ಚುನಾವಣಾ ಆಯೋಗಕ್ಕೆ ದೂರು ನೀಡುವೆ: ಡಾ.ನಾರಾಯಣಗೌಡ

Spread the love

ಚುನಾವಣಾ ಆಯೋಗಕ್ಕೆ ದೂರು ನೀಡುವೆ: ಡಾ.ನಾರಾಯಣಗೌಡ

ಕೃಷ್ಣರಾಜಪೇಟೆ: ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳನ್ನು ಹೆದರಿಸಿ ಬೆದರಿಸಿ ಜೆಡಿಎಸ್ ಅಭ್ಯರ್ಥಿಯ ಪರವಾಗಿ ಕೆಲಸ ಮಾಡುವಂತೆ ಒತ್ತಡ ಹಾಕುತ್ತಿರುವ ಮಂಡ್ಯ ಹಾಲು ಒಕ್ಕೂಟದ ನಿರ್ದೇಶಕ ಡಾಲುರವಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಸಚಿವ ಡಾ.ನಾರಾಯಣಗೌಡ ಹೇಳಿದರು.

ಕೆ.ಆರ್.ಪೇಟೆ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಅಘಲಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಬಿರುಸಿನ ಮತಪ್ರಚಾರ ನಡೆಸಿ ಮತಯಾಚನೆ ಮಾಡಿ ಮಾತನಾಡಿ, ರಾಜಕಾರಣದಿಂದ ಮುಕ್ತವಾಗಿರುವ ಸಹಕಾರ ಕ್ಷೇತ್ರದಲ್ಲಿಯೂ ರಾಜಕಾರಣ ಮಾಡುತ್ತಾ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ದಿಕ್ಕುತಪ್ಪಿಸುತ್ತಿರುವ ಹಾಲು ಒಕ್ಕೂಟದ ನಿರ್ದೇಶಕರಾದ ಜೆಡಿಎಸ್ ಅಭ್ಯರ್ಥಿ ಹೆಚ್.ಟಿ.ಮಂಜು ಮತ್ತು ಡಾಲುರವಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳ ಮೇಲೆ ಒತ್ತಡ ಹಾಕಿ ಹಾಲಿನ ಡೈರಿಯಲ್ಲಿ ನಡೆದಿರುವ ಅವ್ಯವಹಾರಗಳಿಗೆ ಪ್ರೋತ್ಸಾಹ ನೀಡುತ್ತಾ ರೈತರ ಜೀವನಾಡಿಯಾಗಿ ಗ್ರಾಮೀಣ ಪ್ರದೇಶದಲ್ಲಿ ಮಹಿಳಾ ಸಬಲೀಕರಣಕ್ಕೆ ಪೂರಕವಾಗಿರುವ ಹಾಲಿನ ಡೈರಿಗಳಿಗೆ ರಾಜಕೀಯದ ಬಣ್ಣ ಹಚ್ಚಿ ಜೆಡಿಎಸ್ ಪರವಾಗಿ ಬಹಿರಂಗವಾಗಿ ಪ್ರಚಾರ ನಡೆಸುವಂತೆ ಒತ್ತಡ ಹಾಕುತ್ತಿದ್ದಾರೆ ಎಂದು ದೂರಿದರು.

ಐಕನಹಳ್ಳಿ ಹಾಲಿನ ಡೈರಿಯ ಕಾರ್ಯದರ್ಶಿಯ ಪತಿ ದೇವೇಗೌಡ, ವಡ್ಡರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಯ ಪತಿ ಮಹದೇವೇಗೌಡ, ಕಿಕ್ಕೇರಿ ಹಾಲಿನ ಡೈರಿಯ ಕಾರ್ಯದರ್ಶಿ ಕೃಷ್ಣ ಸೇರಿದಂತೆ ಐವತ್ತಕ್ಕೂ ಹೆಚ್ಚಿನ ಕಾರ್ಯದರ್ಶಿಗಳು ಬಹಿರಂಗವಾಗಿ ಜೆಡಿಎಸ್ ಅಭ್ಯರ್ಥಿಯ ಪರವಾಗಿ ಪ್ರಚಾರ ನಡೆಸುತ್ತಾ ಸಹಕಾರ ಕ್ಷೇತ್ರಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಈ ಹಿಂದೆ ಹಾಲು ಒಕ್ಕೂಟದ ನಿರ್ದೇಶಕರಾಗಿ ಅಧ್ಯಕ್ಷರಾಗಿ ಕೆಲಸ ಮಾಡಿರುವ ಚನ್ನಿಂಗೇಗೌಡ, ಎಂ.ಬಿ.ಹರೀಶ್, ನಿರ್ದೇಶಕರಾದ ಅಂಬರೀಶ್ ಸೇರಿದಂತೆ ಯಾವೊಬ್ಬ ನಿರ್ದೇಶಕರೂ ಹಾಲಿನ ಡೈರಿಯನ್ನು ತಮ್ಮ ಸ್ವಾರ್ಥ ಸಾಧನೆಗೆ ಬಳಕೆ ಮಾಡಿಕೊಂಡಿರಲಿಲ್ಲ ಎಂದರು.

ಬರಪೀಡಿತ ಸಂತೇಬಾಚಹಳ್ಳಿ ಹೋಬಳಿಯ ಕೆರೆಕಟ್ಟೆಗಳನ್ನು ಹೇಮಾವತಿ ನದಿಯ ನೀರಿನಿಂದ ತುಂಬಿಸಲು ಗೂಡೆಹೊಸಳ್ಳಿಯ ಬಳಿ ಜಾಕ್‌ವೆಲ್ ನಿರ್ಮಿಸಿ ಏತನೀರಾವರಿ ಯೋಜನೆಯನ್ನು ೨೧೨ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗಿದ್ದು ಯೋಜನೆಯ ಕಾಮಗಾರಿ ಶೇ.೮೦ರಷ್ಟು ಮುಗಿದಿದ್ದು ಇನ್ನಾರು ತಿಂಗಳಲ್ಲಿ ಅಘಲಯ ದೊಡ್ಡಕೆರೆಗೆ ನೀರು ಹರಿಸುವ ಕಾರ್ಯಕ್ಕೆ ಚಾಲನೆಯು ದೊರೆಯಲಿದೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಟಿಎಪಿಸಿಎಂಎಸ್ ಮಾಜಿಅಧ್ಯಕ್ಷ ಅಘಲಯ ಶ್ರೀಧರ್, ಸಂತೇಬಾಚಹಳ್ಳಿ ಗ್ರಾಮ ಪಂಚಾಯಿತಿ ಮಾಜಿಅಧ್ಯಕ್ಷ ಮೋಹನ್, ರಂಗನಾಥಪುರ ಕ್ರಾಸ್ ಗ್ರಾಮ ಪಂಚಾಯಿತಿ ಮಾಜಿಅಧ್ಯಕ್ಷ ಚಂದ್ರಶೇಖರ್, ಗೊರವಿಮಂಜೇಗೌಡ, ತಾಲೂಕು ಪಂಚಾಯಿತಿ ಮಾಜಿಸದಸ್ಯರಾದ ರಾಜಾಹುಲಿ ದಿನೇಶ್, ಬಿಲ್ಲೇನಹಳ್ಳಿ ಕುಮಾರ್, ಆದಿಹಳ್ಳಿ ನಾಗೇಶ್, ಹೆತ್ತಗೋನಹಳ್ಳಿ ನಾಗರಾಜು, ಮರೀಗೌಡ, ಭೀಮೇಗೌಡ, ಮೊಗಣ್ಣಗೌಡ ಸೇರಿದಂತೆ ಸಾವಿರಾರು ಬಿಜೆಪಿ ಕಾರ್ಯಕರ್ತರು ಮತಪ್ರಚಾರ ಹಾಗೂ ರೋಡ್ ಷೋ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


Spread the love