
ಜನಸಾಮಾನ್ಯರನ್ನು ಕಡೆಗಣಿಸಿದ ಬಜೆಟ್ – ಸಿಪಿಐಎಮ್
ಮಂಗಳೂರು: ಕೊರೋನ ಸಾಂಕ್ರಾಮಿಕ, ಲಾಕ್ ಡೌನ್ ಗಳಿಂದ ಬಸವಳಿದಿರುವ ಕಾರ್ಮಿಕರು, ಸಣ್ಣ, ಮಧ್ಯಮ ಉದ್ಯಮಿಗಳು, ವ್ಯಾಪಾರಿಗಳು ಸೇರಿದಂತೆ ಜನಸಾಮಾನ್ಯರಿಗೆ ಪರಿಹಾರ ಒದಗಿಸುವ ನಾಗರಿಕರ ನಿರೀಕ್ಷೆಗಳನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಜೆಟ್ ಹುಸಿಗೊಳಿಸಿದೆ ಎಂದು ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಅಪಾದಿಸಿದೆ.
ಕಾರ್ಮಿಕರು, ರೈತರು, ಸಣ್ಣ ವ್ಯಾಪಾರಿಗಳು, ಕಿರು ಉದ್ಯಮಿಗಳ ಕೈಗೆ ಹಣ ತಲುಪದೆ ಭಾರತದ ಸದ್ಯದ ಬಿಕ್ಕಟ್ಟು ಪರಿಹಾರ ಆಗುವುದಿಲ್ಲ. ಆರ್ಥಿಕ ಬಿಕ್ಕಟ್ಟಿನ ಸಂದರ್ಭದ ಬಜೆಟ್ ಆ ನಿಟ್ಟಿನಲ್ಲಿ ಇರಬೇಕಿತ್ತು. ಆದರೆ ಕೇಂದ್ರದ ನರೇಂದ್ರ ಮೋದಿ ಸರಕಾರ ಕಾರ್ಪೊರೇಟ್ ಶ್ರೀಮಂತರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟು ಬಜೆಟ್ ಮಂಡಿಸಿದೆ. ಆರೋಗ್ಯ, ಶಿಕ್ಷಣದಂತಹ ಬಹು ಮುಖ್ಯ ಕ್ಷೇತ್ರಗಳನ್ನೂ ಕಡೆಗಣಿಸಲಾಗಿದೆ. ನಿರುದ್ಯೋಗದ ಭೀಕರ ಸ್ಥಿತಿಯಲ್ಲೂ ಉದ್ಯೋಗ ಸೃಷ್ಟಿಯ ಕುರಿತು ಗಮನ ಹರಿಸದಿರುವುದು ಖೇದಕರ. ಒಟ್ಟಾರೆಯಾಗಿ ಕಾರ್ಪೊರೇಟ್ ಶ್ರೀಮಂತರ ಹಿತಕಾಯುವ ಬಜೆಟ್ ಮಂಡಿಸುವ ಮೂಲಕ ಕೇಂದ್ರ ಸರಕಾರ ಜನಸಾಮಾನ್ಯರ ಕಷ್ಟಗಳನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಸಿಪಿಐಎಂ ದ. ಕ ಜಿಲ್ಲಾ ಕಾರ್ಯದರ್ಶಿ ಕೆ ಯಾದವ ಶೆಟ್ಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ