ಚುನಾವಣೆ: ಎಚ್ಚರಿಕೆಯಿಂದ ಕಾರ್ಯನಿರ್ವಹಿಸಲು ಪ್ರಾದೇಶಿಕ ಆಯುಕ್ತ ಡಾ. ಜಿ.ಸಿ. ಪ್ರಕಾಶ್ ಸಲಹೆ

Spread the love

ಚುನಾವಣೆ: ಎಚ್ಚರಿಕೆಯಿಂದ ಕಾರ್ಯನಿರ್ವಹಿಸಲು ಪ್ರಾದೇಶಿಕ ಆಯುಕ್ತ ಡಾ. ಜಿ.ಸಿ. ಪ್ರಕಾಶ್ ಸಲಹೆ

ಮಂಗಳೂರು: 80ಕ್ಕೂ ಹೆಚ್ಚು ವಯಸ್ಸಾದ ಮತದಾರರಿಗೆ ಮನೆಯಿಂದಲೇ ಮತದಾನಕ್ಕೆ ಚುನಾವಣಾ ಆಯೋಗ ಈ ಬಾರಿ ಅವಕಾಶ ಕಲ್ಪಿಸಿಕೊಟ್ಟಿದ್ದು, ಎಚ್ಚರಿಕೆಯಿಂದ ಈ ಕಾರ್ಯನಿರ್ವಹಿಸಬೇಕು ಹಾಗೂ ಯಾರೊಬ್ಬರೂ ಈ ಪ್ರಕ್ರಿಯೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದು ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ಡಾ. ಜಿ.ಸಿ. ಪ್ರಕಾಶ್ ಅವರು ನಿರ್ದೇಶನ ನೀಡಿದರು.

ಅವರು ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಏ.19ರ ಬುಧವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

80 ವರ್ಷ ದಾಟಿದವರಿಗೆ, ವಿಕಲಚೇತನರಿಗೆ ಈ ಬಾರಿಗೆ ಮನೆಯಿಂದಲೇ ಮತದಾನ ಮಾಡಲು ವಿಶೇಷ ಮತದಾನ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಕಾರ್ಯಗಳನ್ನು ನಿರ್ವಹಿಸುವಾಗ ಎಲ್ಲಾ ಅಗತ್ಯ ಜಾಗೃತಿ ವಹಿಸಿ ಕಾರ್ಯ ನಿರ್ವಹಿಸಬೇಕು, ಯಾರಾದರೂ ಹೊರಗುಳಿದಿದ್ದರೆ, ಆಯಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಈ ಬಗ್ಗೆ ಪ್ರಕಟಣೆ ನೀಡಿ ವ್ಯಾಪಕ ಪ್ರಚಾರ ನೀಡಬೇಕು, ಮೇ.10 ರಂದು ನಡೆಯುವ ಮತದಾನ ದಿನದಂದು ಪ್ರತಿಯೊಬ್ಬರೂ ಮತದಾನ ಕೇಂದ್ರಗಳಿಗೆ ತೆರಳಿ ಮತ ಚಲಾಯಿಸಬೇಕು ಎಂದರು.

ಮುಕ್ತ ಹಾಗೂ ಪಾರದರ್ಶಕ ಚುನಾವಣೆ ಪ್ರತಿಯೊಬ್ಬರು ಶ್ರಮಿಸಬೇಕು, ಈ ಪ್ರಕ್ರಿಯೆಗಳಲ್ಲಿ ನಿಯೋಜನೆಗೊಂಡಿರುವವರು ಚುನಾವಣಾ ಆಯೋಗ ಆಗಿಂದಾಗ್ಗೆ ನೀಡುವ ನಿರ್ದೇಶನಗಳನ್ನು ಪಾಲಿಸಬೇಕು,
ಮತಗಟ್ಟೆಗಳಲ್ಲಿ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ವಿದ್ಯುತ್ ಸಂಪರ್ಕ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವುದರ ಜೊತೆಗೆ ತುರ್ತು ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆ ನೀಡಲು ಹೆಲ್ತ್ ಕಿಟ್ ಗಳನ್ನು ಇರಿಸಿಕೊಳ್ಳಬೇಕು ಎಂದರು.

ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣೆ ಸಿದ್ದತೆಗೆ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಮಂಗಳೂರು ನಗರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮಟೆ, ಸುಳ್ಯ ಹಾಗೂ ಪುತ್ತೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವೆಚ್ಚವೀಕ್ಷಕರು, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಚುನಾವಣಾ ಕಾರ್ಯಕ್ಕೆ ನಿಯೋಜಿಸಿರುವ ವಿವಿಧ ನೋಡೆಲ್ ಅಧಿಕಾರಿಗಳು ಸಭೆಯಲ್ಲಿದ್ದರು.


Spread the love