ಚಿರತೆ ಸಾವು: ಪ್ರಕರಣ ದಾಖಲು

Spread the love

ಚಿರತೆ ಸಾವು: ಪ್ರಕರಣ ದಾಖಲು

ರಾಮನಗರ: ತಾಲ್ಲೂಕಿನ ಕಲ್ಲುಗೋಪಹಳ್ಳಿ ಸಮೀಪದ ಹುಲ್ತಾರ್ ಹೊಸದೊಡ್ಡಿ ಗ್ರಾಮದ ಬಳಿ ಇತ್ತೀಚೆಗೆ ಗಂಡು ಚಿರತೆಯೊಂದು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯ ವಿರುದ್ಧ ಅರಣ್ಯ ಇಲಾಖೆ ಅಧಿಕಾರಿಗಳು ಕೇಸ್ ದಾಖಲಿಸಿದ್ದಾರೆ.

ಕಲ್ಲುಗೋಪಹಳ್ಳಿ ಗ್ರಾಮದ ವಾಸಿ ಶಿವಣ್ಣನವರ ಪುತ್ರ ಪ್ರಕಾಶ್ ಎಂಬಾತ ಪ್ರಕರಣದ ಆರೋಪಿಯಾಗಿದ್ದು, ಈತ ತಮ್ಮ ಜಮೀನಿನಲ್ಲಿ ಅಳವಡಿಸಿದ್ದ ತಂತಿ ಬೇಲಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ನೀಡಿದ್ದನೆಂದು, ಮುಳ್ಳುತಂತಿ ಬೇಲಿ ದಾಟುವ ಸಮಯದಲ್ಲಿ ಚಿರತೆ ಬಾಯಿಗೆ ವಿದ್ಯುತ್ ಪ್ರಹರಿಸಿ ಸ್ಥಳದಲ್ಲಿಯೇ ಮೃತಪಟ್ಟಿದೆ ಎನ್ನಲಾಗಿದೆ. ಚಿರತೆಯ ಮರಣೋತ್ತರ ಪರೀಕ್ಷೆಯಲ್ಲಿ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.

ಚಿರತೆಯ ಗಂಟಲಿಗೆ ಮುಳ್ಳು ತಂತಿಬೇಲಿ ಸಿಲುಕಿ ಮೃತಪಟ್ಟಿರುವ ಬಗ್ಗೆ ಗ್ರಾಮಸ್ಥರಿಂದ ಅಭಿಪ್ರಾಯ ವ್ಯಕ್ತವಾಗಿತ್ತು. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ವಿದ್ಯುತ್ ಪ್ರಹರಿಸಿ ಸತ್ತಿರುವ ಬಗ್ಗೆ ವರದಿ ಬಂದಿತ್ತು. ರಾಮನಗರ ವಲಯ ಅರಣ್ಯ ಸಂರಕ್ಷಣಾಧಿಕಾರಿ ದಿನೇಶ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಭೈರವ ನೇತೃತ್ವದ ತಂಡ ಪ್ರಕರಣದ ತನಿಖೆ ನಡೆಸಿದಾಗ ಜಮೀನಿನ ಮಾಲೀಕನ ಕೃತ್ಯ ಬಯಲಾಗಿದೆ. ಆರೋಪಿ ವಿರುದ್ಧ ವನ್ಯ ಪ್ರಾಣಿ ಸಂರಕ್ಷಣಾ ಕಾಯ್ದೆ 1972 ಪ್ರಕಾರ ಸಿಆರ್‌ಪಿಸಿ 200 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.


Spread the love