ಜನ ಕಾಂಗ್ರೆಸ್‌ನ ಫ್ಯೂಸ್ ಕಿತ್ತಿದ್ದಾರೆ: ವಿಜಯೇಂದ್ರ ವ್ಯಂಗ್ಯ

Spread the love

ಜನ ಕಾಂಗ್ರೆಸ್‌ನ ಫ್ಯೂಸ್ ಕಿತ್ತಿದ್ದಾರೆ: ವಿಜಯೇಂದ್ರ ವ್ಯಂಗ್ಯ

ಮೈಸೂರು: ಅಧಿಕಾರಕ್ಕೆ ಬಂದರೆ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುತ್ತೇವೆ ಎಂಬ ಕಾಂಗ್ರೆಸ್ ಹೇಳಿಕೆ ಹಾಸ್ಯಾಸ್ಪದವಾಗಿದ್ದು, ಈಗಾಗಲೇ ದೇಶಾದ್ಯಂತ ಜನ ಕಾಂಗ್ರೆಸ್‌ನ ಫ್ಯೂಸ್ ಕಿತ್ತು ಹಾಕಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧಕ್ಷ ಬಿ.ವೈ.ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನ ಅವರಿಗೆ ಅಧಿಕಾರ ಕೊಡಬೇಕಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದೆ. ಅದಕ್ಕಾಗಿ ಈ ರೀತಿಯ ಹೇಳಿಕೆ ನೀಡುತ್ತಿದೆ. ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಾಗ ಇಂತಹ ಹೇಳಿಕೆಗಳು ಹಾಸ್ಯಾಸ್ಪದವಾಗಿವೆ. ಹಳೇ ಮೈಸೂರು ಭಾಗವೇ ನಮ್ಮ ಪ್ರಮುಖ ಗುರಿಯಾಗಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್‌ಗಿಂತ ಹೆಚ್ಚು ಸ್ಥಾನವನ್ನು ಈ ಭಾಗದಲ್ಲಿ ಗೆಲ್ಲುತ್ತೇವೆ ಎಂದು ಹೇಳಿದರು.

17ಜನ ಶಾಸಕರನ್ನು ವೇಶ್ಯೆಯರಿಗೆ ಹೋಲಿಕೆ ಮಾಡಿ ಕ್ಷಮೆ ಕೇಳಿದ ಬಿ.ಕೆ.ಹರಿಪ್ರಸಾದ್ ವಿಚಾರ ಕುರಿತು ಮಾತನಾಡಿದ ಅವರು, ಕ್ಷಮೆ ಕೇಳುವುದು ದೊಡ್ಡದಲ್ಲ. ಮಾತನಾಡುವ ಮುನ್ನಾ ಯೋಚನೆ ಮಾಡಿ ಮಾತನಾಡಬೇಕು. ಇಂತಹ ಹೇಳಿಕೆಗಳು ಹಿರಿಯರಾದ ಹರಿಪ್ರಸಾದ್‌ಗೆ ಶೋಭೆ ತರುವುದಿಲ್ಲ. ಜತೆಗೆ ಅವರ ಪಕ್ಷಕ್ಕೂ ಶೋಭೆ ತರುವುದಿಲ್ಲ. ಇಂತಹ ಹೇಳಿಕೆಗಳು ಅವರ ಮನಸ್ಥಿತಿ ತೋರಿಸುತ್ತದೆ ಎಂದರು.

ನಮ್ಮ ಪಕ್ಷದ ಮುಂದಿರುವ ಗುರಿ ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕನಿಷ್ಠ 140 ಸ್ಥಾನ ಗೆಲ್ಲಬೇಕು. ಪಕ್ಷವನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರಬೇಕು ಎಂಬುದಾಗಿದೆ. ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬಿಟ್ಟಿದ್ದೇವೆ ಎಂದು ಹಗಲುಗನಸು ಕಾಣುತ್ತಿದೆ ಎಂದರು.

ವರುಣ ಕ್ಷೇತ್ರದಿಂದ ಸ್ಪರ್ಧಿಸುವ ವಿಚಾರವಾಗಿ ಪ್ರತಿಕ್ರಿಯಿಸಿ, ನಾನು ಎಲ್ಲಿಂದ ಸ್ಪರ್ಧೆ ಮಾಡಬೇಕು ಎನ್ನುವುದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ನಾನು ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು ಎಂಬುದು ತೀರ್ಮಾನ ಆಗಿಲ್ಲ. ನಾನು ಯಾವುದೇ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೂ ನನಗೆ ರಾಜಕೀಯವಾಗಿ ಶಕ್ತಿ ಕೊಟ್ಟಿರುವುದು ವರುಣ ಕ್ಷೇತ್ರದ ಜನರು. ಎಲ್ಲೇ ಸ್ಪರ್ಧೆ ಮಾಡಿದರೂ ವರುಣ ಕ್ಷೇತ್ರದ ಜನರಿಗೆ ಋಣಿಯಾಗಿರುತ್ತೇನೆ ಎಂದರು.

ರಾಜ್ಯ ಬಿಜೆಪಿ ಉಪಾಧಕ್ಷ ಬಿ.ವೈ.ವಿಜಯೇಂದ್ರ ಮೈಸೂರಿಗೆ ಆಗಮಿಸಿದಾಗ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಅದ್ಧೂರಿ ಸ್ವಾಗತ ನೀಡಿದರು. ಹೂಗುಚ್ಚ ನೀಡಿ, ಶಾಲು ಹೊದಿಸಿ, ಪೇಟ ತೊಡಿಸಿ ಸ್ವಾಗತ ಕೋರಿದರು. ಈ ವೇಳೆ ಬೆಂಬಲಿಗರು ಮುಂದಿನ ಮುಖ್ಯಮಂತ್ರಿ ವಿಜಯೇಂದ್ರಣ್ಣಗೆ ಜಯವಾಗಲಿ ಎಂದು ಘೋಷಣೆ ಕೂಗಿದ್ದು ಕಂಡುಬಂತು.


Spread the love

Leave a Reply

Please enter your comment!
Please enter your name here