ಚುಂಚನಕಟ್ಟೆ ಶ್ರೀರಾಮ ದೇಗುಲಕ್ಕೆ ಬಂತು ಇ ಹುಂಡಿ

Spread the love

ಚುಂಚನಕಟ್ಟೆ ಶ್ರೀರಾಮ ದೇಗುಲಕ್ಕೆ ಬಂತು ಇ ಹುಂಡಿ

ಮೈಸೂರು: ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಐತಿಹಾಸಿಕ ಯಾತ್ರಾ ಸ್ಥಳವಾಗಿರುವ ಶ್ರೀಕ್ಷೇತ್ರ ಚುಂಚನಕಟ್ಟೆಯ ಶ್ರೀರಾಮ ದೇಗುಲದಲ್ಲಿ ಇ ಹುಂಡಿ ಯನ್ನು ಸ್ಥಾಪನೆ ಮಾಡಲಾಗಿದೆ.

ಶ್ರೀಕ್ಷೇತ್ರ ಚುಂಚನಕಟ್ಟೆ ಗ್ರಾಮದಲ್ಲಿರುವ ಶ್ರೀರಾಮ ದೇಗುಲಕ್ಕೆ  ಡಿಜಿಟಲ್ ಪೇಮೆಂಟ್‌ಗಾಗಿ ಇ ಹುಂಡಿ ವ್ಯವಸ್ಥೆಗೆ ಚಾಲನೆ ನೀಡಿ ಮಾತನಾಡಿದ ದೇಗುಲದ ಕಾರ್ಯನಿರ್ವಹಣಾಧಿಕಾರಿ ರಘು ಅವರು, ದೇಗುಲಗಳಿಗೂ ಇ-ಸ್ಪರ್ಶ ನೀಡಲು ಮುಂದಾಗಿರುವ ರಾಜ್ಯ ಮುಜರಾಯಿ ಇಲಾಖೆ ಕ್ಯೂಆರ್ ಕೋಡ್ ಅಳವಡಿಸಿ ವಹಿವಾಟಿನಲ್ಲಿ ಪಾರದರ್ಶಕ ತರಲು ಇ ಹುಂಡಿ ಯೋಜನೆಯ ಹೊಸ ಹೆಜ್ಜೆ ಇರಿಸಿದೆ.  ಧಾರ್ಮಿಕ ಸ್ಥಳಗಳಲ್ಲಿ ಭಕ್ತರ ಅನುಕೂಲಕ್ಕಾಗಿ ಎಸ್‌ಬಿಐ ವತಿಯಿಂದ ಇ-ಡಿ ಸ್ಥಾಪಿಸಲಾಗುತ್ತಿದೆ. ಕ್ಯೂಆರ್ ಕೋಡ್ ಮೂಲಕ ಹಣ ಸಂದಾಯ ಮಾಡುವ ಭಕ್ತರ ಕಾಣಿಕೆ ದೇಗುಲದ ಬ್ಯಾಂಕ್ ಖಾತೆಗೆ ನೇರವಾಗಿ ಜಮೆಯಾಗಲಿದೆ ಎಂದರು.

ಚುಂಚನಕಟ್ಟೆಗ್ರಾಮವು ಪ್ರವಾಸಿತಾಣ ಹಾಗೂ ಯಾತ್ರಾ ಸ್ಥಳವಾಗಿರುವ ಕಾರಣ ಹೆಚ್ಚು ಪ್ರವಾಸಿಗರು ಹಾಗೂ ಭಕ್ತರು ದೇಶ ವಿದೇಶಗಳಿಂದ ಈ ಕ್ಷೇತ್ರಕ್ಕೆ ಆಗಮಿಸುತ್ತಾರೆ. ಅವರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ದೇವಸ್ಥಾನದಲ್ಲಿ ಡಿಜಿಟಲೀಕರಣ ಮಾಡಿ, ಇ ಹುಂಡಿ ವ್ಯವಸ್ಥೆ ಮಾಡಲಾಗಿದೆ. ದೇವಸ್ಥಾನಕ್ಕೆ ಬರುವ ಭಕ್ತರು ನೇರವಾಗಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಇ ಹುಂಡಿಯಿಂದ ದೇವಸ್ಥಾನದ ಖಾತೆಗೆ ಹಣ ಜಮಾ ಮಾಡಬಹುದು.  ಇದರಿಂದ ಸಮಯ ಉಳಿಸಿದಂತೆ ಆಗುತ್ತದೆ ಅಷ್ಟೇ ಅಲ್ಲದೆ  ಇ-ಹುಂಡಿ ಯೋಜನೆ ಸಮರ್ಪಕವಾಗಿ ಕಾರ್ಯರೂಪಕ್ಕೆ ಬಂದರೆ ದಿನಗಟ್ಟಲೇ ಹುಂಡಿ ಹಣ ಎಣಿಕೆಯ ಕಷ್ಟ ತಪ್ಪಲಿದೆ ಎಂದರು.

ದೇವಸ್ಥಾನದ ಆದಾಯಕ್ಕೆ ಸಂಬಂಧಿಸಿದಂತೆ ಪ್ರತಿಯೊಂದು ರೂಪಾಯಿ ಸಹ ದಾಖಲೆಯಾಗಿ ಉಳಿಯಲಿದೆ. ಇ-ಹುಂಡಿಯಲ್ಲಿ ಎಷ್ಟು ಭಕ್ತರು, ಎಷ್ಟು ಹಣ ವರ್ಗಾಯಿಸಿದ್ದಾರೆ ಎನ್ನುವ ಮಾಹಿತಿ ತಕ್ಷಣ ಹಾಗೂ ಸುಲಭವಾಗಿ ಲಭ್ಯವಾಗಲಿದೆ. ಜತೆಗೆ ದೇವಸ್ಥಾನಗಳಲ್ಲಿ ಸೇವಾ ಹಣ, ಹರಿಕೆ ಹುಂಡಿ ಹಣ ಸೋರಿಕೆಯಂಥ ಪ್ರಕರಣಗಳನ್ನು ತಡೆಗಟ್ಟಲು, ದೇವಸ್ಥಾನದ ಹಣದ ವಹಿವಾಟಿನಲ್ಲಿ ಪಾರದರ್ಶಕತೆ ಕಾಪಾಡುವ ಸದುದ್ದೇಶವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ದೇಗುಲದ ಪ್ರಧಾನ ಅರ್ಚಕ ನಾರಾಯಣ ಅಯ್ಯಂಗಾರ್, ವಾಸುದೇವನ್, ಸಿಬ್ಬಂದಿ  ಅನಂತ್, ಮಣಿ, ಹರೀಶ್, ತಿಮ್ಮಣ್ಣ, ಚಂದ್ರಣ್ಣ, ಶಿವಣ್ಣ ಮತ್ತಿತರು ಇದ್ದರು.


Spread the love