ಚಿಕ್ಕಮಗಳೂರಿನ ಬೆಟ್ಟಗಳಿಗೆ ಜೀವ ತುಂಬಿದ ಕುರುಂಜಿ

Spread the love

ಚಿಕ್ಕಮಗಳೂರಿನ ಬೆಟ್ಟಗಳಿಗೆ ಜೀವ ತುಂಬಿದ ಕುರುಂಜಿ

ಪಶ್ಚಿಮಘಟ್ಟ ಪ್ರದೇಶದ ಬೆಟ್ಟಗಳಲ್ಲಿ ಒಂದಲ್ಲ ಒಂದು ಕಡೆ ಕುರುಂಜಿ ಹೂ ಬಿಟ್ಟು ಇಡೀ ಬೆಟ್ಟಗಳನ್ನು ನೀಲಮಯವಾಗಿಸುವುದು ಹನ್ನೆರಡು ವರ್ಷಕ್ಕೊಮ್ಮೆ ನಡೆಯುತ್ತಲೇ ಇರುತ್ತದೆ.

ಕಳೆದ ಬಾರಿ ಕೊಡಗಿನ ಬೆಟ್ಟಗಳಲ್ಲಿ ಕುರುಂಜಿ ಹೂ ಬಿಟ್ಟಿತ್ತು. ಈ ಬಾರಿ ಚಿಕ್ಕಮಗಳೂರಿನ ಕೆಲವು ಬೆಟ್ಟಪ್ರದೇಶಗಳಲ್ಲಿ ಕುರುಂಜಿ ಹೂ ಬಿಟ್ಟು ಇಡೀ ಬೆಟ್ಟವನ್ನೇ ನೀಲಮಯವಾಗಿಸಿ ಎಲ್ಲರನ್ನು ಆಕರ್ಷಿಸುತ್ತಿದೆ. ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತದ ಸಾಲು. ಮುಳ್ಳಯ್ಯನಗಿರಿ, ಮಲ್ಲಂದೂರಿನ ಬೆಟ್ಟಗಳಲ್ಲಿದ್ದ ಕುರುಂಜಿ ಗಿಡಗಳಲ್ಲಿ ಹೂಗಳು ಅರಳಿದ್ದು ನಿಸರ್ಗ ಪ್ರೇಮಿಗಳನ್ನು ಸೆಳೆಯುತ್ತಿದೆ.

ಹಾಗೆನೋಡಿದರೆ ಕುರುಂಜಿ ಗಿಡಗಳು ಪಶ್ಚಿಮಘಟ್ಟದ ಬೆಟ್ಟಗಳಲ್ಲಿ ಹೇರಳವಾಗಿ ಬೆಳೆಯುತ್ತವೆ ಇವುಗಳಲ್ಲಿ ಪ್ರತ್ಯೇಕ ತಳಿಗಳಿದ್ದು, ಬೆಟ್ಟಗಳಲ್ಲಿ ಬೆಳೆಯುವ ಗಿಡಗಳು ದಷ್ಠಪುಷ್ಠವಾಗಿರುತ್ತವೆ. ಇನ್ನು ತೋಟಗಳಲ್ಲಿಯೂ ಅದರಲ್ಲೂ ಮಳೆ ಹೆಚ್ಚು ಪ್ರದೇಶಗಳಲ್ಲಿನ ಕಾಫಿ ಏಲಕ್ಕಿ ತೋಟಗಳಲ್ಲಿಯೂ ಇವು ಹುಲುಸಾಗಿ ಬೆಳೆಯುತ್ತವೆ.

ಸುಮಾರು ಎರಡರಿಂದ ಏಳು ಅಡಿಗಿಂತಲೂ ಹೆಚ್ಚು ಎತ್ತರಕ್ಕೆ ಬೆಳೆಯುತ್ತವೆ. ಇದರಲ್ಲಿ ಸುಮಾರು 59ಕ್ಕೂ ಹೆಚ್ಚಿನ ತಳಿಗಳಿವೆ ಎಂದು ಹೇಳಲಾಗಿದೆ. ಒತ್ತೊತ್ತಾಗಿ ಪೊದೆಯಾಗಿ ಬೆಳೆಯುವ ಇವು ನೀರಿನಾಶ್ರಯವಿಲ್ಲದ ಗಿರಿಶ್ರೇಣಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇದು ತೆಳು ನೀಲಿ ಮಿಶ್ರಿತ ನೇರಳೆ ಬಣ್ಣದ ಹೂ ಗಿಡದ ಮೇಲಿನಿಂದ ಕೆಳಗಿನವರೆಗೂ ಹೂ ಬಿಡುತ್ತದೆ. Acanthaceae ಸಸ್ಯ ಜಾತಿಗೆ ಸೇರಿದ ಇದರ ವೈಜ್ಞಾನಿಕ ಹೆಸರು Strobilanthes kunthiana.

ಕೇರಳ ಹಾಗೂ ತಮಿಳುನಾಡಿನ ನಡುವಿನ ಪಶ್ಚಿಮ ಘಟ್ಟದ ಗುಡ್ಡಗಳಲ್ಲಿ ವಾಸಿಸುವ ತೋಡಾ ಹಾಗೂ ಮುದ್ದಾ ಜನಾಂಗವು ಈ ಹೂವನ್ನು ದೇವಪುಷ್ಪವೆಂದು ಪೂಜಿಸುತ್ತಾರಂತೆ. ತಮಿಳುನಾಡಿನಲ್ಲಿಯೂ ಕುರುಂಜಿ ಹೂ ಆರಾಧ್ಯಪುಷ್ಪವಾಗಿದೆ. ಕಳೆದ ಒಂದೂವರೆ ದಶಕಗಳ ಹಿಂದೆಯೇ ಅಂಚೆ ಇಲಾಖೆ ಹದಿನೈದು ರೂಪಾಯಿಯ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿ ಸ್ಥಾನ ನೀಡಿತ್ತು. ಹನ್ನೆರಡು ವರ್ಷಗಳಿಗೊಮ್ಮೆ ಹೂ ಬಿಡುವ ಕುರುಂಜಿ ಗಿಡ ಬಳಿಕ ಸಾಯುತ್ತದೆ. ಆ ನಂತರ ಗಿಡಗಳು ಮತ್ತೆ ಹುಟ್ಟಿ ಬೆಳೆಯುವುದು ಪ್ರಕೃತಿ ನಿಯಮವಾಗಿದೆ.


Spread the love

Leave a Reply

Please enter your comment!
Please enter your name here