ಚುನಾವಣೆಯಲ್ಲಿ ಕಾಂಗ್ರೆಸಿಗೆ ಸ್ಪಷ್ಟ ಬಹುಮತ – ಕೆ ಸಿ ವೇಣುಗೋಪಾಲ್

Spread the love

ಚುನಾವಣೆಯಲ್ಲಿ ಕಾಂಗ್ರೆಸಿಗೆ ಸ್ಪಷ್ಟ ಬಹುಮತ – ಕೆ ಸಿ ವೇಣುಗೋಪಾಲ್

ಮಂಗಳೂರು: ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸುಲಭವಾಗಿ ಬಹುಮತಗಳಿಸಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಸಭಾ ಸದಸ್ಯ ಕೆ.ಸಿ.ವೇಣುಗೋಪಾಲ್ ತಿಳಿಸಿದ್ದಾರೆ.

ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಭ್ರಷ್ಟಾಚಾರರಹಿತ ಮತ್ತು ಪಾರದರ್ಶಕ ಆಡಳಿತವನ್ನು ಕಾಂಗ್ರೆಸ್ ನೀಡಲಿದೆ. 2013ರ ಫಲಿತಾಂಶ ದಕ್ಷಿಣ ಕನ್ನಡದಲ್ಲಿ ಮರುಕಳಿಸಲಿದೆ ಎಂದರು.

ಕರ್ನಾಟಕದಲ್ಲಿ ಇನ್ನೂ ಕೆಲವೇ ದಿನಗಳಲ್ಲಿ ಚುನಾವಣೆ ನಡೆಯಲಿದ್ದು, ಬಿಜೆಪಿಯನ್ನು ಜನರು ಅಧಿಕಾರದಿಂದ ಕೆಳಗಿಳಿಸಲಿದ್ದಾರೆ. ಬಿಜೆಪಿಗೆ ಇದರಿಂದ ದಿಗಿಲಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕಳೆದ ಮೂರು ವರ್ಷಗಳಲ್ಲಿ ಮಂಗಳೂರಿಗೆ ಬಿಜೆಪಿ ಸರಕಾರ ಏನನ್ನು ನೀಡಿಲ್ಲ. ಜನರನ್ನು ಪರಸ್ಪರ ಕಚ್ಚಾಡುವಂತೆ ಮಾಡಿರುವುದೇ ಸರಕಾರದ ದೊಡ್ಡ ಸಾಧನೆ. ಸಪ್ತಭಾಷಾ ಸಂಗಮ ಭೂಮಿಯಾಗಿರುವ ಮಂಗಳೂರು ತನ್ನದೆ ಆಗಿರುವ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿದ್ದು, ಇಲ್ಲಿನ ಯುವಜನತೆಗೆ ಉದ್ಯೋಗ ಸೃಷ್ಟಿಗೆ ಯಾವುದೇ ಯೋಜನೆ ಜಾರಿಗೊಳಿಸಿಲ್ಲ. ಯಾವುದೇ ಶಾಶ್ವತ ಯೋಜನೆಯನ್ನು ಅನುಷ್ಠಾನಗೊಳಿಸಲಿಲ್ಲ ಎಂದರು.

ಕರ್ನಾಟಕದ ಇತಿಹಾಸದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಭ್ರಷ್ಟಾಚಾರದಲ್ಲಿ ದಾಖಲೆ ನಿರ್ಮಿಸಿದೆ. ಕುದುರೆ ವ್ಯಾಪಾರದ ಮೂಲಕ ಅಧಿಕಾರಕ್ಕೆ ಬಂದಿರುವ ಈ ಸರಕಾರಕ್ಕೆ 40 ಪರ್ಸೆಂಟ್ ಸರಕಾರವೆಂದು ಜನರು ಹೆಸರಿಟ್ಟಿದ್ದಾರೆ ಎಂದರು

ರಾಜ್ಯದಲ್ಲಿ 2013ರಿಂದ 2018ರ ತನಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ನೀಡಿದ್ದ ಭರವಸೆಯಲ್ಲಿ ಶೇ 90ರಷ್ಟನ್ನು ಈಡೇರಿಸಿತ್ತು ಎಂದು ಹೇಳಿದರು.

ರಾಜ್ಯದಲ್ಲಿ ನರೇಂದ್ರ ಮೋದಿ ನೇತೃತ್ವದ ಡಬಲ್ ಇಂಜಿನ್ ಸರಕಾರ ಬಂದರೆ ರಾಜ್ಯ ಮತ್ತಷ್ಟು ಅಭಿವೃದ್ಧಿಯನ್ನು ಕಾಣಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಎರಡು ದಿನಗಳ ಹಿಂದೆ ಹೇಳಿಕೆ ನೀಡಿದ್ದರು. ಹಾಗಿದ್ದರೆ ಕರ್ನಾಟಕದಲ್ಲಿ ಮೂರು ವರ್ಷಗಳಿಂದ ಬಿಜೆಪಿ ಸರಕಾರ ಇರಲಿಲ್ಲವೇ? ಬಿ.ಎಸ್. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ಸರಕಾರ ಬಿಜೆಪಿ ನೇತೃತ್ವದ್ದು ಅಲ್ಲವೆ ಎಂದು ವೇಣುಗೋಪಾಲ್ ಪ್ರಶ್ನಿಸಿದರು.

ರಾಹುಲ್ ಗಾಂಧಿ ಎ.27ರಂದು ಸಂಜೆ 5 ಗಂಟೆಗೆ ಮಂಗಳೂರಿನ ಸಹ್ಯಾದ್ರಿ ಕ್ರೀಡಾಂಗಣದಲ್ಲಿ ಪಕ್ಷದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಮಾಹಿತಿ ನೀಡಿದರು


Spread the love