ಚಾಮುಂಡಿ ಬೆಟ್ಟದ ತಾಯಿಯ ದರ್ಶನಕ್ಕೆ ಮುಗಿಬಿದ್ದ ಭಕ್ತರು!

Spread the love

ಚಾಮುಂಡಿ ಬೆಟ್ಟದ ತಾಯಿಯ ದರ್ಶನಕ್ಕೆ ಮುಗಿಬಿದ್ದ ಭಕ್ತರು!

ಮೈಸೂರು: ಕೊರೊನಾ ಕಾರಣದಿಂದ ಆಷಾಢದಲ್ಲಿ ಶುಕ್ರವಾರದಿಂದ ಭಾನುವಾರದ ವರೆಗೆ ಚಾಮುಂಡೇಶ್ವರಿ ದೇಗುಲಕ್ಕೆ ಭಕ್ತರ ಪ್ರವೇಶವನ್ನು ನಿಷೇಧಿಸಿರುವುದರಿಂದ ಸೋಮವಾರದಿಂದ ಗುರುವಾರದ ತನಕವೂ ಭಕ್ತ ಸಾಗರ ನೆರೆಯುತ್ತಿದೆ.

ಆಷಾಢದಲ್ಲಿ ಅದರಲ್ಲೂ ಶುಕ್ರವಾರ ಮತ್ತು ಮಂಗಳವಾರ ಚಾಮುಂಡಿಬೆಟ್ಟದ ಮೆಟ್ಟಿಲೇರಿ ತಾಯಿ ಚಾಮುಂಡೇಶ್ವರಿಯನ್ನು ದರ್ಶನ ಮಾಡುವುದೇ ಪರಮ ಪುಣ್ಯವಾಗಿರುವುದರಿಂದ ಭಕ್ತರು ಬೆಟ್ಟದ ತಾಯಿ ಮುಂದೆ ತಲೆಬಾಗಿ ನಮೋ ಎನ್ನುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ಆಷಾಢದ ಕಡೇ ಮಂಗಳವಾರ ವಾದ ಇಂದು ಇತರೆ ದಿನಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, ಬೆಳಿಗ್ಗೆ 5.30ರಿಂದಲೇ ದೇವಸ್ಥಾನದ ಬಳಿ ಸರತಿ ಸಾಲಿನಲ್ಲಿ ಕಾದು ನಿಂತಿದ್ದ ದೃಶ್ಯ ಕಂಡು ಬಂದಿತು.

ಮುಂಜಾನೆಯೇ ಸ್ನಾನಾದಿಗಳನ್ನು ಮಾಡಿ ಮಡಿಯನ್ನುಟ್ಟು ಬಂದ ಮಹಿಳೆಯರು, ಪುರುಷರು, ಮಕ್ಕಳು, ಪಾದದಲ್ಲಿ ಪೂಜೆ ಮಾಡಿ ತಾಯಿ ಚಾಮುಂಡೇಶ್ವರಿಯನ್ನು ಪ್ರಾರ್ಥಿಸಿ ಪ್ರತಿ ಮೆಟ್ಟಿಲಿಗೆ ಕುಂಕುಮ, ಅರಸಿನವನ್ನಿಟ್ಟರೆ, ಮತ್ತೆ ಕೆಲವರು, ಹೂವು, ಕರ್ಪೂರ ಹಚ್ಚುತ್ತಾ ಮೆಟ್ಟಿಲೇರಿದರು, ಇನ್ನು ಕೆಲವು ಭಕ್ತರು ಮಂಡಿಯಲ್ಲೇ ಮೆಟ್ಟಿಲೇರಿ ಹರಕೆ ತೀರಿಸಿದರು.

ದೇವಸ್ಥಾನದಲ್ಲಿ ತಾಯಿ ಚಾಮುಂಡೇಶ್ವರಿಯ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ನಗರ ಮತ್ತು ಸುತ್ತಮುತ್ತಲಿನ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು. ಸಾಮಾನ್ಯವಾಗಿ ಆಷಾಢದ ಶುಕ್ರವಾರ ಚಾಮುಂಡೇಶ್ವರಿಯನ್ನು ದರ್ಶನ ಪಡೆಯುವುದು ಹಿಂದಿನಿಂದಲೂ ನಡೆದು ಬಂದಿದೆ.

ಆದರೆ ಕಳೆದ ಎರಡು ವರ್ಷಗಳಿಂದ ಕೊರೊನಾ ಇನ್ನಿಲ್ಲದಂತೆ ಕಾಡುತ್ತಿರುವುದರಿಂದ ಆಷಾಢ ಶುಕ್ರವಾರ ಸೇರಿದಂತೆ ವಾರಾಂತ್ಯದ ದಿನಗಳಲ್ಲಿ ಚಾಮುಂಡಿಬೆಟ್ಟಕ್ಕೆ ಪ್ರವೇಶವನ್ನು ನಿರ್ಬಂಧಿಸುತ್ತಾ ಬರಲಾಗುತ್ತಿದೆ. ಹೀಗಾಗಿ ಶುಕ್ರವಾರ ದೇಗುಲಕ್ಕೆ ತೆರಳಲು ಸಾಧ್ಯವಾಗದ ಭಕ್ತರು ಇತರೆ ದಿನಗಳಲ್ಲಿ ಅದರಲ್ಲೂ ಮಂಗಳವಾರ ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯಕ್ಕೆ ಬರುತ್ತಿದ್ದಾರೆ.

ಚಾಮುಂಡೇಶ್ವರಿ ದೇಗುಲಕ್ಕೆ ರಸ್ತೆ ಮೂಲಕ ವಾಹನಗಳಲ್ಲಿ ತೆರಳುವವರು ಒಂದೆಡೆಯಾದರೆ, ಮೆಟ್ಟಿಲೇರಿ ಹೋಗುವವರು ಸಂಖ್ಯೆಯೂ ದೊಡ್ಡ ಮಟ್ಟದಲ್ಲಿದೆ. ಆದರೆ ಲಾಕ್ ಡೌನ್ ಸಮಯದಲ್ಲಿ ಪಾದದ ಬಳಿಯಿರುವ ದ್ವಾರವನ್ನು ಮುಚ್ಚಲಾಗಿದ್ದು ಅದನ್ನು ಇದುವರೆಗೆ ತೆರೆಯಲಾಗಿಲ್ಲ. ಹೀಗಾಗಿ ಚಾಮುಂಡಿಬೆಟ್ಟಕ್ಕೆ ಮೆಟ್ಟಿಲೇರಿ ತೆರಳುವವರು ಸಂಬಂಧಿಸಿದವರಿಗೆ ಹಿಡಿಶಾಪ ಹಾಕುತ್ತಾ ಬೇಲಿಯನ್ನು ನುಸುಳಿಕೊಂಡು ಹೋಗುವುದು ಮುಂದುವರೆದಿದೆ.

ಆಷಾಢ ಮಾಸ ಆ.8 ಭಾನುವಾರಕ್ಕೆ ಕೊನೆಯಾಗುತ್ತಿರುವುರಿಂದ ಜತೆಗೆ ಶುಕ್ರವಾರದಿಂದ ಭಾನುವಾರದ ತನಕ ಪ್ರವೇಶ ನಿಷೇಧಿಸಿರುವುದರಿಂದ ಆಷಾಢದಲ್ಲಿ ಚಾಮುಂಡೇಶ್ವರಿಯನ್ನು ದರ್ಶನ ಮಾಡಲು ಭಕ್ತರಿಗೆ ಇನ್ನು ಎರಡು ದಿನ ಮಾತ್ರ ಬಾಕಿಯಿದೆ. ಆದುದರಿಂದ ಆಷಾಢದಲ್ಲಿ ತಾಯಿ ಚಾಮುಂಡೇಶ್ವರಿಯನ್ನು ದರ್ಶನ ಮಾಡಿ ಕೃತಾರ್ಥರಾಗಲೇ ಬೇಕೆಂದು ಹರಸಿಕೊಂಡವರು ಆ ಸಲುವಾಗಿಯೇ ಆಗಮಿಸುತ್ತಿರುವುದರಿಂದ ಇದೀಗ ಸಹಜವಾಗಿಯೇ ಚಾಮುಂಡಿಬೆಟ್ಟದಲ್ಲಿ ಭಕ್ತರು ಸಂಖ್ಯೆ ಹೆಚ್ಚಾಗಿದೆ.

ಇದೆಲ್ಲದರ ನಡುವೆ ಚಾಮುಂಡಿಬೆಟ್ಟಕ್ಕೆ ಮೆಟ್ಟಿಲೇರಿ ತೆರಳುವ ಭಕ್ತರಿಗೆ ಸುಂದರ ನಿಸರ್ಗ ಮೈಪುಳಕಗೊಳಿಸುತ್ತಿದ್ದು, ಮೆಟ್ಟಿಲೇರುವಾಗಿನ ಆಯಾಸವನ್ನೆಲ್ಲ ಸುತ್ತಲಿನ ಹಸಿರ ಚೆಲುವು ತಣಿಸುತ್ತಿದೆ. ಕಣ್ಣು ಹಾಯಿಸಿದುದ್ದಕ್ಕೂ ನಿಸರ್ಗದ ಥಳಕು ದೈಹಿಕ ಆಯಾಸವನ್ನು ಹೊಡೆದೊಡಿಸಿ ಉಲ್ಲಾಸ ತುಂಬುತ್ತಿದೆ. ಒಟ್ಟಾರೆ ಆಷಾಢ ಸುಂದರ ಕ್ಷಣಗಳು ಚಾಮುಂಡಿಬೆಟ್ಟವನ್ನೇರಿದ ಭಕ್ತರ ಮನಪಟಲದಲ್ಲಿ ಅಚ್ಚೊತ್ತುವುದಂತು ನಿಜ.


Spread the love