
ಚೈತ್ರಾ ಕುಂದಾಪುರ ಪ್ರಕರಣದ ಬಗ್ಗೆ ಸಂಘ ಪರಿವಾರ ಹಾಗೂ ಬಿಜೆಪಿ ಮೌನ ಮುರಿಯಲಿ: ವಿಕಾಸ್ ಹೆಗ್ಡೆ
- ಸಂಸ್ಕಾರ, ಸಂಸ್ಕೃತಿ ಬಗ್ಗೆ ಮಾರುದ್ಧ ಭಾಷಣ ಮಾಡುವ ನಿಮ್ಮವರ ಸಂಸ್ಕಾರ, ಸಂಸ್ಕೃತಿ ಇದೇನಾ: ವಿಕಾಸ್ ಹೆಗ್ಡೆ ಪ್ರಶ್ನೆ
ಕುಂದಾಪುರ: ವಿಧಾನಸಭಾ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದಿಂದ ಉದ್ಯಮಿಯೋರ್ವರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವಂಚಿಸಿ ಈಗ ಪೊಲೀಸ್ ವಶದಲ್ಲಿರುವ ಚೈತ್ರಾ ಕುಂದಾಪುರ ವಂಚನೆ ಪ್ರಕರಣದ ಕುರಿತು ಸಂಘ ಪರಿವಾರ ಹಾಗೂ ಬಿಜೆಪಿ ನಾಯಕರುಗಳು ಉತ್ತರಿಸಬೇಕು. ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ವಿಕಾಸ್ ಹೆಗ್ಡೆ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಚೈತ್ರಾ ಕುಂದಾಪುರ ವಂಚನೆಗೆ ಬಳಸಿಕೊಂಡದ್ದು ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಹಾಗೂ ಬಿಜೆಪಿಯನ್ನು. ಈಕೆಗೆ ಸಂಘ ಪರಿವಾರ ಹಾಗೂ ಬಿಜೆಪಿಯ ನಿಕಟ ಸಂಪರ್ಕ ಇರುವುದು ಎಲ್ಲರಿಗೂ ತಿಳಿದ ವಿಚಾರ. ಬಿಜೆಪಿ ಹಾಗೂ ಸಂಘ ಪರಿವಾರದ ಕಾರ್ಯಕ್ರಮಗಳಲ್ಲಿ ಪ್ರಧಾನ ಭಾಷಣಕಾರರಾಗಿ ಭಾಗವಹಿಸಿ ಸಂಸ್ಕಾರ, ಸಂಸ್ಕೃತಿ ಬಗ್ಗೆ ಮಾರುದ್ಧ ಭಾಷಣ ಮಾಡುವ ನಿಮ್ಮವರ ಸಂಸ್ಕಾರ, ಸಂಸ್ಕೃತಿ ಇದೇನಾ ಎಂದು ಪ್ರಶ್ನಿಸಿದ್ದಾರೆ.
ಸಂಘ ಪರಿವಾರ ಹಾಗೂ ಬಿಜೆಪಿಯವರು ಬೇರೆಯವರಿಗೆ ಉಪದೇಶ ಮಾಡುವ ಮೊದಲು ತಮ್ಮಲ್ಲಿ ಅದನ್ನು ಬೆಳೆಸಿಕೊಂಡು ನಂತರ ಬೇರೆಯವರಿಗೆ ಉಪದೇಶ ಮಾಡಲಿ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.