ಚಾರ್ಮಾಡಿ ಘಾಟಿ ಯಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲು ಶಾಸಕ ಹರೀಶ್ ಕುಮಾರ್ ಆಗ್ರಹ

Spread the love

ಚಾರ್ಮಾಡಿ ಘಾಟಿ ಯಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲು ಶಾಸಕ ಹರೀಶ್ ಕುಮಾರ್ ಆಗ್ರಹ

ಮಂಗಳೂರು: ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ಅವಕಾಶ ನೀಡಬೇಕು ಎಂದು ವಿಧಾನ ಪರಿಷತ್ ಶಾಸಕ ಹಾಗೂ ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಹರೀಶ್ ಕುಮಾರ್ ಸೋಮವಾರ ದ.ಕ. ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.

“ಚಾರ್ಮಾಡಿ ಘಾಟಿ ರಸ್ತೆ ದಕ್ಷಿಣ ಕನ್ನಡ ಜಿಲ್ಲೆಯ ಜನರ ಜೀವನಾಡಿಯಾಗಿದೆ. ಈ ಹಿಂದೆ ರಸ್ತೆಯು ಮಳೆಗಾಲದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಗುಡ್ಡ ಕುಸಿತ ಮತ್ತು ರಸ್ತೆ ಕುಸಿತದಿಂದ ಹಾನಿಗೊಳಗಾಗಿದ್ದ ಕಾರಣ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ಪ್ರಸ್ತುತ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅನುಮತಿ ನೀಡಲಾಗಿದೆ. ಸದ್ಯ ಈ ರಸ್ತೆಯು ನವೀಕರಣಗೊಂಡು ರಸ್ತೆಗಳು ಸುರಕ್ಷಿತವಾಗಿದ್ದರೂ ಭಾರಿ ವಾಹನಗಳ ಸಂಚಾರಕ್ಕೆ ಜಿಲ್ಲಾಡಳಿತ ಅವಕಾಶ ನೀಡಿರುವುದಿಲ್ಲ. ಆದುದರಿಂದ ಈ ಮಾರ್ಗವಾಗಿ ಬರುತ್ತ್ತಿದ್ದ ಹಣ್ಣು, ತರಕಾರಿ, ಆಹಾರ ಸಾಮಾಗ್ರಿಗಳು ಮತ್ತು ಜೀವನೋಪಯೋಗಿ ವಸ್ತುಗಳುಸರಿಯಾದ ರೀತಿಯಲ್ಲಿ ಸರಿಯಾದ ಸಮಯಕ್ಕೆ ಸರಬರಾಜು ಆಗದೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿ ಶ್ರೀಸಾಮಾನ್ಯರ ಜೀವನ ನಿರ್ವಹಣೆ ತುಂಬಾ ಕಷ್ಟಕರವಾಗಿದೆ” ಎಂದು ತಿಳಿಸಿದ್ದಾರೆ.

“10 ಟನ್ ಸಾಮಾರ್ಥ್ಯವುಳ್ಳ 6 ಚಕ್ರ ಹೊಂದಿರುವ ಸರಕು ಸಾಗಾಣೆ ವಾಹನಗಳಿಗೆ ಹಾಗೂ ಕೆಎಸ್ಸಾರ್ಟಿಸಿ ಬಸ್ಗಳಿಗೆ ಈ ಮಾರ್ಗದಲ್ಲಿ ಸಂಚಾರ ಮಾಡಲು ಬಹು ಜನರ ಬೇಡಿಕೆಯಂತೆ ಅವಕಾಶ ನೀಡಬೇಕೆಂದು” ಹರೀಶ್ ಕುಮಾರ್ ರವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.


Spread the love