
ಚಿನ್ನದ ಮೇಲೆ ಸಾಲ ಪಡೆಯುವವರ ಸಂಖ್ಯೆ ಶೇ. 77 ಹೆಚ್ಚಳ, ಇದೇನಾ ಅಚ್ಚೇ ದಿನ್ – ಅನಿತಾ ಡಿಸೋಜಾ
ಕಾರ್ಕಳ: ಒಂದೇ ವರ್ಷದಲ್ಲಿ ಚಿನ್ನದ ಮೇಲೆ ಸಾಲ ಪಡೆಯುವವರ ಸಂಖ್ಯೆ ಶೇ 77 ರಷ್ಟು ಹೆಚ್ಚಳ ಆಗಿರುವುದು ಮೋದಿ ಸರಕಾರದ ಅಚ್ಚೇ ದಿನ್ ಇದೇನಾ ಎಂದು ಕಾರ್ಕಳ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾ ಡಿಸೋಜಾ ಬೆಳ್ಮಣ್ ಪ್ರಶ್ನಿಸಿದ್ದಾರೆ.
2020 ಜುಲೈನಿಂದ 2021 ರ ಜುಲೈ ಅವಧಿಯಲ್ಲಿ ಶೇಕಡ 77ರಷ್ಟು ಚಿನ್ನದ ಮೇಲಿನ ಸಾಲವು ಹೆಚ್ಚಳ ಕಂಡಿದ್ದು 27.223 ಕೋಟಿ ರೂಗಳಿದ್ದ ಸಾಲವು 64.412 ಕೋಟಿ ರೂ ಏರಿಕೆ ಕಂಡಿದೆ. ಅದರ ಜೊತೆ ಭಾರತೀಯರ ಉದ್ಯೋಗ ನಷ್ಟದ ಪ್ರಮಾಣವೂ ಹೆಚ್ಚುತ್ತಾ ಹೋಗುತ್ತಿದೆ ಇದೆಲ್ಲಾ ಕೋವಿಡ್ ಹಿನ್ನೆಲೆಯಲ್ಲಿ ಜಾರಿಗೊಳಿಸಲಾದ ರಾಷ್ಟ್ರವ್ಯಾಪಿ ಲಾಕ್ ಡೌನ್ ನಿಂದಾದ ಪರಿಣಾಮವಾಗಿದೆ.
ಸಣ್ಣ ವ್ಯಾಪಾರಿಗಳ ಬಳಿ, ಸಣ್ಣ ಕೈಗಾರಿಕೆಗಳಲ್ಲಿ, ಖಾಸಗಿ ಬಸ್ಸು ಮತ್ತು ವಾಹನಗಳಲ್ಲಿ ದುಡಿಯುತ್ತಿದ್ದ ಯುವಕರು ಯುವತಿಯರು ಉದ್ಯೋಗ ಕಳೆದುಕೊಂಡಿದ್ದಾರೆ. ಸ್ವಸಹಾಯ ಸಂಘದ ಸದಸ್ಯರು ತಮ್ಮ ಉದ್ಯೋಗವನ್ನು ನಂಬಿ ಮಾಡಿದ ಸಾಲಗಳನ್ನು ಕಟ್ಟಲಾಗದೆ ಅಸಹಾಯಕ ಪರಿಸ್ಥಿತಿಯಲ್ಲಿ ಇದ್ದಾರೆ ಅದರ ನಡುವೆ ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ವಾರಾಂತ್ಯದ ಲಾಕ್ ಡೌನ್ ಹಾಕಿರುವುದರಿಂದ ಎಲೆಕ್ಟ್ರಾನಿಕ್ಸ್ ಬಟ್ಟೆ ಅಂಗಡಿ ಚಪ್ಪಲಿ ಅಂಗಡಿಯಲ್ಲಿ ಮುಂತಾದ ಸಣ್ಣಪುಟ್ಟ ಅಂಗಡಿಗಳಲ್ಲಿ ತಿಂಗಳಿಗೆ 15 ದಿವಸದ ಕೆಲಸವನ್ನು ಮಾಡಿಕೊಂಡು ತುಂಬಾ ಕಷ್ಟದ ಜೀವನ ನಡೆಸುತ್ತಿದ್ದವರಿಗೆ ಇನ್ನಷ್ಟು ತೊಂದರೆಯಾಗಿದೆ. ಮಾಡಿರುವ ಸಾಲವನ್ನು ಕಟ್ಟಲಾಗದೆ ಇದ್ದ ಉದ್ಯೋಗವನ್ನು ಕಳೆದುಕೊಂಡ ಜನರು ಅನಿವಾರ್ಯವಾಗಿ ಚಿನ್ನದ ಮೇಲೆ ಸಾಲ ಮಾಡುವ ಪರಿಸ್ಥಿತಿಗೆ ಬಂದು ನಿಂತಿದ್ದಾರೆ
ಇನ್ನು ಮುಂದೆ ಈಗಾಗಲೇ ವರದಿ ಆಗಿರುವುದಕ್ಕಿಂತಲೂ ಚಿನ್ನದ ಮೇಲಿನ ಸಾಲ ಹೆಚ್ಚಾಗಲೂಬಹುದು ದೇಶದ ಚಿತ್ರಣವನ್ನೇ ಬದಲಿಸುತ್ತೇನೆ ಎಂದು ಅಧಿಕಾರ ಹಿಡಿದ ಬಿಜೆಪಿಯವರು ದೇಶದ ಚಿತ್ರಣವನ್ನು ಹೇಗೆ ಬದಲಾಯಿಸುತ್ತಿದ್ದಾರೆ ಎಂಬುದು ಜನರಿಗೆ ನಿಧಾನವಾಗಿ ಮನವರಿಕೆಯಾಗುತ್ತಿದೆ. ಸಂಘಪರಿವಾರದ ಅಣತಿಯಂತೆ ಕೆಲಸ ಮಾಡುವ ಬಿಜೆಪಿಯವರು ಜನರ ಆರ್ಥಿಕ ಪರಿಸ್ಥಿತಿ ಕುಗ್ಗಿಸಿ ದ್ವನಿ ಎತ್ತದಂತೆ ಮಾಡಿ ತನ್ನ ಗುಪ್ತ ಕಾರ್ಯಸೂಚಿಯನ್ನು ಜಾರಿಗೊಳಿಸಲು ಹುನ್ನಾರ ನಡೆಸುತ್ತಿದೆಯೋ ಎಂಬ ಸಂಶಯ ಮೂಡುತ್ತಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ