ಚುನಾವಣೆಯಲ್ಲಿ “ಕೈ” ಗೆ ಹೀನಾಯ ಸೋಲು: ಜೋರಾಯ್ತು ನಾಯಕತ್ವ ಬದಲಾವಣೆಯ ಕೂಗು!

Spread the love

ಚುನಾವಣೆಯಲ್ಲಿ “ಕೈ” ಗೆ ಹೀನಾಯ ಸೋಲು: ಜೋರಾಯ್ತು ನಾಯಕತ್ವ ಬದಲಾವಣೆಯ ಕೂಗು!

ಉಡುಪಿ: ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟಗೊಂಡು ರಾಜ್ಯದಲ್ಲಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ನೂತನ ಮುಖ್ಯಮಂತ್ರಿ ಯಾರಾಗಬೇಕು ಎಂಬ ಚರ್ಚೆಯ ನಡುವಲ್ಲೇ ಉಡುಪಿ ಜಿಲ್ಲೆಯ ನಾಯಕತ್ವ ಬದಲಾವಣೆಯ ಕೂಗು ಜೋರಾಗಿದೆ.

ಈ ಬಾರಿಯ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಐದಕ್ಕೆ‌ ಐದೂ ಸ್ಥಾನಗಳನ್ನು ಕಳೆದುಕೊಂಡು ನೆಲಕ್ಕಚ್ಚಿರುವ ಕಾಂಗ್ರೆಸ್ ಪಕ್ಷಕ್ಕೆ ಜಿಲ್ಲಾ ಮಟ್ಟದಲ್ಲಿನ ನಾಯಕತ್ವ ಬದಲಾವಣೆ ಮಾಡಬೇಕು ಎನ್ನುವ ಚರ್ಚೆ ಗರಿಗೆದರಿದೆ.

ಪ್ರಚಾರ ಕಾರ್ಯಕ್ಕೆ ಹಿಂದೇಟು:
ಚುನಾವಣೆ ಘೋಷಣೆಯಾದ ಆರಂಭದಿಂದಲೂ ಪಕ್ಷದ ನಾಯಕರು ಜಿಲ್ಲಾ ಮಟ್ಟದಲ್ಲಿ ಅಷ್ಟೊಂದು ಉತ್ಸುಕತೆಯಿಂದ ಪ್ರಚಾರ ಕಾರ್ಯದಲ್ಲಿ ತೊಡಗದಿರುವುದು ಎಲ್ಲರಿಗೂ ತಿಳಿದ‌ ವಿಚಾರ. ಒಂದೆಡೆ ಜಿಲ್ಲಾ ಮಟ್ಟದಲ್ಲಿನ ಬಣ ರಾಜಕೀಯದಿಂದಾಗಿ ಅಭ್ಯರ್ಥಿಗಳು ಸ್ವಂತ ಬಲದಿಂದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡರೆ ಇನ್ನೂ ಕೆಲವೆಡೆ ಕೆಲ ಜಿಲ್ಲಾ ಮತ್ತು ಬ್ಲಾಕ್ ಹಂತದ ನಾಯಕರು ಪ್ರಚಾರ ಕಾರ್ಯದಲ್ಲಿ ಅಭ್ಯರ್ಥಿಗಳಿಗೆ ಸಾಥ್ ನೀಡಿದ್ದಾರೆ.

ಬಲಿಷ್ಠ ನಾಯಕತ್ವದ ಕೊರತೆ:
2018 ರ ವಿಧಾನಸಭಾ ಚುನಾವಣೆಯಿಂದ ಈಚೆಗೆ ಉಡುಪಿ ಜಿಲ್ಲೆಯ ಕಾಂಗ್ರೆಸ್ ಪಕ್ಷ ಹಿಂದುತ್ವದ ಅಲೆಯಲ್ಲಿ ಕೊಚ್ಚಿ ಹೋಗಿರುವುದು ಒಂದೆಡೆಯಾದರೆ ಜಿಲ್ಲೆಯಲ್ಲಿ ಸೂಕ್ತ ಹಾಗೂ ಬಲಿಷ್ಠವಾದ ನಾಯಕತ್ವ ಇಲ್ಲದೆ ಇರುವುದು ಪಕ್ಷದ ಹಿನ್ನಡೆಗೆ ಇನ್ನೊಂದು ಕಾರಣವಾಗಿದೆ. ಪ್ರಮೋದ್ ಮಧ್ವರಾಜ್ ಪಕ್ಷ ತೊರೆದ ಬಳಿಕ ವಿನಯ್ ಕುಮಾರ್ ಸೊರಕೆ ಒಂದಿಷ್ಟು ಪಕ್ಷವನ್ನು ಜಿಲ್ಲೆಯಲ್ಲಿ ಒಗ್ಗೂಡಿಸಲು ಪ್ರಯತ್ನಿಸಿದರಾದರೂ ಸೂಕ್ತ ಯಶಸ್ಸು ಕಾಣಲಿಲ್ಲ. ಮಾಜಿ ಶಾಸಕ ಗೋಪಾಲ ಪೂಜಾರಿ ಒಂದು ಕಾಲದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷ, ಸಂಘಟನೆ ಮಾಡಿದವರು. ಆದರೆ ಅವರ ಜವಾಬ್ದಾರಿ ಮುಗಿದ ಬಳಿಕ ಕೇವಲ ಬೈಂದೂರು ಕ್ಷೇತ್ರಕ್ಕೆ ಸೀಮಿತರಾಗಿ ಕಾರ್ಯನಿರ್ವಹಿಸಿತ್ತಿದ್ದಾರೆ. ಮಾಜಿ ಸಭಾಪತಿ ಪ್ರತಾಪ ಚಂದ್ರ ಶೆಟ್ಟಿ ಪಕ್ಷ ಸಂಘಟನೆಯನ್ನು ಮನೆಯಲ್ಲಿ ಕುಳಿತು ಮಾಡಿದ್ದು ಬಿಟ್ಟರೆ ಎಂದೂ ಕೂಡ ಸಾರ್ವಜನಿಕವಾಗಿ ತೊಡಗಿಕೊಂಡಿದ್ದು ಕಡಿಮೆಯೇ ಎನ್ನಬಹುದು. ಇವೆಲ್ಲವೂ ಕೂಡ ಚುನಾವಣೆಯ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರನ್ನು ಕಂಗಾಲು ಮಾಡಿದ್ದಂತೂ ಸತ್ಯ.

ರಾಜ್ಯ ನಾಯಕರಿಂದ ನಿರ್ಲಕ್ಷ:
ಒಂದೆಡೆ ಜಿಲ್ಲಾ ಕಾಂಗ್ರೆಸ್ ನ ನಿಷ್ಕ್ರೀಯತೆ ಆದರೆ ಆಸ್ಕರ್ ಫೆರ್ನಾಂಡಿಸ್ ನಿಧನದ ನಂತರ ಕೆಪಿಸಿಸಿ ಹಾಗೂ ರಾಜ್ಯ ಹಂತದ ನಾಯಕರೂ ಕೂಡ ಉಡುಪಿ ಜಿಲ್ಲೆಯನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದಾರೆ ಎಂದರೆ ತಪ್ಪಾಗಲಾರದು. ಕೇವಲ ಆಗೊಮ್ಮೆ ಈಗೊಮ್ಮೆ ರಾಜ್ಯದ ನಾಯಕರು ಉಡುಪಿಗೆ ಭೇಟಿ ನೀಡಿ ಪತ್ರಿಕಾಗೋಷ್ಠಿ ನಡೆಸಿ ವಾಪಾಸಾಗಿದ್ದು ಬಿಟ್ಟರೆ ಜಿಲ್ಲೆಯಲ್ಲಿ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಯಾವುದೇ ರೀತಿಯ ಪ್ರಯತ್ನ ನಡೆಸಿಲ್ಲ. ಚುನಾವಣೆಯ ಸಂದರ್ಭದಲ್ಲಿ ಬಲಿಷ್ಠ ಬಿಜೆಪಿಯನ್ನು ಎದುರಿಸುವ ನಿಟ್ಟಿಯಲ್ಲಿ ಯಾವುದೇ ಸಂಘಟಿತ ಹೋರಾಟ ರೂಪಿಸಲು ಕೂಡ ರಾಜ್ಯ ನಾಯಕರು ಮರೆತಿದ್ದು ಸೋಲಿಗೆ ಪ್ರಮುಖ ಕಾರಣವಾಗಿದೆ ಎನ್ನುವುದು ಕಾರ್ಯಕರ್ತರ ಅಭಿಪ್ರಾಯವಾಗಿದೆ. ಜಿಲ್ಲೆಯ ಮಹಿಳಾ ಘಟಕ, ಯುವ ಘಟಕ, ವಿದ್ಯಾರ್ಥಿ ಘಟಕ ಸಂಘಟಿತ ಹೋರಾಟ ಚುನಾವಣೆಯ ಸಂದರ್ಭದಲ್ಲಿ ಎಲ್ಲಿಯೂ ಕೂಡ ಕಾಣ ಸಿಗಲಿಲ್ಲ.

ಬಿಜೆಪಿಯಿಂದ ಸಂಘಟಿತ ಹೋರಾಟ:
ಈ ಬಾರಿಯ ಚುನಾವಣೆಯಲ್ಲಿ ಕಾಪು ಮತ್ತು ಬೈಂದೂರು ಹೊರತುಪಡಿಸಿ ಉಡುಪಿ, ಕುಂದಾಪುರ ಹಾಗೂ ಕಾರ್ಕಳಕ್ಕೆ ಹೊಸ ಅಭ್ಯರ್ಥಿಗಳನ್ನು ಪರಿಚಯಿಸಿದ್ದು ಅವರನ್ನು ಜನರು ಒಪ್ಪಿಕೊಂಡಿಲ್ಲ. ಬಿಜೆಪಿ ಪಕ್ಷ ಕೂಡ ಉಡುಪಿ ಜಿಲ್ಲೆಯಲ್ಲಿ ಕಾರ್ಕಳ ಹೊರತುಪಡಿಸಿ ಉಳಿದ ನಾಲ್ಕು ಕ್ಷೇತ್ರಗಳಿಗೆ ಹೊಸ ಮುಖ ಪರಿಚಯಿಸಿದರೂ ಕೂಡ ಭರ್ಜರಿ ಯಶಸ್ಸು ಸಾಧಿಸಿದ್ದು ಇದಕ್ಕೆ ಪ್ರಮುಖ ಕಾರಣ ಕಾರ್ಯಕರ್ತರ ಸಂಘಟಿತ ಹೋರಾಟ.

ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ಯುವ ಉದ್ಯಮಿ ಪ್ರಸಾದ್ ರಾಜ್ ಕಾಂಚನ್ ರನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದರೂ ಅವರು ಚುನಾವಣೆ ಘೋಷಣೆಯ ಮೊದಲು ಯಾವುದೇ ರೀತಿಯಲ್ಲಿ ಪಕ್ಷವನ್ನು ಬಲಗೊಳಿಸುವ ನಿಟ್ಟಿನಲ್ಲಿ ಯಾವುದೇ ಕಾರ್ಯಕ್ಕೆ ಮುಂದಾಗಿಲ್ಲ. ಅಭ್ಯರ್ಥಿಯಾದ ಬಳಿಕ ಸ್ವಲ್ಪ ಮಟ್ಟಿನ ಹೋರಾಟ ನೀಡಿದರೂ ಹಿಂದುತ್ವದ ಹಿನ್ನಲೆಯಿಂದ ಬಂದ ಯಶ್ಪಾಲ್ ಸುವರ್ಣರನ್ನು ಎದುರಿಸಿ ನಿರೀಕ್ಷಿತ ಫಲ ಪಡೆಯುವಲ್ಲಿ ವಿಫಲರಾಗಿದ್ದಾರೆ.

ಕಾಪು ಮತ್ತು ಬೈಂದೂರು ಕ್ಷೇತ್ರಕ್ಕೆ ಮೊದಲೇ ಮಾಜಿ ಶಾಸಕರಾದ ಗೋಪಾಲ ಪೂಜಾರಿ ಮತ್ತು ವಿನಯ್ ಕುಮಾರ್ ಸೊರಕೆಯವರನ್ನು ಅಭ್ಯರ್ಥಿಗಳನ್ನಾಗಿ ಘೋಷಣೆ ಮಾಡಲಾಗಿತ್ತು. ಉಡುಪಿ ಜಿಲ್ಲೆಯಲ್ಲಿ ಈ ಎರಡು ಕ್ಷೇತ್ರಗಳು ಗೆಲ್ಲುವುದು ಪಕ್ಕಾ ಎನ್ನುವ ವಾತಾವರಣವಿದ್ದರೂ ಕೂಡ ಕೊನೆಯ ಕ್ಷಣದಲ್ಲಿ ಮೋದಿ, ಅಮಿತ್ ಶಾ ಪ್ರಚಾರದಿಂದ ಹಾಗೂ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧದ ಪ್ರಸ್ತಾಪದಿಂದ ದೊಡ್ಡ ಮಟ್ಟದ ಅಂತರದಿಂದ ಸೋಲು ಕಾಣಬೇಕಾಯಿತು.

ಕುಂದಾಪುರ ವಿಧಾನಸಭಾ ಕ್ಷೇತ್ರದ ಮಟ್ಟಿಗೆ ಹೊಸ ಮುಖವಾಗಿ ದಿನೇಶ್ ಹೆಗ್ಡೆ ಮೊಳಹಳ್ಳಿಯವರನ್ನು ಸಾಕಷ್ಟು ಬೇಗ ಪಕ್ಷ ಅಭ್ಯರ್ಥಿಯಾಗಿ ಘೋಷಣೆ ಮಾಡಿತ್ತು. ಆದರೆ ಹೆಗ್ಡೆಯವರು ಎಂದೂ ಕೂಡ ಜಿಲ್ಲಾ ಮಟ್ಟ, ಬ್ಲಾಕ್ ಮಟ್ಟದ ಪಕ್ಷದ ವೇದಿಕೆಗಳಲ್ಲಿ ಕಾಣಿಸಿಕೊಳ್ಳದೆ ಅಪರಿಚಿತ ವ್ಯಕ್ತಿಯಾಗಿಯೇ ಉಳಿದುಕೊಂಡರು ಎಂಬ ಅಭಿಪ್ರಾಯ ಕಾರ್ಯಕರ್ತರದ್ದಾಗಿದೆ. ಈ ನಡುವೆ ಶಾಸಕರಾಗಿದ್ದು ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ತನ್ನ ಶಿಷ್ಯ ಕಿರಣ್ ಕುಮಾರ್ ಕೊಡ್ಗಿಯವರ ಪರವಾಗಿ ನೇರವಾಗಿ ಪ್ರಚಾರದಲ್ಲಿ ತೊಡಗಿದ್ದು, ರಾಜ್ಯ ಮಟ್ಟದ ನಾಯಕರೂ ಕೂಡ ಕುಂದಾಪುರದತ್ತ ತಲೆ ಹಾಕದೇ ಇದ್ದದ್ದು ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ನಷ್ಟವಾಗಿ ಪರಿಣಮಿಸಿತು.

ಹೈ ವೋಲ್ಟೇಜ್ ಕ್ಷೇತ್ರವಾಗಿ ಗುರುತಿಸಿಕೊಂಡ ಪವರ್ ಮಿನಿಸ್ಟರ್ ಸುನೀಲ್ ಕುಮಾರ್ ಅವರ ಕಾರ್ಕಳ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿದ್ದ ಮುನಿಯಾಲು ಉದಯ್ ಕುಮಾರ್ ಶೆಟ್ಟಿಯವರು ಗೆದ್ದು ಸೋತಿದ್ದು ಮಾತ್ರ ಸತ್ಯ. 2018 ರ ಚುನಾವಣೆಯಲ್ಲಿ 40000 ಮತಗಳ ಅಂತರದಲ್ಲಿ ಗೆದ್ದ ಸುನೀಲ್ ಕುಮಾರ್ ಅವರ ಮತಗಳನ್ನು 4000ಕ್ಕೆ ತಂದು ಇಳಿಸುವಲ್ಲಿ ಉದಯ್ ಕುಮಾರ್ ಶೆಟ್ಟಿ ಸಫಲರಾಗಿದ್ದಾರೆ ಎನ್ನಬಹುದು. ಕೊನೆ ಹಂತದಲ್ಲಿ ಟಿಕೇಟ್ ಘೋಷಣೆಯಿಂದಾಗಿ ಉದಯ್ ಕುಮಾರ್ ಶೆಟ್ಟಿಯವರು ಇಡೀ ಕ್ಷೇತ್ರವನ್ನು ತಲುಪಲು ಸಾಧ್ಯವಾಗಿಲ್ಲ ಇಲ್ಲವಾದರೆ ಗೆದ್ದು ಬೀಗುತ್ತಿದ್ದರು ಎನ್ನುತ್ತಾರೆ ಕಾರ್ಯಕರ್ತರು.

ಒಟ್ಟಾರೆಯಾಗಿ ಉಡುಪಿ ಜಿಲ್ಲೆಯ ಒಂದು ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಸಮರ್ಪಕವಾದ ರೂಪುರೇಷೆ ತಯಾರಿಸದೆ ತಮ್ಮಿಷ್ಟ ಬಂದಂತೆ ನಡೆದುಕೊಂಡ ನಾಯಕರಿಂದಾಗಿ ಕಾರ್ಯಕರ್ತರು ಅಸಮಾಧಾನಗೊಂಡಿರುವುದಂತೂ ಸತ್ಯ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೂ ಅದನ್ನು ಸಂಭ್ರಮಿಸುವ ಯೋಗ ಕೂಡ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರಿಗೆ ಇಲ್ಲವಾಗಿದೆ. ತನ್ನದೇ ಜಿಲ್ಲೆಯ ಉಸ್ತುವಾರಿ ಸಚಿವರನ್ನು ಪಡೆಯುವ ಭಾಗ್ಯವನ್ನು ಉಡುಪಿ ಜಿಲ್ಲೆ ಮತ್ತೊಮ್ಮೆ ಕಳೆದುಕೊಂಡಿದೆ. ಇದರೊಂದಿಗೆ ತಮ್ಮ ಪಕ್ಷದ ಶಾಸಕರಿದಲ್ಲದೆ ಕಾರ್ಯಕರ್ತರು ಅನಾಥರಾದಂತಾಗಿದ್ದಾರೆ. ಇದಕ್ಕೆ ಸರಿಯಾಗಿ ಜಿಲ್ಲಾ ನಾಯಕತ್ವ ಕೂಡ ಹೇಳುವಷ್ಟು ಬಲಿಷ್ಠವಾಗಿಲ್ಲದ್ದರಿಂದ ಅದು ಬದಲಾವಣೆಯಾಗಬೇಕು ಎಂಬ ಕೂಗು ಬಲವಾಗಿ ಕೇಳಿ ಬರುತ್ತಿದೆ. ಪಕ್ಷವನ್ನು ಸಂಘಟಿತವಾಗಿ ಕಟ್ಟುವುದರೊಂದಿಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಧ್ವಜ ಜಿಲ್ಲೆಯಲ್ಲಿ ಹಾರಬೇಕು ಎಂಬ ಕಾರ್ಯಕರ್ತರ ಕನಸಿಗೆ ರಾಜ್ಯ ನಾಯಕತ್ವ ಮನ್ನಣೆ ನೀಡುವುದೇ ಕಾದು ನೋಡಬೇಕಾಗಿದೆ.


Spread the love

Leave a Reply

Please enter your comment!
Please enter your name here