ಜನನ, ಮರಣ ನೋಂದಣಿ ತ್ವರಿತಗೊಳಿಸಲು ಸೂಚನೆ

Spread the love

ಜನನ, ಮರಣ ನೋಂದಣಿ ತ್ವರಿತಗೊಳಿಸಲು ಸೂಚನೆ

ಬೆಂಗಳೂರು: ನಾಗರಿಕ ನೋಂದಣಿ ಪದ್ದತಿಯಡಿ ಜನನ ಮತ್ತು ಮರಣ ನೋಂದಣಿ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಕರ್ನಾಟಕ ಸರಕಾರದ ಯೋಜನಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ಶಾಲಿನಿ ರಜನೀಶ್ ಅವರು ಸೂಚನೆ ನೀಡಿದ್ದಾರೆ.

ಬೆಂಗಳೂರಿನ ಬಹುಮಹಡಿ ಕಟ್ಟಡದ ಅಪರ ಮುಖ್ಯ ಕಾರ್ಯದರ್ಶಿಗಳ ಕಚೇರಿ ಸಭಾಂಗಣದಲ್ಲಿ ನಾಗರಿಕ ನೋಂದಣಿ ಪದ್ಧತಿಗೆ ಸಂಬಂಧಿಸಿದಂತೆ ಗುರುವಾರ ನಡೆದ ಅಂತರ್ ಇಲಾಖೆಯ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಕರ್ನಾಟಕ ಜನನ ಮತ್ತು ಮರಣಗಳ ನೋಂದಣಿಯ ನಿಯಮಗಳು 1999 ರ ನಿಯಮ 5(3) ರನ್ವಯ ಸಾರ್ವಜನಿಕರು ಜನನ ಮತ್ತು ಮರಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ನೋಂದಣಿಗಾಗಿ ನೋಂದಣಾಧಿಕಾರಿಗಳಿಗೆ ಜನನ ಮತ್ತು ಮರಣ ಘಟಿಸಿದ 21 ದಿನಗಳೊಳಗಾಗಿ ನಮೂನೆ-1 (ಜನನ ವರದಿ) ಮತ್ತು ನಮೂನೆ-2 (ಮರಣ ವರದಿ)ರಲ್ಲಿ ಮಾಹಿತಿ ಸಲ್ಲಿಸಬೇಕು ಎಂದು ಅವರು ತಿಳಿಸಿದರು.

2021ರ ವರ್ಷದಲ್ಲಿ ರಾಜ್ಯದಲ್ಲಿ ಇ-ಜನ್ಮ ತಂತ್ರಾಂಶದಲ್ಲಿ ಒಟ್ಟು 8,99,065 ಜನನಗಳು ನೋಂದಾಯಿಸಿದ್ದು, ಈ ಪೈಕಿ ಕೇವಲ 5,39,532 ಜನನ ಘಟನೆಗಳು ಮಾತ್ರ ಅಂದರೇ ಶೇ.60ರಷ್ಟು ಹಾಗೂ ಅದೇ ರೀತಿ 6,66,402ಮರಣ ಘಟನೆಗಳು ನೋಂದಾಯಿಸಿದ್ದು,ಈ ಪೈಕಿ 4,12,053 ಘಟನೆಗಳು ಅಂದರೇ ಶೇ.62ರಷ್ಟು ನಿಗದಿಪಡಿಸಿದ 21 ದಿನದ ಅವಧಿಯೊಳಗೆ ನೋಂದಣಿಯಾಗಿರುವುದಕ್ಕೆ ಬೇಸರ ವ್ಯಕ್ತಪಡಿಸಿದ ಅಪರ ಮುಖ್ಯ ಕಾರ್ಯದರ್ಶಿಗಳಾದ ಶಾಲಿನಿ ರಜನೀಶ್ ಅವರು ಘಟಿಸಿದ ಎಲ್ಲಾ ಘಟನೆಗಳು ಶೇ.100ರಷ್ಟು ಸದರಿ ಅವಧಿಯೊಳಗೆ ನೋಂದಣಿ ಮಾಡಿಕೊಳ್ಳಲು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಅಟಲ್ ಜೀ ಜನಸ್ನೇಹಿ ಕೇಂದ್ರ, ಸೇವಾ ಸಿಂಧು, ಬಾಪೂಜಿ ಸೇವಾ ಕೇಂದ್ರ, ಹಾಗೂ ಗ್ರಾಮ ಒನ್ ಕೇಂದ್ರಗಳಲ್ಲಿ ಪೂರಕ ದಾಖಲೆಗಳೊಂದಿಗೆ ಮಾಹಿತಿಯನ್ನು ಸಲ್ಲಿಸಿ ನೋಂದಾಯಿಸಿ ಜನನ, ಮರಣ ಪ್ರಮಾಣ ಪತ್ರಗಳನ್ನು ಪಡೆಯಲು ಅವಕಾಶವನ್ನು ಕಲ್ಪಿಸಲಾಗಿದೆ. ಇದರ ಪ್ರಯೋಜನವನ್ನು ನಾಗರಿಕರು ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.ನಗರ ಪ್ರದೇಶಕ್ಕೆ ಸಂಬಂಧಿಸಿದಂತೆ ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಜನನ ಮರಣ ನೋಂದಣಿ ಘಟಕಗಳಲ್ಲಿ ನೋಂದಾಯಿಸಿ ಪ್ರಮಾಣ ಪತ್ರಗಳನ್ನು ಪಡೆಯಬೇಕು.

ಜನನ ನೋಂದಣಿಗಾಗಿ ಕುಟುಂಬದ ಪಡಿತರ ಚೀಟಿ ಸಂಖ್ಯೆ, ತಂದೆ, ತಾಯಿಯ ಆಧಾರ್ ಕಾರ್ಡ್‍ನ ಪ್ರತಿ, ಮತದಾರರ ಗುರುತಿನ ಚೀಟಿ,ಪಾನ್ ಕಾರ್ಡ್ ಸಂಖ್ಯೆ, ಚಾಲನಾ ಪರವಾನಗಿ, ಪಾನ್ ಕಾರ್ಡ್ ಸಂಖ್ಯೆ,ಪಾಸ್‍ಪೋರ್ಟ್ ಸಂಖ್ಯೆ ಹಾಗೂ ಮರಣ ನೋಂದಣಿಗಾಗಿ ಮೃತರ ಕುಟುಂಬದ ಪಡಿತರ ಚೀಟಿ ಸಂಖ್ಯೆ,ಮೃತರ ಆಧಾರ್ ಕಾರ್ಡ್‍ನ ಪ್ರತಿ,ಮೃತರ ಮತದಾರರ ಗುರುತಿನ ಚೀಟಿ, ಮೃತರ ಪಾನ್ ಕಾರ್ಡ್ ಸಂಖ್ಯೆ,ಮೃತರ ಚಾಲನಾ ಪರವಾನಗಿ,ಮೃತರ ಪಾಸ್ ಪೋರ್ಟ್ ಸಂಖ್ಯೆ, ಸ್ಯಾಟ್ಸ್ ಐಡಿ,ಎಸ್ಸೆಸ್ಸೆಲ್ಸಿ, ಪಿಯುಸಿ ನೋಂದಣಿ ಸಂಖ್ಯೆಗಳ ಪೂರಕ ದಾಖಲೆಗಳನ್ನು ಸಲ್ಲಿಸಬೇಕು ಎಂದು ಅವರು ತಿಳಿಸಿದರು.

ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಘಟಿಸಿದ ಜನನ ಮರಣಗಳನ್ನು ಆಸ್ಪತ್ರೆಯ ವೈದ್ಯಾಧಿಕಾರಿಗಳು ಸಂಬಂಧಿಸಿದ ನೋಂದಣಾಧಿಕಾರಿಗಳಿಗೆ ಇ-ಜನ್ಮ ತಂತ್ರಾಂಶದಲ್ಲಿ ಮಾಹಿತಿ ಸಲ್ಲಿಸಿ ನೋಂದಣಿ ಮಾಡಿಸಿದ ನಂತರ ಪ್ರಮಾಣ ಪತ್ರವನ್ನು ಪಡೆಯಬಹುದು ಎಂದು ಅವರು ಹೇಳಿದರು.

ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಸಂಭವಿಸುವ ಜನನ ಪ್ರಕರಣಗಳಲ್ಲಿ ತಾಯಿ ಹಾಗೂ ಮಗು ಆಸ್ಪತ್ರೆಯಿಂದ ಬಿಡುಗಡೆ ಹೊಂದುವ ಸಂದರ್ಭದಲ್ಲಿ ಜನನ ಪ್ರಮಾಣ ಪತ್ರವನ್ನು ಪಡೆದುಕೊಳ್ಳಲು ಅವಕಾಶವಿದ್ದು, ಈ ಸೌಲಭ್ಯಗಳ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಜನನ,ಮರಣಗಳ ಮುಖ್ಯ ನೋಂದಣಾಧಿಕಾರಿಗಳು,ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ನಿರ್ದೇಶಕರು ಸೇರಿದಂತೆ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳು ಇದ್ದರು.


Spread the love