ಜನರ ಬದುಕಿನ ಪ್ರಶ್ನೆ ಗೆಲ್ಲಬೇಕಾದರೆ ಬಿಜೆಪಿಯನ್ನು ಸೋಲಿಸಿ- ಸಂತೋಷ್ ಬಜಾಲ್

Spread the love

ಜನರ ಬದುಕಿನ ಪ್ರಶ್ನೆ ಗೆಲ್ಲಬೇಕಾದರೆ ಬಿಜೆಪಿಯನ್ನು ಸೋಲಿಸಿ- ಸಂತೋಷ್ ಬಜಾಲ್

ರಾಜ್ಯದ ಅಧಿಕಾರ ಚುಕ್ಕಾಣಿಯಲ್ಲಿರುವ ಬಿಜೆಪಿ ಸರಕಾರದ ಅವಧಿಯಲ್ಲಿ ಜನರ ಯಾವೊಂದು ಆಶೋತ್ತರಗಳನ್ನು ಈಡೇರಿಸಲಿಲ್ಲ. ಭ್ರಷ್ಟಾಚಾರ, ಅಕ್ರಮ ಹಣ ಸಂಪಾದನೆ, ಮತೀಯ ವಿಭಜನೆಯಂತಹ ರಾಜಕಾರಣದಲ್ಲಿ ಜನರ ಬದುಕಿನ ಪ್ರಶ್ನೆಯನ್ನು ಕಡೆಗಣಿಸಿದಲ್ಲದೆ ಸೋಲಿಸುತ್ತಾ ಬಂದಿದೆ. ಈ ರಾಜ್ಯದ ಜನರ ಬದುಕಿನ ಪ್ರಮುಖ ವಿಚಾರಗಳಾದ ಉದ್ಯೋಗ, ಆರೋಗ್ಯ, ಶಿಕ್ಷಣದಂತಹ ಬಹುಮುಖ್ಯ ಪ್ರಶ್ನೆಗಳು ಗೆಲ್ಲಬೇಕಾದರೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಸೋಲಬೇಕಾಗಿದೆ ಎಂದು ಸಿಪಿಐಎಂ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸಂತೋಷ್ ಬಜಾಲ್ ಇಂದು (23-4-23) ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಜಪ್ಪಿನಮೊಗರು ಗ್ರಾಮದಲ್ಲಿ ಸಿಪಿಐಎಂ ಪಕ್ಷದ ಪ್ರಮುಖ ಕಾರ್ಯಕರ್ತರ ಚುನಾವಣಾ ಸಿದ್ದತಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಶಾಸಕರುಗಳು ತಾವು ನಡೆಸಿದ ಅಭಿವೃದ್ದಿ ವಿಚಾರಗಳನ್ನು ಜನತೆಯ ಮುಂದಿಡಬೇಕಾಗಿತ್ತು ಆದರೆ ಇವರು ತಮ್ಮ ಮೇಲೆ ಯಾವುದೇ ಮಾನಹಾನಿಗೆ ಸಂಬಂಧಿಸಿದ ವಿಚಾರಗಳನ್ನು ಬಿತ್ತರಿಸಬಾರದೆಂದು ನ್ಯಾಯಾಲಯದಿಂದ ತಡೆಯಾಜ್ಞೆ ತರುತ್ತಿರುವುದು ನೋಡಿದರೆ ಎಂತಹ ಅಭಿವೃದ್ಧಿ ಕೆಲಸ ನಡೆಸಿದ್ದಾರೆಂದು ನಾಡಿನ ಜನತೆಗೆ ಅನುಮಾನ ವ್ಯಕ್ತವಾಗುತ್ತಿದ್ದೆ. ಈ ರೀತಿ ತಡೆಯಾಜ್ಞೆ ತಂದಿರೋದರಲ್ಲಿ ದಕ್ಷಿಣದ ಶಾಸಕ ವೇದವ್ಯಾಸ ಕಾಮತ್ ಕೂಡ ಹೊರತಾಗಿಲ್ಲ. ಬಿಜೆಪಿ ಜನಪ್ರತಿನಿಧಿಗಳಿಗೆ ಜನರ ಬದುಕಿನ ಪ್ರಶ್ನೆ ಬಗ್ಗೆ ಎಳ್ಳಷ್ಟೂ ಕಾಳಜಿ ಇಲ್ಲ. ಯುವಜನರಿಗೆ ಉದ್ಯೋಗ ಸೃಷ್ಟಿಸುವಲ್ಲಿ ದಯಾನೀಯ ವೈಫಲ್ಯ ಮಾತ್ರವಲ್ಲ ಖಾಲಿ ಇರುವ ಹುದ್ದೆಗಳನ್ನು ಭರ್ತಿಗೊಳಿಸಲು ಈವರೆಗೂ ಸಾಧ್ಯವಾಗಿಲ್ಲ. ಶಿಕ್ಷಣ, ಆರೋಗ್ಯ ಸಂಪೂರ್ಣ ಖಾಸಗೀಕರಣಗೊಂಡು ಕೊರೋನಾ ಸಂದರ್ಭ ಸರಕಾರ ವೈದ್ಯಕೀಯ ಸಾಮಾಗ್ರಿಗಳಲ್ಲಿ ಭ್ರಷ್ಟಾಚಾರ‌ ನಡೆಸಿ ಖಾಸಗೀ ಆಸ್ಪತ್ರೆಗಳಿಗೆ ಲೂಟಿಗೂ ಅವಕಾಶ ಕಲ್ಪಿಸಿದ್ದನ್ನು ಜನ ಇನ್ನೂ ಮರೆತಿಲ್ಲ. ಬಡವರ ಮಕ್ಕಳು ವೈದ್ಯರಾಗುವಂತಹ ಸರಕಾರಿ ಮೆಡಿಕಲ್ ಕಾಲೇಜಿಗೆ ಮೀಸಲಿಟ್ಟ ಸ್ಥಳವನ್ನು ಬೇರೆ ಯಾವುದೋ ಉದ್ದೇಶಕ್ಕೆ ಬಳಸಲೊರಟ ಬಿಜೆಪಿ ನಡೆಗೆ ಜನ ಹೋರಾಟದ ಮೂಲಕ ವಿರೋಧ ವ್ಯಕ್ತಪಡಿಸಿದ್ದು ಸುಳ್ಳಲ್ಲ. ವೇದವ್ಯಾಸ ಕಾಮತರ ಹಿಂಬಾಲಕರು ನಗರದಲ್ಲಿ ರಾಜಾರೋಷವಾಗಿ ನಡೆಸುತ್ತಿದ್ದ ಸ್ಕಿಲ್ ಗೇಮ್ , ವಿಡಿಯೋ ಗೇಮ್ , ಜುಗಾರಿ ಅಡ್ಡೆ, ವೇಶ್ಯಾವಾಟಿಕೆಯಂತಹ ಅಕ್ರಮಗಳು ಬಡವರ ಮಕ್ಕಳ ಬೀದಿಗೆ ತಳ್ಳಲು, ಅವರ ಗಳಿಕೆಯನ್ನು ಲೂಟಿ ಹೊಡೆಯುತ್ತಿದ್ದ ಗ್ಯಾಂಬ್ಲಿಂಗ್ ಸೆಂಟರ್ ಗಳ ಕ್ರಿಮಿನಲ್ ಗಳನ್ನು ಮಟ್ಟ ಹಾಕಲು ಸಾಧ್ಯವಾದದ್ದು ಯುವಜನ ಸಂಘಟನೆ ನಡೆಸಿದ ಹೋರಾಟದಿಂದ ಎಂದು ಜನ ಗುರುತಿಸಲು ಸಾಧ್ಯವಾಗಿದೆ. ಬಿಜೆಪಿಯ ಅಧಿಕಾರದವಧಿಯಲ್ಲಿ ಪೊಲೀಸ್ ಇಲಾಖೆ ದಯನೀಯ ವೈಫಲ್ಯದಿಂದ ನಗರದಲ್ಲಿ ಕ್ರಿಮಿನಲ್ ಚಟುವಟಿಕೆ ಹೆಚ್ಚಳವಾಗಿತ್ತು. ಗಾಂಜ ಅಪೀಮುಗಳ ಮಾರಾಟ ಜಾಲ ಬೇದಿಸಲು ಸಾಧ್ಯವಾಗಿಲ್ಲ ಒಟ್ಟು ಜನರ ನೆಮ್ಮದಿಯ ಬದುಕಿಗೆ ಬೇಕಾದ ಯಾವೊಂದು ಯೋಜನೆಗಳನ್ನು ಕ್ರಮಗಳನ್ನು ಈಡೇರಿಸಲು ಬಿಜೆಪಿ ಸರಕಾರಕ್ಕೆ ಸಾಧ್ಯವಾಗಿಲ್ಲ. ಒಟ್ಟಾರೆ ಈ ಬಾರಿಯ ಚುನಾವಣೆಯಲ್ಲಿ ಜನ ಪ್ರಜ್ಞಾವಂತಿಕೆಯಿಂದ ಮತ ಚಲಾಯಿಸಬೇಕು. ಬಿಜೆಪಿ ಗೆದ್ದರೆ ಜನ ಸಾಮಾನ್ಯರ ಸೋಲಾಗುತ್ತೆ. ಜನಸಾಮಾನ್ಯರು ಮತ್ತವರ ಬದುಕಿನ ನೈಜ ಪ್ರಶ್ನೆ ಗೆಲ್ಲಬೇಕಾದರೆ ಬಿಜೆಪಿಯನ್ನು ಸೋಲಿಸಲು ಮುಂದಾಗಬೇಕೆಂದು ಹೇಳಿದರು.

ವೇದಿಕೆಯಲ್ಲಿ ಸಿಪಿಐಎಂ ಜಪ್ಪಿನಮೊಗರು ಶಾಖಾ ಕಾರ್ಯದರ್ಶಿ‌ ಉದಯಚಂದ್ರ ರೈ, ಸಿಪಿಐಎಂ ನಗರ ಸಮಿತಿ ಸದಸ್ಯರಾದ ದಿನೇಶ್ ಶೆಟ್ಟಿ, ಚಂದ್ರಹಾಸ ಜೆ, ಜಯಲಕ್ಷ್ಮಿ ಉಪಸ್ಥಿತರಿದ್ದರು.


Spread the love