ಜನಪದ ಗೀತೆಗಳು ಕನ್ನಡದ ವೇದಗಳು: ಉ.ಮ. ರೇವಣ್ಣ

Spread the love

ಜನಪದ ಗೀತೆಗಳು ಕನ್ನಡದ ವೇದಗಳು: ಉ.ಮ. ರೇವಣ್ಣ

ಜನಪದ ಗೀತೆಗಳು ಕನ್ನಡದ ವೇದಗಳಿದ್ದಂತೆ ಎಂದು ಸಿಂಗಪುರದ ನ್ಯಾನೋ ಸಾಫ್ಟ್ ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರೀ ಉ.ಮ. ರೇವಣ್ಣನವರು ಹೇಳಿದರು.

ಮೈಸೂರು ಜೆಎಸ್‌ಎಸ್ ಮಹಾವಿದ್ಯಾಪೀಠದ ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿಯ ವತಿಯಿಂದ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯಸಾನ್ನಿಧ್ಯದಲ್ಲಿ ಏರ್ಪಡಿಸಿದ್ದ ’ಜ್ಞಾನವಾರಿಧಿ-26’ ಡಿಜಿಟಲ್ ಸಾಪ್ತಾಹಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಬದುಕಿನಲ್ಲಿ ಜನಪದ ವಿಷಯ ಕುರಿತು ಉಪನ್ಯಾಸ ನೀಡಿದರು.

ಜನಪದ ಸಾಹಿತ್ಯ ಹೆಸರಿಲ್ಲದ ಹಸಿರು ಕಾವ್ಯ. ಅನಕ್ಷರಸ್ಥ ಅನಾಮಧೇಯರು ರಚಿಸಿದ ಅಮರ ಕಾವ್ಯಸಂಪತ್ತು. ಬೆಳಗೆದ್ದು ನಾನು ಯಾರ‍್ಯಾರ ನೆನೆಯಲಿ ಎಳ್ಳು ಜೀರಿಗೆ ಬೆಳೆಯೋಳ ಎಂದು ಭೂತಾಯಿಯನ್ನು ಮೊದಲು ಸ್ಮರಿಸಲಾಗುತ್ತಿತ್ತು. ಜನಪದರು ದೇವರನ್ನು ಎಂದೂ ಕಾಡಿಬೇಡಲಿಲ್ಲ. ದೇವರನ್ನು ಪ್ರಶ್ನಿಸುತ್ತಿದ್ದರು. ನಿರ್ಮಲವಾದ ಭಕ್ತಿಯನ್ನು ಹೊಂದಿದ್ದರು. ಎಲ್ಲ ವಸ್ತುಗಳಲ್ಲೂ ದೇವರನ್ನು ಕಂಡವರು. ರಾಗಿಯನ್ನು ಬೀಸುತ್ತಾ ತವರನ್ನು ನೆನೆಯುತ್ತಿದ್ದರು. ಜನಪದರಲ್ಲಿ ಮದುವೆ ಎಂಬುದು ಸಂಭ್ರಮದ ಕೂಟ. ವಾರಗಟ್ಟಲೇ ಗ್ರಾಮದವರೆಲ್ಲ ಸೇರಿ ಮಾಡುತ್ತಿದ್ದರು. ಸೋಬಾನೆ ಪದಗಳನ್ನು ಹಾಡುತ್ತಿದ್ದರು. ಇದರಿಂದ ಸಂಬಂಧಗಳು ಗಟ್ಟಿಯಾಗುತ್ತಿದ್ದವು. ಎಲ್ಲರನ್ನೂ ಅತ್ಯಂತ ಪ್ರೀತಿಯಿಂದ ಕಾಣಲಾಗುತ್ತಿತ್ತು. ಟಿವಿ ಧಾರಾವಾಹಿಗಳು ಇಂದು ಜನರ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತಿವೆ. ಹೃದಯ ವೈಶಾಲ್ಯತೆ ಕಡಿಮೆಯಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಜನಪದರಲ್ಲಿ ಸಾಕಷ್ಟು ಶಬ್ದ ಭಂಡಾರವಿತ್ತು ಎಂಬುದು ಅವರು ಹಾಡುತ್ತಿದ್ದ ಗೀತೆಗಳಿಂದಲೇ ಸ್ಪಷ್ಟವಾಗುತ್ತದೆ. ಜೋಗಿ ಜಂಗಮರು, ಬಳೆಗಾರ ಬಂದರೆ ಹೆಣ್ಣುಮಕ್ಕಳು ಹಾಡಿನ ಮೂಲಕ ತವರಿಗೆ ಹೋಗುವಂತೆ ಹೇಳುತ್ತಿದ್ದರು. ಜನಪದರಿಗೆ ಸಮಯ ಪ್ರಜ್ಞೆ ಇತ್ತು. ಆಡಿ ಬಾ ನನಕಂದ ಅಂಗಾಲ ತೊಳದೇನ, ತೆಂಗಿನಕಾಯಿ ತಿಳಿನೀರ ತಕ್ಕೊಂಡು ಎಂದು ಮಕ್ಕಳನ್ನು ಪ್ರೀತಿಸಲಾಗುತ್ತಿತ್ತು. ತಂದೆ ತಾಯಿಯರನ್ನು ಗೌರವಿಸಲಾಗುತ್ತಿತ್ತು ಎಂದು ಹೇಳಿದರು. ಉಪನ್ಯಾಸದ ನಂತರ ವೀಕ್ಷಕರ ಆಯ್ದ ಪ್ರಶ್ನೆಗಳಿಗೆ ಉತ್ತರಿಸಲಾಯಿತು.


Spread the love