ಚಿನ್ನಬೆಳ್ಳಿ ವರ್ತಕನಿಗೆ ಬೆದರಿಕೆ: ಅಜ್ಜಂಪುರ ಠಾಣೆಯ ಇನ್‌ಸ್ಪೆಕ್ಟರ್‌ ಲಿಂಗರಾಜು ಸಹಿತ ಪೊಲೀಸರ ಅಮಾನತು

Spread the love

ಚಿನ್ನಬೆಳ್ಳಿ ವರ್ತಕನಿಗೆ ಬೆದರಿಕೆ: ಅಜ್ಜಂಪುರ ಠಾಣೆಯ ಇನ್‌ಸ್ಪೆಕ್ಟರ್‌ ಲಿಂಗರಾಜು ಸಹಿತ ಪೊಲೀಸರ ಅಮಾನತು
 

ಚಿಕ್ಕಮಗಳೂರು: ವರ್ತಕನಿಗೆ ಬೆದರಿಕೆ ಹಾಕಿ ಸುಲಿಗೆ ಮಾಡಿರುವ ಆರೋಪದ ಪ್ರಕರಣದಲ್ಲಿ ಅಜ್ಜಂಪುರ ಠಾಣೆಯ ಇನ್‌ಸ್ಪೆಕ್ಟರ್‌ ಲಿಂಗರಾಜು, ಕಾನ್‌ಸ್ಟೆಬಲ್‌ಗಳಾದ ಸಖರಾಯಪಟ್ಟಣ ಠಾಣೆಯ ಧನಪಾಲ್‌ ನಾಯ್ಕ್‌, ಕುದುರೆಮುಖ ಠಾಣೆಯ ಓಂಕಾರಮೂರ್ತಿ, ಲಿಂಗದಹಳ್ಳಿ ಠಾಣೆಯ ಶರತ್‌ರಾಜ್‌ ಅವರನ್ನು ಅಮಾನತುಗೊಳಿಸಲಾಗಿದೆ.

ನಾಲ್ವರ ವಿರುದ್ಧ ಅಜ್ಜಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐಪಿಸಿ 392 (ಸುಲಿಗೆ), 34 (ಅಪರಾಧ ಸಂಚು) ಪ್ರಕರಣ ದಾಖಲಿಸಲಾಗಿದೆ.

ದಾವಣಗೆರೆಯ ಚಿನ್ನಬೆಳ್ಳಿ ವ್ಯಾಪಾರಿ ಭಗವಾನ್‌ ಸಂಕ್ಲ ಅವರು ಇದೇ 17ರಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ. ಕೃತ್ಯ ನಡೆದಿದ್ದು ಮೇ 11ರಂದು ಎಂದು ತಿಳಿಸಿದ್ದಾರೆ. ಇನ್‌ಸ್ಪೆಕ್ಟರ್ ಮತ್ತು ಮೂವರು ಪೊಲೀಸರು ಹಣ ಸುಲಿಗೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ದೂರಿನಲ್ಲಿ ಏನಿದೆ?: ಮೇ 11ರಂದು ಚಿಕ್ಕಮಗಳೂರು, ಬೇಲೂರಿನ ಅಂಗಡಿಗಳಿಗೆ ಆಭರಣ ತಲುಪಿಸಲು ದಾವಣಗರೆಯಿಂದ ಕಾರಿನಲ್ಲಿ ಸಾಗುವಾಗ ಬುಕ್ಕಾಂಬುಧಿ ಸಮೀಪ ಟೋಲ್‌ ಗೇಟ್‌ ಸನಿಹ ಇಬ್ಬರು ತಡೆದರು. ಕಾರಿನೊಳಗೆ ಕುಳಿತರು. ಇನ್‌ಸ್ಪೆಕ್ಟರ್‌ ಜೀಪು ಇದ್ದಲ್ಲಿಗೆ ಕರೆದೊಯ್ದರು. ಇನ್‌ಸ್ಪೆಕ್ಟರ್‌ ಲಿಂಗರಾಜು ಕಾರಿನೊಳಗೆ ಕುಳಿತರು. ಮೊಬೈಲ್‌ ಫೋನ್‌ ಕಿತ್ತುಕೊಂಡರು, ಕಾರಿನಲ್ಲಿ ಏನಿದೆ ವಿಚಾರಿಸಿದರು.

ಬಂಗಾರದ ಆಭರಣ ಇದೆ, ಬೇಲೂರು, ಚಿಕ್ಕಮಗಳೂರು ಅಂಗಡಿಗಳಿಗೆ ತಲುಪಿಸಲು ಒಯ್ಯುತ್ತಿರುವುದಾಗಿ ತಿಳಿಸಿ, ಜಿಎಸ್‌ಟಿ ಬಿಲ್‌ಗಳನ್ನು ಪೊಲೀಸರಿಗೆ ನೀಡಿದೆ. ಪೊಲೀಸರು ಬಂಗಾರ ಅಕ್ರಮ ಸಾಗಾಣಿಕೆ ಕೇಸು ದಾಖಲಿಸುವುದಾಗಿ ಬೆದರಿಸಿದರು. ಮೊದಲು ₹10 ಲಕ್ಷಕ್ಕೆ ಬೇಡಿಕೆ ಇಟ್ಟು, ಐದು ಲಕ್ಷಕ್ಕೆ ಒಪ್ಪಿಕೊಂಡರು.

ಇಬ್ಬರು ಕಾನ್‌ಸ್ಟೆಬಲ್‌ಗಳು ಕಾರು ಹಿಂಬಾಲಿಸಿದರು. ಅಜ್ಜಂಪುರದ ಪೆಟ್ರೋಲ್‌ ಬಂಕ್‌ ಬಳಿ ಐದು ಲಕ್ಷ ಹಣವನ್ನು ನನ್ನಿಂದ ಪಡೆದುಕೊಂಡರು. ವಿಷಯ ಬಾಯಿಬಿಟ್ಟರೆ ವ್ಯಾಪಾರಕ್ಕೆ ತೊಂದರೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಭಗವಾನ್‌ ಸಂಕ್ಲ ದೂರಿನಲ್ಲಿ ತಿಳಿಸಿದ್ದಾರೆ.

ಕೃತ್ಯ ನಡೆದಾಗ ತುರ್ತಾಗಿ ರಾಜಸ್ತಾನಕ್ಕೆ ತೆರಳುವ ಅನಿವಾರ್ಯ ಎದುರಾಗಿತ್ತು. ಚಿಂತಾಜನಕ ಸ್ಥಿತಿಯಲ್ಲಿದ್ದ ಚಿಕ್ಕಮ್ಮನನ್ನು ನೋಡಲು ತೆರಳಿದ್ದೆ. ಹೀಗಾಗಿ, ತಡವಾಗಿ ದೂರು ನೀಡಿದ್ದೇನೆ ಎಂದೂ ತಿಳಿಸಿದ್ದಾರೆ.


Spread the love

Leave a Reply

Please enter your comment!
Please enter your name here