ಚಾಮರಾಜನಗರದ ಕಲ್ಲು ಗಣಿಗಾರಿಕೆಯಲ್ಲಿ ದುರಂತ: ಮೂವರು ಸಾವು

Spread the love

ಚಾಮರಾಜನಗರದ ಕಲ್ಲು ಗಣಿಗಾರಿಕೆಯಲ್ಲಿ ದುರಂತ: ಮೂವರು ಸಾವು

ಚಾಮರಾಜನಗರ: ಕಲ್ಲುಗಣಿಗಾರಿಕೆ ದುರಂತ ಮತ್ತೆ ಚಾಮರಾಜನಗರದಲ್ಲಿ ಮರುಕಳಿಸಿದೆ. ಜಿಲ್ಲೆಯ ಗುಂಡ್ಲುಪೇಟೆಯ ಮಡಹಳ್ಳಿಯ ಗುಮ್ಮಕಲ್ಲುಗುಡ್ಡದ ಕಲ್ಲು ಕ್ವಾರಿಯಲ್ಲಿ ಕಳೆದ ಮಾರ್ಚ್ 4ರಂದು ಬಂಡೆ ಕುಸಿದು ಬಿಹಾರ ಮೂಲದ ಮೂವರು ಕಾರ್ಮಿಕರು ಮೃತಪಟ್ಟಿದ್ದರು. ಈ ಘಟನೆ ಮಾಸುವ ಮುನ್ನವೇ ಚಾಮರಾಜನಗರದಲ್ಲಿ ಮತ್ತೊಂದು ದುರಂತ ಸಂಭವಿಸಿದೆ.

ಇದೀಗ ಕಲ್ಲುಗಣಿಗಾರಿಕೆ ವೇಳೆ ಗುಡ್ಡ ಕುಸಿದು ಬಿದ್ದ ಪರಿಣಾಮ ಮೂವರು ದುರ್ಮರಣಕ್ಕೀಡಾದ ಘಟನೆ ಜಿಲ್ಲೆಯ ಬಿಸಲ್ವಾಡಿಯಲ್ಲಿ ನಡೆದಿದ್ದು, ಗಣಿಗಾರಿಕೆಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಕಾಗಲವಾಡಿ ಮೋಳೆ ಗ್ರಾಮದ  ಕುಮಾರ್ (28), ಶಿವರಾಜು (35) ಹಾಗೂ ಸಿದ್ದರಾಜು (27) ಮೃತಪಟ್ಟವರು.

ತಮಿಳುನಾಡು ಮೂಲದ ಭಾಸ್ಕರ್ ರವರ ಪತ್ನಿ ರೇಣುಕಾದೇವಿ ಎಂಬುವವರಿಗೆ ಸೇರಿದ ಚಾಮರಾಜನಗರ ತಾಲೂಕಿನ ಬಿಸಲವಾಡಿ ಗ್ರಾಮದ ಸರ್ವೆ ನಂಬರ್ 172ರಲ್ಲಿನ ಬಿಳಿಕಲ್ಲು ಗಣಿಗಾರಿಯಲ್ಲಿ ದುರಂತ ನಡೆದಿದೆ. ಕಲ್ಲುಗಣಿಯಲ್ಲಿ ಕಾರ್ಮಿಕರೊಬ್ಬರು ಗೋಡೆಯ ಮಧ್ಯದಲ್ಲಿ ಕಲ್ಲು ಸ್ಪೋಟಿಸಲು ಗುಳಿ ಹೊಡೆಯುತ್ತಿದ್ದರು. ಇನ್ನಿಬ್ಬರು ಕೆಳಗಡೆ ನಿಂತು ಅವರಿಗೆ ನೆರವಾಗುತ್ತಿದ್ದರು. ಈ ಸಂದರ್ಭದಲ್ಲಿ ಗುಡ್ಡ ಕುಸಿದಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಇನ್ನೊಬ್ಬರು ತೀವ್ರವಾಗಿ ಗಾಯಗೊಂಡರು. ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಅಷ್ಟರಲ್ಲಾಗಲೇ ಮೃತಪಟ್ಟಿದ್ದರು.

ಘಟನಾ ಸ್ಥಳಕ್ಕೆ ಡಿವೈಎಸ್ ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ತಹಸೀಲ್ದಾರ್ ಬಸವರಾಜು ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.


Spread the love