ಜನಸೇವಾ ಟ್ರಸ್ಟ್ ಮೂಡುಗಿಳಿಯಾರು ಆಶ್ರಯದಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ

Spread the love

ಜನಸೇವಾ ಟ್ರಸ್ಟ್ ಮೂಡುಗಿಳಿಯಾರು ಆಶ್ರಯದಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ

ಕುಂದಾಪುರ: ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯ ಅಂಗವಾಗಿ ಜನಸೇವಾ ಟ್ರಸ್ಟ್ ಮೂಡುಗಿಳಿಯಾರು ಆಶ್ರಯದಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಕಾರ್ಯಕ್ರಮ ಗುರುವಾರ ಕೋಟ ಪಶು ಆಸ್ಪತ್ರೆ ವಠಾರದಲ್ಲಿ ಜರಗಿತು.


ಹಿರಿಯ ಕೃಷಿಕರಾದ ಕೂಸ ಪೂಜಾರಿಯವರು ಹಾಲೆ ಗಿಡವನ್ನು ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.

ಉದ್ಯಮಿ ಆನಂದ ಸಿ.ಕುಂದರ್ ಮಾತನಾಡಿ, ನಮ್ಮ ಹಿಂದಿನ ತಲೆಮಾರಿನವರು ಗಿಡ ಮರಗಳನ್ನು ಬೆಳೆಸಿ ಸಂರಕ್ಷಿಸಿದ್ದರಿಂದ ಅದರ ಫಲ ಇವತ್ತು ನಾವು ಉಣ್ಣುವಂತಾಗಿದೆ. ಈ ಪರಂಪರೆಯನ್ನು ಮುಂದುವರಿಸುವಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಯಂತಹ ಕಾರ್ಯಕ್ರಮಗಳು ನೆಪವಾಗುತ್ತಿರುವುದು ಅರ್ಥಪೂರ್ಣ ಎಂದರು.

ಕಸಾಪ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅವರು ಕುಂದಗನ್ನಡದ ವಿಶೇಷತೆಯನ್ನು ತಿಳಿಸಿದರು ಹಾಗೂ ಈ ಭಾಷೆಯನ್ನು ಬಳಸುವುದರ ಮೂಲಕ ಬೆಳೆಸಬೇಕು ಎಂದರು.

ಸಾಂಸ್ಕøತಿಕ ಚಿಂತಕ ಉದಯ ಶೆಟ್ಟಿ ಪಡುಕರೆ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಯ ಆಶಯಗಳನ್ನು ವಿವರಿಸಿದರು.

ಪಶು ವೈದ್ಯಾಕಾರಿ ಡಾ|ಅರುಣ ಕುಮಾರ್ ಶೆಟ್ಟಿ, ಕೋಟ ಸಿ.ಎ.ಬ್ಯಾಂಕ್ ಅಧ್ಯಕ್ಷ ತಿಮ್ಮ ಪೂಜಾರಿ, ನಿದೇರ್ಶಕ ಟಿ. ಮಂಜುನಾಥ ಗಿಳಿಯಾರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶರತ್ ಶೆಟ್ಟಿ, ಸಾಲಿಗ್ರಾಮ ಪ.ಪಂ. ಮಾಜಿ ಸದಸ್ಯ ಭೋಜ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ಜನ ಸೇವಾ ಟ್ರಸ್ಟಿನ ಸಂಚಾಲಕ ವಸಂತ ಗಿಳಿಯಾರ್ ಕಾರ್ಯಕ್ರಮ ನಿರೂಪಿಸಿದರು.

ವಿಶ್ವ ಕುಂದಾಪ್ರ ಕನ್ನಡ ದಿನ, ರಾಜ್ಯ ನಾಯಕರಿಂದ ಟ್ವಿಟರ್ ಶುಭಾಶಯ:
ಕುಂದಗನ್ನಡದ ಭಾಷೆಯ ಸೊಬಗು, ಇಲ್ಲಿನ ನೆಲದ ಸಾಂಸ್ಕøತಿಕ ಸೊಗಡನ್ನು ವಿಶ್ವಕ್ಕೆ ಪಸರಿಸಿ ಮುಂದಿನ ಪೀಳಿಗೆಗೂ ತಲುಪಿಸುವ ಉದ್ದೇಶದಿಂದ ಕರ್ಕಾಟಕ ಅಮವಾಸ್ಯೆ (ಆಸಾಡಿ ಅಮವಾಸ್ಯೆ) ದಿನದಂದು ಆಚರಿಸುವ ವಿಶ್ವ ಕುಂದಾಪ್ರ ದಿನಾಚರಣೆಗೆ ರಾಜ್ಯ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಮಾಝಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಸಂಸದೆ ಶೋಭಾ ಕರಂದ್ಲಾಜೆ, ಸಂಸದ ಪ್ರತಾಪಸಿಂಹ ಮುಂತಾದ ರಾಜಕೀಯ ನಾಯಕರು ತಮ್ಮ ಟ್ವಿಟರ್ ಖಾತೆಯ ಮೂಲಕ ಶುಭಾಶಯಗಳನ್ನು ತಿಳಿಸಿದ್ದಾರೆ.

ವೈಶಿಷ್ಟ್ಯಪೂರ್ಣ ಬದುಕು, ವಿಶಿಷ್ಟ ಭಾಷಾಶೈಲಿ ಹೊಂದಿರುವ ಕುಂದಾಪುರೀ ನೆಲದ ಬಹುತ್ವ ಸಂಸ್ಕøತಿಯ ದ್ಯೋತಕ. ಇಲ್ಲಿನ ಭಾಷೆ ಮತ್ತು ಬದುಕನ್ನು ಜಗತ್ತಿನೆದುರು ತೆರೆದಿಡುವ ಪ್ರಯತ್ನವಾಗಿ ಪ್ರತೀ ವರ್ಷ ಆಸಾಡಿ ಅಮವಾಸ್ಯೆ ದಿನವನ್ನು ಕುಂದಾಪ್ರ ಕನ್ನಡ ದಿನವಾಗಿ ಆಚರಿಸಲಾಗುತ್ತಿದೆ. ಸಮಸ್ತ ಕುಂದಾಪುರದ ಜನತೆಗೆ ಕುಂದಾಪ್ರ ಕನ್ನಡ ದಿನದ ಶುಭಾಶಯಗಳು
-ಸಿದ್ದರಾಮಯ್ಯ, ರಾಜ್ಯ ವಿಪಕ್ಷ ನಾಯಕ

ಕನ್ನಡ ನಾಡಿಗೆ ಕುಂದಾಪುರಿಗರ ಕೊಡುಗೆ ಸಾಕಷ್ಟಿದೆ. ಕೋಟ ಶಿವರಾಮ ಕಾರಂತರು, ಗೋಪಾಲಕೃಷ್ಣ ಅಡಿಗರು ಈ ನೆಲದ ಅನನ್ಯ ಆಸ್ತಿ. ನಾಡಿಗರ ಹಲವರ ಕೊಡುಗೆ ಅಪಾರ. ಕುಂದಾಪ್ರ ಕನ್ನಡಿಗರಿಗೆಲ್ಲಾ ವಿಶ್ವ ಕುಂದಾಪ್ರ ಕನ್ನಡ ದಿನದ ಶುಭಾಶಯಗಳ್.
-ಎಚ್ ಡಿ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

ಪ್ರಾದೇಶಿಕ ಅನನ್ಯತೆಯ ಕುಂದಾಪ್ರ ಕನ್ನಡ ನೆಲಭಾಷಿಕರು ಇಂದು ಜಗತ್ತಿನಾದ್ಯಂತ ತಮ್ಮ ಭಾಷಾಭಿಮಾನವನ್ನು ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯನ್ನಾಗಿ ಆಚರಿಸುತ್ತಿದ್ದಾರೆ. ಇದು ನಮ್ಮದೇ ರಾಜ್ಯದ ಒಂದು ಪ್ರಾಂತ್ಯದ ಜನರ ಹೃದಯದ ಭಾಷೆ. ಭಾಷಾ ಅಭಿಮಾನಿಗಳೆಲ್ಲರಿಗೂ ವಿಶ್ವ ಕುಂದಾಪ್ರ ಕನ್ನಡ ದಿನದ ಶುಭಾಶಯಗಳು.
-ಪ್ರತಾಪ್ ಸಿಂಹ, ಲೋಕಸಭಾ ಸದಸ್ಯರು ಮೈಸೂರು.


Spread the love