ಚಿಕ್ಕಲ್ಲೂರಿನ ಜಾತ್ರಾ ಮಹೋತ್ಸವ ಸಿದ್ದತೆಗೆ ಕ್ರಮ: ಡಿಸಿ ಡಿ.ಎಸ್. ರಮೇಶ್ 

Spread the love

ಚಿಕ್ಕಲ್ಲೂರಿನ ಜಾತ್ರಾ ಮಹೋತ್ಸವ ಸಿದ್ದತೆಗೆ ಕ್ರಮ: ಡಿಸಿ ಡಿ.ಎಸ್. ರಮೇಶ್ 

ಚಾಮರಾಜನಗರ: ಜನವರಿ 6ರಿಂದ 10 ರವರೆಗೆ ನಡೆಯಲಿರುವ ಕೊಳ್ಳೇಗಾಲ ತಾಲೂಕಿನ ಶ್ರೀ ಕ್ಷೇತ್ರ ಚಿಕ್ಕಲ್ಲೂರಿನ ಜಾತ್ರಾ ಮಹೋತ್ಸವಕ್ಕೆ ಅಗತ್ಯವಿರುವ ಎಲ್ಲ ಸಿದ್ದತೆಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದೆಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ತಿಳಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಚಿಕ್ಕಲ್ಲೂರು ಜಾತ್ರಾ ಮಹೋತ್ಸವ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಜಾತ್ರೆ ಭಕ್ತರ ಭಾವನೆಗಳಿಗೆ ಸಂಬಂಧಿಸಿದ್ದು, ಎಂದಿನಂತೆ ಸಾಂಪ್ರದಾಯಿಕ ಪರಂಪರೆ ಅನುಸಾರವಾಗಿ ಜಾತ್ರೆ ನಡೆಸಿಕೊಂಡು ಹೋಗಬೇಕಿದೆ. ಈ ನಿಟ್ಟಿನಲ್ಲಿ ಎಲ್ಲ ಸಿದ್ಧತೆಗಳನ್ನು ಮಾಡಲಾಗುತ್ತದೆ. ಮೂಲಸೌಕರ್ಯ, ಕುಡಿಯುವ ನೀರು, ಬಸ್, ಸುಗಮ ಸಂಚಾರ ಸೇರಿದಂತೆ ಭಕ್ತಾಧಿಗಳಿಗೆ ಅಗತ್ಯವಿರುವ ಇನ್ನಿತರ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗುತ್ತದೆ.

ಪರಂಪರೆ ಪ್ರಕಾರ ಜಾತ್ರಾ ಮಹೋತ್ಸವಕ್ಕೆ ಭಕ್ತಾಧಿಗಳು ಆಗಮಿಸಲಿದ್ದು, ಎಲ್ಲ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಸಭೆಯಲ್ಲಿ ಮುಖಂಡರು, ಭಕ್ತಾಧಿಗಳು ಸೇರಿದಂತೆ ಸರ್ವರಿಂದ ಜಾತ್ರಾ ಸಂಬಂಧ ವ್ಯಕ್ತವಾಗಿರುವ ಅಭಿಪ್ರಾಯ ಸಲಹೆಗಳನ್ನು ಆಲಿಸಲಾಗಿದೆ. ಜಾತ್ರೆಗೆ ಬೇಕಿರುವ ಎಲ್ಲ ಸಿದ್ಧತೆಗಳನ್ನು ಮಾಡಲಾಗುತ್ತದೆ. ಅಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸಿ ಅಗತ್ಯ ಸೂಚನೆಗಳನ್ನು ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.

ಸಭೆಯಲ್ಲಿ ಭಾಗವಹಿಸಿದ್ದ ಸರ್ವ ಮುಖಂಡರು ಭಕ್ತಾಧಿಗಳು ಮಠಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ಭಿನ್ನಾಬಿಪ್ರಾಯಗಳಿಂದ ಜಾತ್ರಾ ಪರಂಪರೆ ಆಚರಣೆಗೆ ಯಾವುದೇ ಅಡ್ಡಿಯಾಗಬಾರದೆಂದು ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯವರು ಮಾತನಾಡಿ ಈ ಕುರಿತು ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಜಾತ್ರೆಗೆ ಯಾವುದೇ ತೊಂದರೆಯಾಗದಂತೆ ಎಲ್ಲ ಕ್ರಮ ವಹಿಸಲಾಗುತ್ತದೆ. ಎಂದಿನಂತೆ ಜಾತ್ರೆ ನಡೆಯಲು ಎಲ್ಲ ವ್ಯವಸ್ಥೆ ಕೈಗೊಳ್ಳಲಾಗುತ್ತದೆ ಎಂದರು.

ಭಕ್ತರ ಭಾವನೆಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಜಾತ್ರೆ ನಡೆಸಿಕೊಂಡು ಹೋಗಬೇಕಿದೆ. ಹೆಚ್ಚಿನ ಜನರು ಜಾತ್ರೆಗೆ ಆಗಮಿಸುವ ಹಿನ್ನೆಲೆಯಲ್ಲಿ ಶಿಸ್ತುಬದ್ದವಾಗಿ ಹಲವು ವ್ಯವಸ್ಥೆಗಳನ್ನು ಮಾಡಬೇಕಿದೆ. ಇದಕ್ಕಾಗಿ ವಿವರವಾಗಿ ಚರ್ಚೆ ನಡೆಸಿ ಎಲ್ಲ ಸಿದ್ದತೆಗಳನ್ನು ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಹೇಳಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ. ಶಿವಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರ್‌ರಾಜ್, ಉಪವಿಭಾಗಾಧಿಕಾರಿ ಗೀತಾ ಹುಡೇದ, ಮಠದ ಜ್ಞಾನನಂದ ಚೆನ್ನರಾಜೇ ಅರಸ್, ಬಿ.ಪಿ. ಭರತರಾಜೇ ಅರಸ್, ಸಾಹಿತಿ, ಮುಖಂಡರಾದ ಮಹದೇವ ಶಂಕನಪುರ, ಉಗ್ರನರಸಿಂಹೇಗೌಡ, ಸೋಮಶೇಖರ್, ರಾಜೇಂದ್ರ, ವೆಂಕಟರಮಣಪಾಪು, ರಾಜಶೇಖರಮೂರ್ತಿ, ಕೆ.ಎಂ. ನಾಗರಾಜು, ಅಣಗಳ್ಳಿ ಬಸವರಾಜು, ಬ್ಯಾಡಮೂಡ್ಲು ಬಸವಣ್ಣ, ಕಂದಹಳ್ಳಿ ನಾರಾಯಣ, ಇತರರು, ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.


Spread the love