ಚಾಮುಂಡಿಬೆಟ್ಟದ ದೇಗುಲದಲ್ಲಿ ಇ-ಹುಂಡಿಯ ಉದ್ಘಾಟನೆ

Spread the love

ಚಾಮುಂಡಿಬೆಟ್ಟದ ದೇಗುಲದಲ್ಲಿ ಇ-ಹುಂಡಿಯ ಉದ್ಘಾಟನೆ

ಮೈಸೂರು: ಭಕ್ತರ ಅನುಕೂಲಕ್ಕಾಗಿ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇಗುಲದಲ್ಲಿ ಇ-ಹುಂಡಿಯನ್ನು ಅಳವಡಿಸಲಾಗಿದೆ. ಈಗಾಗಲೇ ಕರ್ನಾಟಕ ಸರ್ಕಾರ ಧಾರ್ಮಿಕ ದತ್ತಿ ಇಲಾಖೆಯು ರಾಜ್ಯದ ಬಹುತೇಕ ದೇಗುಲಗಳಲ್ಲಿ ಇ-ಹುಂಡಿ ಅಳವಡಿಸುತ್ತಿದ್ದು ಅದರಂತೆ ಚಾಮುಂಡಿಬೆಟ್ಟದಲ್ಲಿ ಇ-ಹುಂಡಿಯನ್ನು ಉದ್ಘಾಟಿಸಲಾಗಿದೆ.

ಇನ್ನು ಮುಂದೆ ದೇವಸ್ಥಾನಕ್ಕೆ ಆಗಮಿಸುವ ಭಕ್ತರು ಚಾಮುಂಡೇಶ್ವರಿ ದೇವಸ್ಥಾನದ ಕ್ಯೂ ಆರ್ ಕೋಡ್ ಬಳಸಿ ಕಾಣಿಕೆಯನ್ನು ಸಲ್ಲಿಸಬಹುದಾಗಿದೆ. ಆ ಮೂಲಕ ಚಿಲ್ಲರೆ, ನಗದು ಬದಲಿಗೆ ನೇರವಾಗಿ ಡಿಜಿಟಲ್ ಪೇಮೆಂಟ್ ಗೆ ಅವಕಾಶ ಮಾಡಿಕೊಡಲಾಗಿದೆ.

ಇ ಹುಂಡಿಯನ್ನು ಉದ್ಘಾಟನೆ ಮಾಡಿ, ಮಾತನಾಡಿದ ಅಪರ ಜಿಲ್ಲಾಧಿಕಾರಿ ಡಾ. ಬಿ.ಎಸ್. ಮಂಜುನಾಥಸ್ವಾಮಿ ಅವರು, ಧಾರ್ಮಿಕ ದತ್ತಿ ಇಲಾಖೆ, ಕರ್ನಾಟಕ ಗ್ರಾಮೀಣ ಬ್ಯಾಂಕ್ ಹಾಗೂ ಚಾಮುಂಡಿಬೆಟ್ಟ ಶಾಖೆಯ ಸಹಯೋಗದಲ್ಲಿ ಚಾಮುಂಡೇಶ್ವರಿ ದೇವಿಯ ಭಕ್ತರು, ಕಾಣಿಕೆ ಸಲ್ಲಿಕೆಯನ್ನು ಡಿಜಿಟಲ್ ಪೇಮೆಂಟ್ ಮೂಲಕವೂ ಮಾಡಲು ಅನುಕೂಲವಾಗುವಂತೆ ಕ್ಯೂಆರ್ ಕೋಡ್ ಸಹಿತ ಇ-ಹುಂಡಿಗೆ ಕಾಣಿಕೆಯನ್ನು ಹಾಕಬಹುದಾಗಿದೆ. ಭದ್ರತಾ ಕ್ರಮಗಳ ಕುರಿತಂತೆ ಬ್ಯಾಂಕ್ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ಷ್ಮ ಸುರಕ್ಷತಾ ಕ್ರಮಗಳನ್ನು ಅಳವಡಿಸಲಾಗಿದೆ. ಭಕ್ತರು ಕಾಣಿಕೆ ಸಲ್ಲಿಕೆ ವೇಳೆ ಧಾರ್ಮಿಕ ದತ್ತಿ ಇಲಾಖೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಚಾಮುಂಡಿಬೆಟ್ಟ, ಮೈಸೂರು ಈ ಪೂರ್ಣ ಹೆಸರನ್ನು ಗಮನಿಸುವಂತೆ ತಿಳಿಸಿದರಲ್ಲದೆ, ದುರುಪಯೋಗದ ಕಂಡು ಬಂದಲ್ಲಿ ಕಾನೂನು ಕ್ರಮ ಜರುಗಿಸುವುದಾಗಿಯೂ ಎಚ್ಚರಿಸಿದರು.

ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಸಿ.ಜಿ. ಕೃಷ್ಣ ಮಾತನಾಡಿ ಧಾರ್ಮಿಕ ದತ್ತಿ ಇಲಾಖೆಯಡಿ ಬರುವ ರಾಜ್ಯದ ಬಹುತೇಕ ಎ – ಗ್ರೇಡ್ ದೇವಸ್ಥಾನಗಳಲ್ಲಿ ಕ್ಯೂಆರ್ ಕೋಡ್ ಸಹಿತ’ ಇ – ಹುಂಡಿ ಸೌಲಭ್ಯವಿದ್ದು ಅದನ್ನು ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿಯೂ ಆಳಸಿಕೊಳ್ಳುವಂತೆ ಇಲಾಖೆಯಿಂದ ಸೂಚಿಸಿದ್ದು, ಅದರಂತೆ ಅಳವಡಿಸಲಾಗಿದೆ ಎಂದು ಹೇಳಿದರು.

ದೇವಸ್ಥಾನದ ಪ್ರಧಾನ ಅರ್ಚಕರಾದ ಡಾ ಶಶಿಶೇಖರ್ ದೀಕ್ಷಿತ್, ಬ್ಯಾಂಕಿನ ಮುಖ್ಯ ವ್ಯವಸ್ಥಾಪಕರಾದ ಜೀವನಮುಕ್ತ, ಚಾಮುಂಡಿಬೆಟ್ಟ ಶಾಖೆಯ ವ್ಯವಸ್ಥಾಪಕರಾದ ಸಿಂಧು ಮತ್ತು ಪ್ರಿಯಾಂತ್ ಅವರು ಇದ್ದರು.


Spread the love