ಜನರ ಹೆಣದ ಮೇಲೆ ಅಧಿಕಾರ ನಡೆಸುವ ಸರ್ಕಾರ: ಡಿಕೆಶಿ

Spread the love

ಜನರ ಹೆಣದ ಮೇಲೆ ಅಧಿಕಾರ ನಡೆಸುವ ಸರ್ಕಾರ: ಡಿಕೆಶಿ

ಪಾಂಡವಪುರ : ರಾಜ್ಯ ಬಿಜೆಪಿ ಸರ್ಕಾರ ಜನರ ಹೆಣದ ಮೇಲೆ ಅಧಿಕಾರ ನಡೆಸುತ್ತಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸರ್ಕಾರದ ವಿರುದ್ಧ ಗುಡುಗಿದರು.

ಪಟ್ಟಣದ ಹಾರೋಹಳ್ಳಿಯ ಶ್ರೀಲಕ್ಷ್ಮೀನಾರಾಯಣಸ್ವಾಮಿ ದೇವಸ್ಥಾನದ ಆವರಣದಲ್ಲಿ ಕಾಂಗ್ರೆಸ್ ಮುಖಂಡ ಹಾಗೂ ಸಮಾಜ ಸೇವಕ ಬಿ.ರೇವಣ್ಣ ಅವರು ಅಂಗನವಾಡಿ, ಆಶಾ, ಆರೋಗ್ಯ ಕಾರ್ಯಕರ್ತೆಯರು, ವಿಕಲಚೇತನರು, ಬೀದಿ ಬದಿ ವ್ಯಾಪಾರಿಗಳು, ಸವಿತಾ ಸಮಾಜ ಹಾಗೂ ಛಾಯಾಗ್ರಾಹಕರಿಗೆ ಉಚಿತ ದಿನಸಿ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊರೊನಾ ಸಂಕಷ್ಟ ಕಾಲದಲ್ಲಿ ಜನರ ನೆರವಿಗೆ ಧಾವಿಸಲಿಲ್ಲ. ಆರೋಗ್ಯ ಸಾಮಗ್ರಿಗಳ ಖರೀದಿಯಲ್ಲಿ ಕಮೀಷನ್ ದಂಧೆ ನಡೆಸುವ ಮೂಲಕ ಹಣ ಲೂಟಿ ಮಾಡಲು ನಿಂತಿದೆ. ಕೊರೊನಾದಿಂದ ಮೃತಪಟ್ಟವರ ಶವ ಪಡೆಯಲು ಜನ ಹರಸಾಹಸ ಪಟ್ಟಿದ್ದಾರೆ. ಈ ಸರ್ಕಾರಕ್ಕೆ ಕನಿಷ್ಟ ಬೆಡ್ ಮತ್ತು ಆಕ್ಸಿಜನ್ ನೀಡಲು ಸಾಧ್ಯವಾಗಲಿಲ್ಲ. ಇಂತಹ ಲಜ್ಜೆಗೆಟ್ಟ ಸರ್ಕಾರವನ್ನು ನನ್ನ ರಾಜಕೀಯ ಇತಿಹಾಸದಲ್ಲಿ ಎಂದೂ ನೋಡಿಲ್ಲ. ಈ ಸರ್ಕಾರಕ್ಕೆ ಜನರೇ ಬುದ್ಧಿ ಕಲಿಸುವ ಕಾಲ ಸನ್ನಿಹಿತವಾಗಿದೆ ಎಂದರು.

ಕೇಂದ್ರ ಸರ್ಕಾರ ತೈಲಬೆಲೆಯನ್ನು ನಿರಂತರವಾಗಿ ಏರಿಸುತ್ತಿದೆ. ಇದರ ವಿರುದ್ಧ ಕಾಂಗ್ರೆಸ್ ಪಕ್ಷ ಐದು ಸಾವಿರ ಪೆಟ್ರೋಲ್ ಬಂಕ್‌ಗಳ ಮುಂದೆ ಪ್ರತಿಭಟನೆ ನಡೆಸಿದೆ. ಬೆಲೆ ಏರಿಕೆ ಮೂಲಕ ಜನರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ. ಪೆಟ್ರೋಲ್ ದರ ಸಂಚುರಿ ಬಾರಿಸಿ ನಾಟೌಟಾಗಿ ಉಳಿದಿದೆ. ಪ್ರಪಂಚದ ಯಾವುದೇ ದೇಶದಲ್ಲಿ ಇಷ್ಟು ದರವಿಲ್ಲ. ಕೊರೊನಾ ಸೇನಾನಿಗಳು ಹಗಲು ರಾತ್ರಿ ಕರ್ತವ್ಯ ನಿರ್ವಹಿಸುತ್ತಿದ್ದರೂ, ಸಂಬಳ ಏರಿಕೆ ಮೂಲಕ ಅವರನ್ನು ಉತ್ತೇಜಿಸುವ ಕೆಲಸ ಮಾಡುತ್ತಿಲ್ಲ. ಜನರ ರಕ್ಷಣೆಯಾಗಬೇಕಾದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಿದೆ. ಆಯುಷ್ಮಾನ್ ಭಾರತ ಸೇರಿದಂತೆ ಇತರೆ ಯೋಜನೆಗಳ ಮೂಲಕ ಏಕೆ ಉಚಿತಾ ಚಿಕಿತ್ಸೆ ನೀಡಿಲ್ಲ. ಲಕ್ಷಾಂತರ ರೂ. ಸಾಲ ಮಾಡಿ ಆಸ್ಪತೆಗಳಿಗೆ ಬಿಲ್ ಕಟ್ಟಿರುವ ಜನಕ್ಕೆ ಸರ್ಕಾರ ಹಣ ಮರುಪಾವತಿಸಬೇಕು ಎಂದು ಆಗ್ರಹಿಸಿದರು.

ರೈತರು ಸಂಕಷ್ಟದಲ್ಲಿದ್ದರೂ ಅವರ ನೆರವಿಗೆ ಧಾವಿಸದೆ ಪರಿಹಾರಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಎಂದು ಸಬೂಬು ಹೇಳುತ್ತಾ ಪರಿಹಾರ ವಿತರಣೆಗೆ ಮೀನಾಮೇಷ ಎಣಿಸುತ್ತಿದೆ. ನಾನು ಅಧಿಕಾರದಲ್ಲಿದ್ದರೆ ರೈತರ ಜಮೀನ ಬಳಿಗೆ ತೆರಳಿ ಸ್ಥಳದಲ್ಲೇ ಚೆಕ್ ವಿತರಣೆ ಮಾಡುತ್ತಿದ್ದೆ ಎಂದು ಹೇಳಿದರು.

ಅಗತ್ಯ ವಸ್ತುಗಳ ಮಾರಾಟಕ್ಕೆ ಎರಡು ಗಂಟೆ ಸಮಯಾವಕಾಶ ನೀಡಿರುವ ಈ ಸರ್ಕಾರ ಮದ್ಯ ಮಾರಾಟಕ್ಕೆ ಹೆಚ್ಚಿನ ಕಾಲಾವಕಾಶ ಕಲ್ಪಿಸಿದೆ. ಇದರಿಂದಲೇ ಈ ಸರ್ಕಾರಕ್ಕೆ ಯಾರ ಮೇಲೆ ಹೆಚ್ಚಿನ ಅಭಿಮಾನವಿದೆ ಗೊತ್ತಾಗುತ್ತದೆ ಎಂದರು.


Spread the love