ಜನರಲ್ಲಿ ಚಿರತೆ ಭಯ ಹೋಗಲಾಡಿಸಲು ಅಗತ್ಯ ಕ್ರಮ

Spread the love

ಜನರಲ್ಲಿ ಚಿರತೆ ಭಯ ಹೋಗಲಾಡಿಸಲು ಅಗತ್ಯ ಕ್ರಮ

ಮೈಸೂರು: ತಿ.ನರಸೀಪುರ ತಾಲೂಕು ವ್ಯಾಪ್ತಿಯಲ್ಲಿ ಚಿರತೆ ದಾಳಿಯಿಂದ ಜನರು ಭಯ ಭೀತರಾಗಿದ್ದಾರೆ. ಅಧಿಕಾರಿಗಳು ಜನರ ಭಯ ನಿವಾರಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಾನವ-ವನ್ಯಜೀವಿ ಸಂಘರ್ಷ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 10 ವರ್ಷದ ಬಾಲಕ ಮಗನನ್ನು ಕಳೆದುಕೊಂಡ ಮಗನನ್ನು ನೋಡಿದರೆ ಕರುಳು ಕಿತ್ತು ಬರುತ್ತದೆ. ಅಧಿಕಾರಿಗಳು ಚಿರತೆ ಸೆರೆಯನ್ನು ಗಂಭೀರವಾಗಿ ಪರಿಗಣಿಸಿ ಜನರಿಗೆ ಧೈರ್ಯ ತುಂಬಬೇಕು. ತಿ.ನರಸೀಪುರ ತಾಲೂಕಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಬಗ್ಗೆ ಒಳ್ಳೆಯ ಅಭಿಪ್ರಾಯ ಇಲ್ಲ. ಮರಗಳ ಕೊಂಬೆ ಕಟಾವು ಮಾಡಬೇಕು. ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬಸ್ ಸಂಪರ್ಕ ಕಲ್ಪಿಸಬೇಕು. ಇಲ್ಲದಿದ್ದರೆ ಮಕ್ಕಳ ಭವಿಷ್ಯ ಹಾಳಾಗುತ್ತದೆ ಎಂದು ಹೇಳಿದರು.

ಇದಕ್ಕೂ ಮುನ್ನ ಚಿರೆತೆ ಸೆರೆಗೆ ಕೈಗೊಂಡಿರುವ ಕ್ರಮಗಳ ಕುರಿತು ವಿವರಿಸಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಹೇಶ್ ಕುಮಾರ್, ಚಿರೆತೆ ಸೆರೆಗೆ 158 ಅಧಿಕಾರಿಗಳ ತಂಡ ರಚಿಸಲಾಗಿದೆ. 19ಬೋನು ಇಡಲಾಗಿದೆ. 69 ಕ್ಯಾಮೆರಾ ಟ್ರ್ಯಾಪ್, 11 ಜಿಎಸ್‌ಎಂ ಕ್ಯಾಮೆರಾ, 2 ಥರ್ಮಲ್ ಡ್ರೋನ್ ಬಳಸಲಾಗಿದೆ. ಹೆಲಿಫ್ಯಾಂಟ್ ಟಾಸ್ಕ್ ಫೋರ್ಸ್ ಮಾದರಿಯಲ್ಲಿ ಮುಖ್ಯಮಂತ್ರಿಗಳು ಚಿರತೆ ಟಾಸ್ಕ್ ಫೋರ್ಸ್ ರಚಿಸಲು ಆದೇಶಿಸಿದ್ದಾರೆ. ಮೃತಪಟ್ಟವರ ಕುಟುಂಬಕ್ಕೆ 15 ಲಕ್ಷ ಪರಿಹಾರ ನೀಡಲಾಗುತ್ತಿದೆ. 24×7 ಕಂಟ್ರೋಲ್ ರೂಂ ಆರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ ಸೆರೆ ಹಿಡಿದಿರುವ ಪ್ರಾಣಿಗಳ ಅಧ್ಯಯನದ ಮೇರೆಗೆ ಹೇಳುವುದಾದರೆ ಚಿರತೆ ಕಾಡಿನಲ್ಲೇ ವಾಸಿಸುವ ಪ್ರಾಣಿಯಲ್ಲ. ಆಹಾರಕ್ಕೆ ನಾಯಿ, ಹಂದಿಯನ್ನು ಅವಲಂಬಿಸಿದೆ. ಚಿರತೆ ವೇಗವಾಗಿ ಓಡುತ್ತದೆ. ಮರ ಹತ್ತುತ್ತದೆ. ಪೊದೆಯಲ್ಲೂ ಇರಬಲ್ಲದು. ಹಾಗಾಗಿ ಸೆರೆ ಅಷ್ಟು ಸುಲಭವಲ್ಲ ಎಂದು ಹೇಳಿದರು.

ಶಾಸಕ ಅಶ್ವಿನ್ ಕುಮಾರ್ ಮಾತನಾಡಿ, ತಮ್ಮ ಕ್ಷೇತ್ರದಲ್ಲಿ ನಾಯಿಗಳಿಗಿಂತ ಚಿರತೆಗಳು ಹೆಚ್ಚಿವೆ. ಹಾಗೇ ಚಿರತೆ ಮರಿಗಳೂ ಹೆಚ್ಚಿವೆ. ಚಿರತೆ ಸೆರೆಗೆ ನುರಿತ ತಂಡ ನಿಯೋಜಿಸಬೇಕು ಎಂದು ಮನವಿ ಮಾಡಿದರು.

ಬಸ್ ಸಮಸ್ಯೆ ನಿವಾರಣೆಗೆ ಮಂಡ್ಯ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಕೆಎಸ್‌ಆರ್‌ಟಿಸಿ ಜಿಲ್ಲಾಧಿಕಾರಿಗಳ ಸಭೆ ನಡೆಸಬೇಕು. ಈ ವೇಳೆ ಮಧ್ಯ ಪ್ರವೇಶಿಸಿದ ಅಧಿಕಾರಿಯೊಬ್ಬರು ಕಲೆಕ್ಷನ್ ಇಲ್ಲದಿದ್ದರಿಂದ ಬಸ್ ಸಂಚಾರ ರದ್ದು ಮಾಡಲಾಗಿದೆ ಎಂದುತ್ತರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕಲೆಕ್ಷನ್ ಇಲ್ಲದಿರುವ ಬಗ್ಗೆ ನಮಗೇ ಹೇಳಬಾರದು. ಕೂಡಲೇ ಬಸ್ ಸಂಚಾರ ಆರಂಭಿಸುವಂತೆ ಸೂಚಿಸಿದರು.

ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಾತನಾಡಿ, ಪೊಲೀಸ್, ಕಂದಾಯ, ಅರಣ್ಯ ಇಲಾಖೆ ಮತ್ತು ಸ್ಥಳೀಯ ಯುವಕರನ್ನು ಸೇರಿಸಿಕೊಂಡು ವಿಶೇಷ ತಂಡ ರಚಿಸಲು ಸಿದ್ಧತೆ ಮಾಡಿದ್ದೇವೆ. 3 ವರ್ಷಕ್ಕಿಂತ ಬೀಳು ಬಿಟ್ಟ ಜಮೀನು ಮಾಲೀಕರಿಗೆ ಶುಚಿಗೊಳಿಸಲು ನೋಟಿಸ್ ನೀಡಲಾಗಿದೆ ಎಂದು ಸಚಿವರ ಗಮನಕ್ಕೆ ತಂದರು.


Spread the love