ಚಾಮರಾಜನಗರ ಕಾಡಂಚಿನಲ್ಲಿ ಮಾಗಳಿ ಬೇರು ದಂಧೆ!

Spread the love

ಚಾಮರಾಜನಗರ ಕಾಡಂಚಿನಲ್ಲಿ ಮಾಗಳಿ ಬೇರು ದಂಧೆ!

ಚಾಮರಾಜನಗರ: ಅರಣ್ಯ ಉತ್ಪನ್ನದಲ್ಲೊಂದಾದ ಜಿಲ್ಲೆಯ ಬಿಳಿಗಿರಿರಂಗನಬೆಟ್ಟ ಸೇರಿದಂತೆ ಕೆಲವೇ ಕೆಲವು ಕಡೆಯಲ್ಲಷ್ಟೆ ಸಿಗುವ ಮಾಗಳಿ(ಸೊಗದೆ) ಬೇರಿಗೆ ಎಲ್ಲಿಲ್ಲದ ಬೇಡಿಕೆಯಿರುವ ಕಾರಣ ಅದರ ಮಾರಾಟ ದಂಧೆಯಾಗಿ ಪರಿಣಮಿಸಿದೆ.

ಅರಣ್ಯದಲ್ಲಷ್ಟೆ ಸಿಗುವ ಮಾಗಳಿ ಬೇರು ಉಪ್ಪಿನ ಕಾಯಿ, ಪಾನೀಯ ಸೇರಿದಂತೆ ಹಲವು ರೀತಿಯಲ್ಲಿ ಉಪಯೋಗಕ್ಕೆ ಬರುತ್ತಿದ್ದು, ಮಾರುಕಟ್ಟೆಯಲ್ಲಿ ಸದಾ ಬೇಡಿಕೆಯ ಪದಾರ್ಥವಾಗು ಗಮನಸೆಳೆಯುತ್ತಿದೆ. ಅಕ್ರಮವಾಗಿ ಅರಣ್ಯ ಪ್ರವೇಶ ಮಾಡಿ ಮಾಗಳಿ ಬೇರನ್ನು ತಂದು ಮಾರಾಟ ಮಾಡುವ ದಂಧೆ ಕಾರ್ಯಾಚರಿಸುವುದು ಗುಟ್ಟಾಗಿ ಉಳಿದಿಲ್ಲ. ಅರಣ್ಯ ಇಲಾಖೆ ಮತ್ತು ಪೊಲೀಸರ ಕಣ್ಣು ತಪ್ಪಿಸಿ ಕೆಲವರು ಈ ದಂಧೆಯನ್ನು ನಡೆಸುತ್ತಿದ್ದಾರೆ.

ಈ ನಡುವೆ ಅರಣ್ಯ ಸಂಚಾರಿದಳ ಪೊಲೀಸರು ದಿಢೀರ್ ದಾಳಿ ನಡೆಸಿ ಭಾರೀ ಪ್ರಮಾಣದ ಮಾಗಳಿ ಬೇರನ್ನು ವಾಹನ ಸಹಿತ ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳು ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಅರೇಪಾಳ್ಯ ಗ್ರಾಮದಿಂದ ಕೊಳ್ಳೇಗಾಲದ ಕಡೆಗೆ ಲಕ್ಕರಸನಪಾಳ್ಯ ರಾತ್ರಿ ವೇಳೆಯಲ್ಲಿ ಅಶೋಕ್ ಲೇಲ್ಯಾಂಡ್ ಗೂಡ್ಸ್ ವಾಹನದಲ್ಲಿ ಮಾಗಳಿ ಬೇರನ್ನು ಸಾಗಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನಲೆಯಲ್ಲಿ ಸಿಐಡಿ ಪಿಎಸ್ಐ ತಂಡ ಕಾರ್ಯಾಚರಣೆ ನಡೆಸಿದ್ದು ಈ ವೇಳೆ ವಾಹನವನ್ನು ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ.

ಈ ಸಂಬಂಧ ಅರಣ್ಯ ಸಂಚಾರಿದಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಾರಿಯಾದ ಆರೋಪಿಗಳ ಬಂಧನಕ್ಕೆ ಮುಂದಾಗಿದ್ದಾರೆ.

ಕಾರ್ಯಾಚರಣೆಯಲ್ಲಿ ಸಿಐಡಿ ಸಿಬ್ಬಂದಿ ಲೊಕೇಶ್, ರಾಮಚಂದ್ರ, ಬಸವರಾಜು, ಟಕ್ಕಿವುಲ್ಲಾ, ಸ್ವಾಮಿ ಶಂಕರ್, ಕುಮಾರ ಸ್ವಾಮಿ, ಚಾಲಕ ಜಾಫರ್ ಮೊದಲಾದವರು ಪಾಲ್ಗೊಂಡಿದ್ದರು.


Spread the love