ಚುನಾವಣೆ: ಅವಧಿ ನಂತರ ಕ್ಷೇತ್ರದಲ್ಲಿ ಇದ್ದಲ್ಲಿ ಕಾನೂನು ರೀತಿ ಕ್ರಮ : ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ

Spread the love

ಚುನಾವಣೆ: ಅವಧಿ ನಂತರ ಕ್ಷೇತ್ರದಲ್ಲಿ ಇದ್ದಲ್ಲಿ ಕಾನೂನು ರೀತಿ ಕ್ರಮ : ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ

ಮಂಗಳೂರು: ರಾಜ್ಯ ವಿಧಾನ ಪರಿಷತ್ತಿನ ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ದ್ವೈವಾರ್ಷಿಕ ಚುನಾವಣೆಗೆ ಮತದಾನ ಡಿ.10 ರಂದು ನಡೆಯಲಿರುವ ಪ್ರಯುಕ್ತ ಸಾರ್ವಜನಿಕ ಸಭೆ, ಸಮಾರಂಭಗಳು, ಬೈಕ್ ರ್ಯಾಲಿ, ಬೀದಿ ನಾಟಕ ಮುಂತಾದ ಬಹಿರಂಗ ಚುನಾವಣಾ ಪ್ರಚಾರಗಳನ್ನು ಮತದಾನ ಮುಕ್ತಾಯಗೊಳ್ಳುವ 72 ಗಂಟೆಗಳ ಮುಂಚಿತವಾಗಿಯೇ ನಿಲ್ಲಿಸುವಂತೆ ಹಾಗೂ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾ ದಂಡಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರು ಸೂಚಿಸಿದ್ದಾರೆ.

ಚುನಾವಣೆ ಬಹಿರಂಗ ಪ್ರಚಾರ ಮುಕ್ತಾಯವಾದ ಗಡುವಿನ ನಂತರ (ಡಿ.07 ರ ಸಂಜೆ 4 ಗಂಟೆಯಿಂದ) ಚುನಾವಣಾ ಕ್ಷೇತ್ರದ ಮತದಾರರಲ್ಲದವರು,  ರಾಜಕೀಯ ಕಾರ್ಯಕ್ರತರು ಕ್ಷೇತ್ರದಲ್ಲಿ ಉಳಿಯುವಂತಿಲ್ಲ. ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಚುನಾವಣಾ ಕ್ಷೇತ್ರದ ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿರುವ ಮತದಾರರಲ್ಲದ ಹೊರಗಿನ ರಾಜಕೀಯ ಕಾರ್ಯಕರ್ತರು ಮತ್ತು ಮುಖಂಡರು ಬಹಿರಂಗ ಪ್ರಚಾರದ ಗಡುವು ಮುಕ್ತಾಯದ ನಂತರವು ಚುನಾವಣೆ ಕ್ಷೇತ್ರದಲ್ಲಿ ಇದ್ದಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಲ್ಲಿ ಕಾನೂನು ರೀತಿಯಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love