ಜಗದೀಶ್ ಅಧಿಕಾರಿ ಉಚ್ಚಾಟನೆ ಮಾಡದಿದ್ದಲ್ಲಿ ಬಿಜೆಪಿ ಕಚೇರಿಗೆ ಮುತ್ತಿಗೆ – ಅಕ್ಷಿತ್ ಸುವರ್ಣ ಎಚ್ಚರಿಕೆ

Spread the love

ಜಗದೀಶ್ ಅಧಿಕಾರಿ ಉಚ್ಚಾಟನೆ ಮಾಡದಿದ್ದಲ್ಲಿ ಬಿಜೆಪಿ ಕಚೇರಿಗೆ ಮುತ್ತಿಗೆ – ಅಕ್ಷಿತ್ ಸುವರ್ಣ ಎಚ್ಚರಿಕೆ

ಮಂಗಳೂರು: ಬಿಲ್ಲವರ ಆರಾಧ್ಯರಾದ ಕೋಟಿ ಚೆನ್ನಯರ ಅವಹೇಳನಕಾರಿಯಾಗಿ ಮಾತನಾಡಿರುವ ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿಯವರನ್ನು ತಮ್ಮ ಪಕ್ಷದಿಂದ ಇನ್ನೂ ಕೂಡ ಉಚ್ಛಾಟನೆ ಮಾಡದಿರುವ ಹಿಂದಿನ ಕಾರಣವೇನು ಎಂದು ದಕ್ಷಿಣ ಕನ್ನಡ ಜಿಲ್ಲಾ ಯುವ ಜನತಾ ದಳದ ಅಧ್ಯಕ್ಷರಾದ ಅಕ್ಷಿತ್ ಸುವರ್ಣ ಪ್ರಶ್ನಿಸಿದ್ದಾರೆ.

ಜಿಲ್ಲೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಬಿಲ್ಲವರ ಪಾತ್ರ ಎಷ್ಟಿದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದ್ದು ಕೋಟಿ ಚೆನ್ನಯನ ಹೆಸರು ಹೇಳಿಕೊಂಡು ಮತ ಪಡೆದ ಮತ ಪಡೆದ ಬಿಜೆಪಿ ಇಂದು ಅದೇ ಬಿಲ್ಲವರ ಆರಾಧ್ಯರಾದ ಕೋಟಿ ಚೆನ್ನಯರ ಬಗ್ಗೆ ಅವರದ್ದೇ ಪಕ್ಷದ ನಾಯಕನೋರ್ವ ಅವಹೇಳನಕಾರಿಯಾಗಿ ಮಾತನಾಡಿದರೂ ಕೂಡ ಜಾಣ ಮೌನಪ್ರದರ್ಶಿಸುತ್ತಿದೆ. ಬಿಲ್ಲವ ಶಾಸಕರು, ಮಂತ್ರಿಗಳು ಈ ಬಗ್ಗೆ ಒಂದೇ ಒಂದು ಮಾತನ್ನು ಕೂಡ ಆಡುತ್ತಿಲ್ಲ. ಬಿಜೆಪಿಗರಿಗೆ ಬಿಲ್ಲವ ಸಮುದಾಯದ ಮೇಲೆ ಪ್ರೀತಿ ಕಾಳಜಿ ಅಭಿಮಾನ ಹಾಗೂ ಕೋಟಿ ಚೆನ್ನಯರ ಬಗ್ಗೆ ಗೌರವ ಇರುವುದು ನಿಜವಾದಲ್ಲಿ ಇಷ್ಟರೊಳಗೆ ಅಧಿಕಾರಿಯನ್ನು ತಮ್ಮ ಪಕ್ಷದಿಂದ ಉಚ್ಚಾಟನೆ ಮಾಡುವು ಧೈರ್ಯ ತೋರುತ್ತಿತ್ತು ಆದರೆ ಬಿಜೆಪಿಗರದ್ದು ಕೇವಲ ಸುಳ್ಳು ಅಭಿಮಾನ ಎನ್ನುವುದು ಇದರಿಂದಲೇ ತಿಳಿಯುತ್ತದೆ. ಬಿಜೆಪಿ ಪಕ್ಷ ಬಿಲ್ಲವರ ಬಗ್ಗೆ ತೋರುತ್ತಿರುವ ನಿರ್ಲಕ್ಷ್ಯವನ್ನು ಇನ್ನಾದರೂ ಸಮುದಾಯ ಮುಂದಿನ ದಿನಗಳಲ್ಲಿ ಇಂತಹ ಪಕ್ಷಗಳಿಗೆ ಮತ ನೀಡುವ ಸಂದರ್ಭದಲ್ಲಿ ಅರಿತು ಮತ ನೀಡುವಂತೆ ಅವರು ವಿನಂತಿಸಿದ್ದಾರೆ

ಬಿಜೆಪಿಯಲ್ಲಿರುವ ಬಿಲ್ಲವ ಸಮುದಾಯದ ಮಂತ್ರಿಗಳು, ಶಾಸಕರು ತಮ್ಮ ಸಮುದಾಯಕ್ಕೆ ಆಗಿರುವ ಅವಮಾನವನ್ನು ಇನ್ನಾದರೂ ತಮ್ಮ ಪಕ್ಷ ಪ್ರೀತಿಯಿಂದ ಹೊರಬಂದು ಪ್ರತಿಭಟಿಸಿ ಈ ಮೂಲಕ ತಮ್ಮನ್ನು ಆರಿಸಿಕಳುಹಿಸಿದ ಸಮುದಾಯಕ್ಕೆ ನ್ಯಾಯ ಒದಗಿಸಲಿ ಅಲ್ಲದೆ ಈ ಕೂಡಲೇ ಜಗದೀಶ್ ಅಧಿಕಾರಿಯವರನ್ನು ತಮ್ಮ ಬಿಜೆಪಿ ಪಕ್ಷದಿಂದ ಉಚ್ಚಾಟಿಸಲಿ ಇಲ್ಲವಾದಲ್ಲಿ ಯುವ ಜೆಡಿಎಸ್ ವತಿಯಿಂದ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಅವರು ಎಚ್ಚರಿಸಿದ್ದಾರೆ.

ಜಿಲ್ಲೆಯಲ್ಲಿ ಯಾವುದೇ ಘಟನೆ ನಡೆದರೂ ಕೂಡ ಮುಂದೆ ನಿಂತು ಪ್ರತಿಭಟಿಸುತ್ತಿರುವ ಹಿಂದೂ ಧರ್ಮದ ರಕ್ಷಕರು ಇಂದು ಯಾಕೆ ಮೌನವಾಗಿದ್ದಾರೆ. ಹಾಗಿದ್ದರೆ ಕೋಟಿ ಚೆನ್ನಯ್ಯರು ಹಿಂದೂಗಳು ಆರಾಧಿಸುವ ದೇವರಲ್ಲವೆ? ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಲು ಈ ಹಿಂದೂ ರಕ್ಷಕರು ಎಂದು ಹೇಳಿಕೊಳ್ಳುವವರಿಗೆ ಬಿಲ್ಲವರು ಬೇಕಾಗಿದ್ದು ಅದೇ ಸಮುದಾಯದವರಿಗೆ ಅವಮಾನವಾದಾಗ ಮಾತ್ರ ಇವರುಗಳು ಮೌನವಹಿಸುತ್ತಿರುವುದು ನೋಡಿದಾಗ ಇವರ ನೈಜ ಹಿಂದುತ್ವ ಏನು ಎನ್ನುವುದು ಕಾಣುತ್ತಿದೆ. ತಮ್ಮ ಸಂಘಟನೆಗೆ ಸೇರಿಕೊಂಡು ಜೈಲಿಗೆ ಹೋಗಲು ಬಿಲ್ಲವ ಯುವಕರು ಬೇಕು ಅದೇ ಬಿಲ್ಲವ ಸಮುದಾಯಕ್ಕೆ ಅವಮಾನ ಆದಾಗ ಜಿಲ್ಲೆಯಲ್ಲಿನ ಹಿಂದೂ ಸಂಘಟನೆಗಳು ಜಾಣ ಮೌನವಾಗಿವೆ ಇನ್ನಾದರೂ ಎಚ್ಚೆತ್ತು ಜಗದೀಶ್ ಅಧಿಕಾರಿಯ ಅಹಂಕಾರದ ಹೇಳಿಕೆಗೆ ಸೂಕ್ತ ಉತ್ತರ ನೀಡುವ ಕೆಲಸ ಹಿಂದೂ ಸಂಘಟನೆಗಳು ಮಾಡಲಿ ಎಂದು ಅವರು ಆಗ್ರಹಿಸಿದ್ದಾರೆ.


Spread the love