ಜನವರಿ ವೇಳೆಗೆ ಸಿದ್ದರಾಮಯ್ಯ ಜೈಲಿಗೆ: ನಳಿನ್‌ ಕುಮಾರ್‌ ಕಟೀಲ್‌

Spread the love

ಜನವರಿ ವೇಳೆಗೆ ಸಿದ್ದರಾಮಯ್ಯ ಜೈಲಿಗೆ: ನಳಿನ್‌ ಕುಮಾರ್‌ ಕಟೀಲ್‌
 

ಮಂಡ್ಯ: ‘ಚೆಕ್‌ ಮೂಲಕ ಒಂದೂವರೆ ಕೋಟಿ ಲಂಚ ಪಡೆದ ಪ್ರಕರಣದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಜನವರಿ ವೇಳೆಗೆ ಜೈಲು ಸೇರಲಿದ್ದಾರೆ. ಜಾಮೀನಿನ ಮೇಲೆ ಹೊರ ಬರುವ ಅವರು ಚುನಾವಣೆಗೆ ಸ್ಪರ್ಧಿಸಿ, ಸೋತು ನಂತರ ನಿರುದ್ಯೋಗಿಯಾಗಲಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಶುಕ್ರವಾರ ಭವಿಷ್ಯ ನುಡಿದರು.

ಬಿಜೆಪಿ ಕಾರ್ಯಕರ್ತರ ಜನಸಂಕಲ್ಪ ಸಭೆಯಲ್ಲಿ ಮಾತನಾಡಿದ ಅವರು ‘ನಿಮ್ಮ ಮೇಡಂ (ಸೋನಿಯಾ ಗಾಂಧಿ), ನಾಯಕ (ರಾಹುಲ್‌ ಗಾಂಧಿ), ಅಧ್ಯಕ್ಷ (ಡಿ.ಕೆ.ಶಿವಕುಮಾರ್‌) ಈಗಾಗಲೇ ಜಾಮೀನಿನ ಮೇಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ತಿಹಾರ್‌ ಜೈಲಿನಲ್ಲಿ ಇದ್ದುದು ಏಕೆ? ಸಿದ್ದರಾಮಯ್ಯ ಕೂಡ ಜೈಲಿಗೆ ಹೋಗುವುದು ಖಚಿತ. ಲಂಚ ಪಡದ ಪ್ರಕರಣ ಈಗಾಗಲೇ ಹೊರಬಂದಿದೆ, ಅರ್ಕಾವತಿ ಡೀನೋಟಿಫೈ ಹಗರಣ ಕೂಡ ಹೊರಬರಲಿದೆ’ ಎಂದರು.

‘ಭ್ರಷ್ಟಾಚಾರ, ಭಯೋತ್ಪಾದನೆ, ಪರಿವಾರವಾದ ಇವು ಕಾಂಗ್ರೆಸ್‌ ಕೊಡುಗೆ, ಪಂಚಭೂತಗಳ ಮೇಲೂ ಹಗರಣ ಮಾಡಿದ್ದಾರೆ. ಹಲವು ಕಾಂಗ್ರೆಸ್‌ ಮುಖಂಡರು ಬಿಜೆಪಿಗೆ ಸೇರಲು ತುದಿಗಾಲಮೇಲೆ ನಿಂತಿದ್ದು ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಮನೆ ಖಾಲಿಯಾಗಲಿದೆ. ಬಿಜೆಪಿಗೆ ಗೆಲ್ಲುವುದಷ್ಟೇ ಮುಖ್ಯ, ಯಾರೇ ಬಂದರೂ ಪಕ್ಷಕ್ಕೆ ಸ್ವಾಗತಿಸಲಾಗುವುದು’ ಎಂದರು.

‘ಬಿಜೆಪಿಗೆ ಸೇರಿದ 17 ಮುಖಂಡರನ್ನು ಕಾಂಗ್ರೆಸ್‌ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ವಾಪಸ್‌ ಕರೆದಿದ್ದಾರೆ. ಪ್ರಳಯವಾದರೂ ಸರಿ ಅವರನ್ನು ವಾಪಸ್‌ ಸೇರಿಸಿಕೊಳ್ಳುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೆ ಡಿಕೆಶಿ ಕರೆಯುತ್ತಿರುವುದನ್ನು ನೋಡಿದರೆ ಕಾಂಗ್ರೆಸ್‌ ಯಾವ ಸ್ಥಿತಿಗೆ ತಲುಪಿದೆ ನೋಡಿ. ಸಿದ್ದರಾಮಯ್ಯ ಒಬ್ಬ ನೀಚ ರಾಜಕಾರಣಿ. ಮತಾಂಧ ಟಿಪ್ಪುವಿಗೆ ಜಯಂತಿ ಮಾಡಿದವನ, ಕುತಂತ್ರ ರಾಜಕಾರಣಿಯ ರಾಜಕೀಯ ಭವಿಷ್ಯ ಶೀಘ್ರ ಅಂತ್ಯವಾಗಲಿದೆ’ ಎಂದರು.

‘ರಾಜ್ಯದಲ್ಲಿ ಜನನಾಯಕ, ಖಳನಾಯಕ, ಕಣ್ಣೀರು ನಾಯಕರಿದ್ದಾರೆ. ಬಿ.ಎಸ್‌.ಯಡಿಯೂರಪ್ಪ ಜನನಾಯಕ, ವೀರಶೈವ ಲಿಂಗಾಯತರನ್ನು ಒಡೆಯಲು ಮುಂದಾದ ಸಿದ್ದರಾಮಯ್ಯ ಖಳನಾಯಕ. ಎಚ್‌.ಡಿ.ಕುಮಾರಸ್ವಾಮಿ ಕಣ್ಣೀರಿನ ನಾಯಕ, ಅವರು ಸಿ.ಎಂ ಆಗುವುದಕ್ಕೂ ಮೊದಲು ಕಣ್ಣೀರು ಹಾಕ್ತಾರೆ, ಸಿ.ಎಂ ಆದಮೇಲೂ ಕಣ್ಣೀರು ಹಾಕ್ತಾರೆ. ಅಪ್ಪನ ಆರೋಗ್ಯ ಸರಿ ಇಲ್ಲ ಎಂದು ಈಗ ಕಣ್ಣೀರು ಹಾಕುತ್ತಿದ್ದಾರೆ. ಮುಂದೆ ರಾಜ್ಯದಲ್ಲಿ ಜೆಡಿಎಸ್‌ನ ಕುಟುಂಬ ರಾಜಕಾರಣ ಮುಕ್ತವಾಗಲಿದೆ’ ಎಂದರು.

‘ಸಿದ್ದರಾಮಯ್ಯ ಸ್ಪರ್ಧೆ ಮಾಡಲು ಕ್ಷೇತ್ರವೇ ಸಿಗುತ್ತಿಲ್ಲ. ತಾಕತ್ತಿದ್ದರೆ ಬಾದಾಮಿಯಲ್ಲಿ ಸ್ಪರ್ಧೆ ಮಾಡಲಿ, ಅವರನ್ನು ಸೋಲಿಸಿ ಕಾಡಿಗೆ ಕಳುಹಿಸುತ್ತೇವೆ’ ಎಂದರು.


Spread the love

1 Comment

Comments are closed.