾ ಕೈಂಕರ್ಯ, ಕಲಾವಿದರಿಗೆ ಉಪಹಾರ ಸೇರಿದಂತೆ ದಸರಾ ಏರ್ಪಾಡು ಸಂಬಂಧ ಈ ಹಿಂದೆಯೇ ಸೂಚಿಸಲಾಗಿರುವಂತೆ ಎಲ್ಲಾ ಸಿದ್ದತೆಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ಸೂಚನೆ ನೀಡಿದರು.

ಜಿಪಂ ಸಿಇಓ ಕೆ.ಎಂ. ಗಾಯಿತ್ರಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಮಲ್ಲಿಕಾರ್ಜುನ್, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಇಬ್ರಾಹಿಂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಕೆಯ ಉಪನಿರ್ದೇಶಕರಾದ ಗೀತಾಲಕ್ಷ್ಮಿ, ಜಂಟಿ ಕೃಷಿ ನಿರ್ದೇಶಕರಾದ ಮಧುಸೂದನ್, ಕೈಗಾರಿಕಾ ಇಲಾಖೆಯ ಅಧಿಕಾರಿ ರಾಜೇಂದ್ರಪ್ರಸಾದ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದು ಮಾಹಿತಿ ನೀಡಿದರು.


Spread the love

Leave a Reply

Please enter your comment!
Please enter your name here