ಜಮ್ಮು-ಕಾಶ್ಮೀರಕ್ಕೆ ಬುಲ್ಡೋಜರ್ ಬೇಡ, ಉದ್ಯೋಗ ಬೇಕು: ರಾಹುಲ್ ಗಾಂಧಿ

Spread the love

ಜಮ್ಮು-ಕಾಶ್ಮೀರಕ್ಕೆ ಬುಲ್ಡೋಜರ್ ಬೇಡ, ಉದ್ಯೋಗ ಬೇಕು: ರಾಹುಲ್ ಗಾಂಧಿ
 

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಒತ್ತುವರಿ ತೆರವು ಕಾರ್ಯಾಚರಣೆ ಅಭಿಯಾನವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ತೀವ್ರವಾಗಿ ಟೀಕಿಸಿದ್ದು, ಅಲ್ಲಿನ ಜನ ಉದ್ಯೋಗ, ಉತ್ತಮ ವ್ಯವಹಾರ ಮತ್ತು ಪ್ರೀತಿ ಬಯಸಿದ್ದರೆ, ಬಿಜೆಪಿಯಿಂದ ಸಿಕ್ಕಿರುವುದು ‘ಬುಲ್ಡೋಜರ್’ ಎಂದು ಕುಟುಕಿದ್ದಾರೆ.‌

ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪಿಡಿಪಿ ಈ ಅಭಿಯಾನದ ವಿರುದ್ಧ ಕಳವಳ ವ್ಯಕ್ತಪಡಿಸಿದ್ದು, ತಕ್ಷಣ ನಿಲ್ಲಿಸುವಂತೆ ಒತ್ತಾಯಿಸಿವೆ.

ಕಂದಾಯ ಇಲಾಖೆ ಕಾರ್ಯದರ್ಶಿ ವಿಜಯ್ ಕುಮಾರ್ ಬಿಧುರಿ ಅವರು ಒತ್ತುವರಿ ತೆರವು ಕಾರ್ಯಾಚರಣೆ ಬಗ್ಗೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ ನಂತರ ಅಧಿಕಾರಿಗಳು ಈವರೆಗೆ ಜಮ್ಮು ಮತ್ತು ಕಾಶ್ಮೀರದಾದ್ಯಂತ 10 ಲಕ್ಷಕ್ಕೂ ಹೆಚ್ಚು ಕನಾಲ್ (ಒಂದು ಕನಾಲ್ = 605 ಚದರ ಗಜ) ಭೂಮಿಯನ್ನು ವಶಕ್ಕೆ ಪಡೆದಿದ್ದಾರೆ.

‘ಜಮ್ಮು ಮತ್ತು ಕಾಶ್ಮೀರವು ಉದ್ಯೋಗ, ಉತ್ತಮ ವ್ಯವಹಾರ ಮತ್ತು ಪ್ರೀತಿ ಬಯಸಿದೆ. ಆದರೆ, ಅವರಿಗೆ ಏನು ಸಿಕ್ಕಿತು? ಬಿಜೆಪಿಯ ಬುಲ್ಡೋಜರ್!’ ಎಂದು ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ದಶಕಗಳಿಂದ ತಮ್ಮ ಕಠಿಣ ಪರಿಶ್ರಮದಿಂದ ಪೋಷಿಸಿದ ಭೂಮಿಯನ್ನು ಅವರಿಂದ ಕಸಿದುಕೊಳ್ಳಲಾಗುತ್ತಿದೆ. ‌ಜನರನ್ನು ವಿಭಜಿಸುವ ಬದಲು ಒಗ್ಗೂಡಿಸುವ ಮೂಲಕ ಶಾಂತಿ ಕಾಪಾಡುವುದು ಸಾಧ್ಯ ಎಂದು ಅವರು ಹೇಳಿದ್ದಾರೆ.


Spread the love