
ಚುನಾವಣೆಯಲ್ಲಿ ರೈತರ ಅಜೆಂಡಾ ಚರ್ಚೆಯಾಗಬೇಕು
ಮೈಸೂರು: 2023ರ ವಿಧಾನಸಭೆ ಚುನಾವಣೆಯಲ್ಲಿ ರೈತರ ಅಜೆಂಡಾ ಚರ್ಚೆಯಾಗಬೇಕು. ಸಾಲಮನ್ನಾದ ಜತೆಗೆ ಸಾಲಮುಕ್ತ ಕೃಷಿ ವ್ಯವಸ್ಥೆ ರೂಪಿಸಬೇಕು. ಎಂಎಸ್‌ಪಿ ಜಾರಿ ಮಾಡಿ, ಉದ್ಯೋಗಖಾತ್ರಿಯಡಿ 200 ದಿನಗಳ ಕೂಲಿ ನೀಡಬೇಕು. ಸ್ಪಷ್ಟವಾದ ಕೃಷಿ ನೀತಿ ಮತ್ತು ಗುಡಿ ಕೈಗಾರಿಕೆ ಉತ್ತೇಜಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಒತ್ತಾಯಿಸಿದ್ದಾರೆ.
ಜಲದರ್ಶಿನಿ ಅತಿಥಿಗೃಹದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು ಹಾಗೂ ಇತರೆ ದುಡಿಯುವ ವರ್ಗದ ವಿಷಯಗಳು ಮತ್ತು ನಿರುದ್ಯೋಗ ಸಮಸ್ಯೆ, ಮಹಿಳೆ ಹಾಗೂ ಮಕ್ಕಳ ವಿಚಾರಗಳು, ಉಚಿತ ಶಿಕ್ಷಣ, ಆರೋಗ್ಯದ ವಿಷಯಗಳು ಚರ್ಚೆಯಾಗಬೇಕೇ ಹೊರತು ಧರ್ಮ ಮಂದಿರ ಮಸೀದಿಗಳ ವಿಚಾರವಲ್ಲ. ಸಾಮಾನ್ಯ ಜನರ ಅಭಿವೃದ್ಧಿ ಕೇಂದ್ರಿತ ವಿಚಾರದಡಿ ರಾಜಕೀಯ ಪಕ್ಷಗಳು ಚುನಾವಣೆಗೆ ಹೋಗಬೇಕು ಎಂದು ತಿಳಿಸಿದರು.
ಭೂ ಸುಧಾರಣೆ ತಿದ್ದುಪಡಿ ಕಾಯ್ದಿ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಜಾನುವಾರು ಹತ್ಯೆ ನಿಷೇಧ ಹಾಗೂ ಸಂರಕ್ಷನಾ ಕಾಯಿದೆ ವಿರುದ್ಧ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು. ಹಾಗೇ ಎಂಎಸ್‌ಪಿ ಜಾರಿ ಮಾಡುವ ಬಗ್ಗೆ ಗ್ಯಾರಂಟಿ ಕೊಡಬೇಕು ಎಂದು ಒತ್ತಾಯಿಸಿದರು.
ಸಮಾನ ಮನಸ್ಕ ಸಂಘಟನೆಗಳು ಸೇರಿ ಜನತಾ ಪ್ರಣಾಳಿಕೆ ರೂಪಿಸಲಿದ್ದೇವೆ. ಸರ್ವೋದಯ ಪಕ್ಷದಿಂದ ಮತ್ತೊಂದು ಪ್ರಣಾಳಿಕೆ ರೂಪಿಸಲಾಗುತ್ತದೆ. ಮಾ.16ರಂದು ಮೈಸೂರಲ್ಲಿ ರಾಜ್ಯ ಮಟ್ಟದ ಕಾರ್ಯಕಾರಿಣಿ ನಡೆಯಲಿದೆ. ರಾಜ್ಯದ ಇತರ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆ ಚರ್ಚೆ ಮಾಡಲಿದ್ದೇವೆ. ಎಚ್.ಡಿ.ಕೋಟೆ ಮೀಸಲು ಕ್ಷೇತ್ರವಾಗಿದೆ. ಬಾದಾಮಿ, ಸಿಂಧಗಿ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಆಹ್ವಾನ ಬಂದಿದೆ. ಆದರೆ, ಈ ಚುನಾವಣೆಯಲ್ಲಿ ತಾವು ಸ್ಪರ್ಧಿಸುತ್ತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪಂಪ್ ಸೆಟ್‌ಗಳಿಗೆ ಪ್ರತಿದಿನ ೭ ಗಂಟೆ ವಿದ್ಯುತ್ ನೀಡುತ್ತೇವೆ ಎಂದು ಸರ್ಕಾರ ಹೇಳಿತ್ತು. ಆದರೆ ಸರಿಯಾಗಿ ವಿದ್ಯುತ್ ಸರಬರಾಜಾಗದೆ ಬೆಳೆಗಳು ಒಣಗುತ್ತಿವೆ. ಬೇಸಿಗೆ ಆರಂಭವಾಗಿದ್ದು, ಬೆಳಗ್ಗೆ 8 ಗಂಟೆಯಿಂದ 10ರೊಳಗೆ 3ಬಾರಿ ವಿದ್ಯುತ್ ಕಡಿತ ಮಾಡಿದ್ದಾರೆ. ಹೀಗೆ ಮುಂದುವರಿದರೆ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ರೈತ ಮುಖಂಡರ ಸಭೆ ನಡೆಸಿದ್ದ ಸಿಎಂ ಬಸವರಾಜ ಬೊಮ್ಮಾಯಿ ಕೃಷಿ ಪಂಪ್‌ಸೆಟ್‌ಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡುವುದಾಗಿ ನುಡಿದಿದ್ದರು. ಆದರೆ, ನೀರಿಲ್ಲದೇ ನಮ್ಮ ಜಮೀನಿನಲ್ಲಿಯೇ ಬೆಳೆ ಒಣಗುತ್ತಿದೆ. ಸರ್ಕಾರ ಸಮರ್ಪಕ ವಿದ್ಯುತ್ ಪೂರೈಕೆ ಹಾಗೂ ಸುಟ್ಟು ಹೋಗುವ ಟ್ರಾನ್ಸ್‌ಫಾರಂಗಳನ್ನು ೪೮ ಗಂಟೆಯೊಳಗೆ ಬದಲಿಸಬೇಕು. ಸಮರ್ಪಕ ವಿದ್ಯುತ್ ಪೂರೈಕೆ ಮಾಡದಿದ್ದರೆ ರಾಜ್ಯದ ಎಲ್ಲಾ ಎಸ್ಕಾಂ ಕಚೇರಿಗಳ ಎದುರು ಚಳವಳಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕಾರ್ಮಿಕರ ವಿರುದ್ಧ ರೈತರನ್ನು ಎತ್ತಿ ಕಟ್ಟುವುದು ಬ್ರಿಟಿಷರ ಸಂಸ್ಕೃತಿ. ಕರ್ನಾಟಕದಲ್ಲಿದ್ದು ತಮಿಳುನಾಡು ಕಾನೂನು ಅನುಸರಿಸುತ್ತೇನೆ ಎನ್ನುವುದು ಸರಿಯಲ್ಲ. ಈ ವಿಚಾರವಾಗಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಸಮಸ್ಯೆ ಬಗ್ಗೆ ಮನವರಿಕೆ ಮಾಡುವುದಾಗಿ ಬಡಗಲಪುರ ನಾಗೇಂದ್ರ ವಿವರಿಸಿದರು.
ಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರ್ ಕುಮಾರ್, ವಿಜಯೇಂದ್ರ, ಗುರುಮಲ್ಲಪ್ಪ ಮುಂತಾದವರಿದ್ದರು.