ಚುನಾವಣೆಗೆ 40 ಲಕ್ಷ ವೆಚ್ಚ ಮಾಡಲು ಅಭ್ಯರ್ಥಿಗೆ ಅವಕಾಶ

Spread the love

ಚುನಾವಣೆಗೆ 40 ಲಕ್ಷ ವೆಚ್ಚ ಮಾಡಲು ಅಭ್ಯರ್ಥಿಗೆ ಅವಕಾಶ

ಮೈಸೂರು: ಸಾರ್ವತ್ರಿಕ ವಿಧಾನಸಬೆ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿ ಗರಿಷ್ಟ 40 ಲಕ್ಷದವರೆಗೆ ಚುನಾವಣಾ ವೆಚ್ಚ ಮಾಡಲು ಅವಕಾಶವಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ, ಹಾಗೂ ಜಿಲ್ಲಾಧಿಕಾರಿಗಳಾದ ಡಾ. ಕೆ ವಿ ರಾಜೇಂದ್ರ ಹೇಳಿದರು.

ಮೈಸೂರು ವಿಶ್ವ ವಿದ್ಯಾನಿಲಯದ ಸೆನೆಟ್ ಭವನದಲ್ಲಿ ಹಮ್ಮಿಕೊಂಡಿದ್ದ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿ, ಪ್ರತಿ ಅಭ್ಯರ್ಥಿಯು ಚುನಾವಣೆಯಲ್ಲಿ ತಾವು ಮಾಡುವ ವೆಚ್ಚವನ್ನು ತಮ್ಮ ಖರ್ಚು ವೆಚ್ಚ ಖಾತೆಯ ಮೂಲಕ ಮಾಡಿ ಲೆಕ್ಕ ಇಡಬೇಕು ಎಂದು ಅವರು ತಿಳಿಸಿದರು.

ವೆಚ್ಚ ವೀಕ್ಷಕರು ಚುನಾವಣಾ ವೆಚ್ಚವನ್ನು 3 ಬಾರಿ ಪರಿಶೀಲನೆ ಮಾಡುತ್ತಾರೆ. ಒಬ್ಬ ಅಭ್ಯರ್ಥಿ 40 ಲಕ್ಷ ವೆಚ್ಚ ಮಾಡಲು ಮಿತಿ ಇರುತ್ತದೆ. 11 ವಿಧಾನ ಸಭಾ ಕ್ಷೇತ್ರ ಗಳಿಗೆ 9 ವೆಚ್ಚ ವೀಕ್ಷಕರು ಇದ್ದಾರೆ. ಜಿಲ್ಲೆಗೆ ಸಾಮಾನ್ಯ ವೀಕ್ಷಕರು, ವೆಚ್ಚ ವೀಕ್ಷಕರು ಹಾಗೂ ಪೊಲೀಸ್ ವೀಕ್ಷಕರು ಇರುತ್ತಾರೆ ಎಂದರು.

ಅಭ್ಯರ್ಥಿ ನಾಮಪತ್ರ ಸಲ್ಲಿಸುವ ಮುಂಚೆ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ತಮ್ಮ ಖಾತೆಯನ್ನು ತೆರೆದಿರಬೇಕು. 10 ಸಾವಿರಕ್ಕಿಂತ ಹೆಚ್ಚಿನ ಖರ್ಚು ಮಾಡಲು ಚೆಕ್, ಗೂಗಲ್ ಪೇ ಮೂಲಕವೇ ತಮ್ಮ ಖಾತೆಯ ಮೂಲಕವೇ ಮಾಡಬೇಕು. ನಾಮಪತ್ರ ಸಲ್ಲಿಸಿದ ದಿನದಿಂದ ಚುನಾವಣಾ ಫಲಿತಾಂಶ ಬರುವವರೆಗೆ ವೆಚ್ಚವನ್ನು ಲೆಕ್ಕ ಹಾಕಲಾಗುತ್ತದೆ. ಅಭ್ಯರ್ಥಿಗಳು ಮಾಡಿರುವ ಖರ್ಚು ವೆಚ್ಚಗಳನ್ನು ಅಭ್ಯರ್ಥಿಗಳು ಚುನಾವಣೆ ಮುಗಿದ 30 ದಿನಗಳ ಒಳಗೆ ನೀಡದಿದ್ದರೆ 3 ವರ್ಷದವರೆಗೆ ಅನರ್ಹನಾಗುತ್ತಾನೆ ಎಂದರು.

ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳು ಯಾರಿಂದ ಆದರೂ ದೇಣಿಗೆ ಪಡೆದರೂ ಅದನ್ನು ತಮ್ಮ ಅಕೌಂಟ್‌ಗೆ ತೆಗೆದುಕೊಳ್ಳಬೇಕು. ಯಾವುದೇ ವ್ಯಕ್ತಿಗೆ 10 ಸಾವಿರಕ್ಕಿಂತ ಹೆಚ್ಚಿನ ಹಣವನ್ನು ನಗದು ಮೂಲಕ ಪೂರ್ಣ ಚುನಾವಣಾ ಪ್ರಕ್ರಿಯೆ ಅವಧಿಯಲ್ಲಿ ನೀಡುವಂತಿಲ್ಲ ಎಂದು ಮಾಹಿತಿ ನೀಡಿದರು.

ಎಲ್ಲಾ ವೆಚ್ಚ ವೀಕ್ಷಕರು ಆಡಳಿತ ತರಬೇತಿ ಸಂಸ್ಥೆಯ ಕಬಿನಿ ಗೆಸ್ಟ್ ಹೌಸ್‌ನಲ್ಲಿ ಇರುತ್ತಾರೆ ತಮಗೆ ಮಾಹಿತಿ ಬೇಕಿದ್ದರೆ ಸಂಪರ್ಕಿಸಬಹುದು. ಅಭ್ಯರ್ಥಿಯು ಸ್ವತಃ ನಿಧಿಯಿಂದ ಹಣ ಖರ್ಚು ಮಾಡಲು ತಮ್ಮ ಹಣವನ್ನು ಚುನಾವಣೆಗೆ ತೆರೆದಿರುವ ಬ್ಯಾಂಕ್ ಖಾತೆಗೆ ಜಮಾ ಮಾಡಿ ನಂತರ ಖರ್ಚು ಮಾಡಬೇಕು. ಚುನಾವಣಾ ವೆಚ್ಚಕ್ಕೆ ಸಂಬಂದಿಸಿದ ಮಾಹಿತಿಗಳು ಆಂಗ್ಲ ಭಾ?ಯಲ್ಲಿ ಇದ್ದು, ಇದನ್ನು ಆದಷ್ಟು ಕನ್ನಡ ಭಾಷೆಯಲ್ಲಿ ಒದಗಿಸಲು ಪ್ರಯತ್ನ ಮಾಡಲಾಗುವುದು. 7ಎ ಅಂತಿಮವಾಗುತ್ತಿದ್ದು ಸೀರಿಯಲ್ ಸಂಖ್ಯೆಯನ್ನು ಅಭ್ಯರ್ಥಿಗಳಿಗೆ ನೀಡಲಾಗುವುದು ಎಂದರು.

ಕಾರ್ಯಾಗಾರದಲ್ಲಿ ವೆಚ್ಚ ವೀಕ್ಷಕರು, ಅಪರ ಜಿಲ್ಲಾಧಿಕಾರಿಗಳಾದ ಕವಿತಾ ರಾಜರಾಮ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.


Spread the love