ಚಾಮುಂಡೇಶ್ವರಿಗೆ ಯತ್ನಾಳ್ ಮೊರೆ ಹೋಗಿದ್ದೇಕೆ?

Spread the love

ಚಾಮುಂಡೇಶ್ವರಿಗೆ ಯತ್ನಾಳ್ ಮೊರೆ ಹೋಗಿದ್ದೇಕೆ?

ಮೈಸೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಮುಗಿಯಿತು ಎಂದು ಕೊಳ್ಳುತ್ತಿರುವಾಗಲೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಸಿಎಂ ಬದಲಾವಣೆ ಬಗ್ಗೆ ಮಾತನಾಡಿದಲ್ಲದೆ, ದುಷ್ಟ ಸಂಹಾರ ಮಾಡು ಅಂತ ಚಾಮುಂಡೇಶ್ವರಿಯಲ್ಲಿ ಬೇಡಿಕೊಂಡಿದ್ದೇನೆ ಎನ್ನುವ ಮೂಲಕ ಮತ್ತೆ ಕಿಡಿ ಹಚ್ಚಿದ್ದಾರೆ.

ಅನ್ ಲಾಕ್ ಹಿನ್ನಲೆಯಲ್ಲಿ ಸೋಮವಾರದಿಂದ(ಜು.5) ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಾಲಯದ ಬಾಗಿಲು ತೆರೆದಿದ್ದು ಮುಂಜಾನೆಯೇ ದೇಗುಲಕ್ಕೆ ಭೇಟಿ ನೀಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ದೇವರಿಗೆ ಪೂಜೆ ಸಲ್ಲಿಸಿ ಬಳಿಕ ಮಾತನಾಡಿದರು.

ಈ ವೇಳೆ ಅವರು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಮತ್ತು ಪುತ್ರನನ್ನು ದುಷ್ಟರಿಗೆ ಹೋಲಿಸಿ ಅವರ ಸಂಹಾರ ಮಾಡುವಂತೆ ದೇವರಲ್ಲಿ ಬೇಡಿಕೊಳ್ಳಲು ಬಂದಿರುವುದಾಗಿ ಹೇಳುವ ಮೂಲಕ ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಜಗಜ್ಜಾಹೀರು ಮಾಡಿದ್ದಾರೆ.

ರಾಜ್ಯವನ್ನು ಲೂಟಿ ಮಾಡುತ್ತಿರುವ ದುಷ್ಟರ ಸಂಹಾರ ಆಗಬೇಕು. ದುಷ್ಟರ ಸಂಹಾರ ಮಾಡು ಅಂತ ತಾಯಿ ಬಳಿ ಬೇಡಿಕೊಂಡಿದ್ದೇನೆ. ಯಾರು ಭ್ರಷ್ಟಾಚಾರದಲ್ಲಿ ತೊಡಗಿ, ರಾಜ್ಯವನ್ನು ಲೂಟಿ ಹೊಡೆಯುತ್ತಿದ್ದಾರೆಯೋ, ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೋ ಅವರೆಲ್ಲರೂ ದುಷ್ಟರು. ಅತಿ ಶೀಘ್ರ ದಲ್ಲೇ ದುಷ್ಟ ಸಂಹಾರ ಆಗುವ ವಿಶ್ವಾಸವೂ ಇದೆ. ಆದರೆ ಈ ದುಷ್ಟರೊಂದಿಗೆ ವಿಪಕ್ಷದವರು ಶಾಮೀಲಾಗಿರುವುದು ವಿಷಾದದ ಸಂಗತಿ ಎಂದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಪುತ್ರ ವಿಜಯೇಂದ್ರ ವಿರುದ್ಧ ಆಕ್ರೋಶ ಹೊರ ಹಾಕಿ ಸಿಸಿಬಿ ಏಕೆ ಸಿಎಂ ನಿವಾಸ ಕಾವೇರಿ ಹಿಂಭಾಗದ ಗೆಸ್ಟ್‌ಗೌಸ್‌ ಮೇಲೆ ಯಾಕೆ ದಾಳಿ ಮಾಡ್ತಿಲ್ಲ. ಅಲ್ಲಿಯೂ ದಾಳಿ ಮಾಡಿ ಎಂದು ಸವಾಲ್ ಹಾಕಿದರು.

ರಾಜ್ಯದಲ್ಲಿ ವಿರೋಧ ಪಕ್ಷಗಳು ಸತ್ತು ಹೋಗಿವೆ. ಹೀಗಾಗಿ ಯಡಿಯೂರಪ್ಪ ವಿರುದ್ಧ ಮಾತಾನಾಡುತ್ತಿಲ್ಲ ಎಂದರಲ್ಲದೆ, ದಕ್ಷಿಣೆ ಕಾಸಿಗೆ ಆಸೆ ಬಿದ್ದು ಕೆಲ ಮಠಾಧೀಶರು ಸಿಎಂ ಪರ ಮಾತನಾಡುತ್ತಿದ್ದಾರೆ ಎಂದು ಹರಿಹಾಯ್ದರು.

ಸಿಎಂ ಬಿಎಸ್‍ವೈ ಕುಟುಂಬದಿಂದ ಲಿಂಗಾಯತ ಸಮಾಜಕ್ಕೆ ಕೆಟ್ಟ ಹೆಸರು ಬಂದಿದೆ. ಇದರ ಬಗ್ಗೆ ಮಾತನಾಡುವ ಬದಲು ಭ್ರಷ್ಟರ ಪರವಾಗಿ ಮಠಾಧೀಶರು ಮಾತನಾಡುತ್ತಿದ್ದಾರೆ. ರಾಜಕೀಯ ಹುಚ್ಚು ಇದ್ದರೆ ಖಾವಿ ತೆಗೆದು ಖಾದಿ ಧರಿಸಿ ಬನ್ನಿ ಎಂದು ಮಠಾಧೀಶರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಲಿಂಗಾಯತ ಸಮುದಾಯದಲ್ಲಿ ಯಾವುದೇ ನಾಯಕನನ್ನು ಬೆಳೆಯಲು ಬಿಡುತ್ತಿಲ್ಲ. ಹೀಗಾಗಿಯೇ ರಮೇಶ್ ಜಾರಕಿಹೊಳಿ ಕೇಸ್‍ನಲ್ಲಿ ಬಿ ರಿಪೋರ್ಟ್ ಹಾಕುವ ಅವಕಾಶ ಇದ್ದರೂ ಬಿಡದೆ ಬ್ಲಾಕ್‍ಮೇಲ್ ಮಾಡಲಾಗುತ್ತಿದೆ. ಇನ್ನೊಂದೆಡೆ ವಾಲ್ಮೀಕಿ ಸಮುದಾಯದ ನಾಯಕತ್ವ ಮುಗಿಸುವ ಹುನ್ನಾರ ನಡೆದಿದೆ. ಸಚಿವ ಕೆ.ಎಸ್.ಈಶ್ವರಪ್ಪ ಖಾತೆಗೆ ಸಂಬಂಧಪಟ್ಟ ಎರಡು ಸಾವಿರ ಕೋಟಿ ಕಾಮಗಾರಿಯನ್ನು ಮುಖ್ಯಮಂತ್ರಿ ತಮ್ಮ ಬೀಗನಿಗೆ ಕೊಡಿಸಿಕೊಂಡರು. ಹೀಗೆ ಲಿಂಗಾಯತ, ಕುರುಬ, ನಾಯಕ ಎಲ್ಲ ನಾಯಕರನ್ನು ಹಣಿಯಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.


Spread the love