ಜಯಪುರ ಗ್ರಾಮದಲ್ಲಿ ಸಡಗರದ ಗ್ರಾಮೀಣ ದಸರಾ

Spread the love

ಜಯಪುರ ಗ್ರಾಮದಲ್ಲಿ ಸಡಗರದ ಗ್ರಾಮೀಣ ದಸರಾ

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಮೈಸೂರು ತಾಲ್ಲೂಕಿನ ಜಯಪುರ ಗ್ರಾಮದಲ್ಲಿ ಗುರುವಾರ ನಡೆದ ಗ್ರಾಮೀಣ ದಸರಾ ಕಾರ್ಯಕ್ರಮವು ಸಂಭ್ರಮ, ಸಡಗರದಿಂದ ನೆರವೇರಿತು.

 

ಗ್ರಾಮೀಣ ದಸರಾಗೆ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ದಾರಿಪುರ ಗ್ರಾಮದ ಕರೂರು ಬಸವೇಶ್ವರ ದೇವಸ್ಥಾನದ ಬಳಿ ದೇವರ ರಥಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಅಂಗವಾಗಿ ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲೂ ಗ್ರಾಮೀಣ ದಸರಾ ಅಚರಣೆ ಮಾಡಲಾಗುತ್ತಿದೆ. ಕೋವಿಡ್ ಕಾರಣದಿಂದಾಗಿ ಕಳೆದ ಎರಡು ವರ್ಷದಿಂದ ದಸರಾ ಆಚರಣೆಗೆ ತೊಡಕಾಗಿದ್ದು, ಈ ಬಾರಿ ಅದ್ಧೂರಿ ದಸರಾ ಮಾಡಲಾಗುತ್ತಿರುವುದು ಬಹಳ ಸಂತಸವಾಗಿದೆ ಎಂದು ತಿಳಿಸಿದರು.

ಮೈಸೂರು ತಾಲ್ಲೂಕಿನಲ್ಲಿ ಬಹಳ ಅದ್ಧೂರಿಯಿಂದ ಸಂಪ್ರದಾಯಕವಾಗಿ ಗ್ರಾಮೀಣ ದಸರಾ ಆಚರಿಸಲಾಗುತ್ತಿದ್ದು, ಸಾಂಸ್ಕೃತಿಕ ಕಲಾತಂಡಗಳಿಂದ ಮತ್ತಷ್ಟು ಮೆರಗು ದೊರಕಿದೆ. ಜಿಲ್ಲೆಯ ಎಲ್ಲಾ ಅಧಿಕಾರಿ ದಸರಾ ಕಾರ್ಯಕ್ರಮವನ್ನು ಉತ್ತಮವಾಗಿ ಆಯೋಜಿಸುತ್ತಿದ್ದಾರೆ ಎಂದು ಹೇಳಿದರು.

ಶಾಸಕರಾದ ಜಿ.ಟಿ.ದೇವೇಗೌಡ ಅವರು ಮಾತನಾಡಿ, ಗ್ರಾಮೀಣ ಭಾಗದಲ್ಲಿ ಗ್ರಾಮೀಣ ದಸರಾ ಆಚರಣೆ ಮಾಡುತ್ತಿರುವುದು ಬಹಳ ಸಂತೋಷದಾಯಕವಾಗಿದೆ. ದಸರೆಯನ್ನು ಗ್ರಾಮೀಣ ಭಾಗದಲ್ಲಿ ಆಚರಿಸುವ ಮೂಲಕ ದಸರಾ ಸಂಭ್ರಮವು ಎಲ್ಲರ ಮನೆ ತಲುಪಿದತಾಗಿದೆ. ತಾಲ್ಲೂಕಿನಲ್ಲಿ ಗ್ರಾಮೀಣ ದಸರಾವನ್ನು ಬಹಳ ಅಚ್ಚುಕಟ್ಟಾಗಿ ಆಚರಣೆ ಮಾಡಲಾಗುತ್ತಿದ್ದು, ಆರೋಗ್ಯ ತಪಾಸಣಾ ಶಿಬಿರ ಸೇರಿದಂತೆ ಸರ್ಕಾರದ ಮಾಹಿತಿಯು ಸಾರ್ವಜನಿಕರಿಗೆ ತಿಳಿಸುವಂಥ ಮಾಹಿತಿ ರಥಗಳನ್ನು ಬಹಳ ವ್ಯವಸ್ಥಿತವಾಗಿ ಆಯೋಜಿಸಿದ್ದಾರೆ ಎಂದು ಹೇಳಿದರು.

ರಾಜ ಗಾಂಭೀರ್ಯದಿಂದ ಹೆಜ್ಜೆ ಹಾಕಿದ ದಸರಾ ಆನೆಗಳು, ಡೋಲು, ವಾದ್ಯಗಳ ನಿನಾದ, ಟಾಂಗಾ ಸರೋಟು ನಡಿಗೆ, ಸಾಂಸ್ಕೃತಿಕ ಕಲಾ ತಂಡಗಳ ಅದ್ಭುತ ನೃತ್ಯ ಪ್ರದರ್ಶನ, ಸರ್ಕಾರದ ವಿವಿಧ ಯೋಜನೆಗಳ 25 ಮಾಹಿತಿ ರಥಗಳು, 101 ಪೂರ್ಣಕುಂಭ ಸ್ವಾಗತದ ಜೊತೆಗೆ ಜಯಪುರ ಗ್ರಾಮದ ಗುಜ್ಜಮ್ಮ ದೇವಸ್ಥಾನದ ಬಳಿಯ ವೇದಿಕೆ ಕಾರ್ಯಕ್ರಮಕ್ಕೆ ಮೆರವಣಿಗೆಯು ಸಾಗಿತು.

ಗ್ರಾಮೀಣ ದಸರಾ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾಗಿದ್ದ ಆರೋಗ್ಯ ತಪಾಸಣಾ ಶಿಬಿರ ಹಾಗೂ ವಿವಿಧ ಇಲಾಖೆಯ ಮಳಿಗೆಗಳನ್ನು ಶಾಸಕರಾದ ಜಿ.ಟಿ.ದೇವೇಗೌಡ ಅವರು ಉದ್ಘಾಟಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಆರ್.ಪೂರ್ಣಿಮಾ ಅವರು ಮಾತನಾಡಿ, ದಸರಾ ಸಂಭ್ರಮವು ಎಲ್ಲರ ಮನೆಮನೆಗೆ ತಲುಪಿಸುವ ಉದ್ದೇಶದಿಂದ ಸರ್ಕಾರವು ಗ್ರಾಮೀಣ ದಸರಾ ಆಚರಿಸುತ್ತಿದೆ. ಜಯಪುರದಲ್ಲಿ ನಡೆದ ಗ್ರಾಮೀಣ ದಸರಾ ಆಚರಣೆಯೂ ಜಂಬೂ ಸವಾರಿ ಮೆರವಣಿಗೆಯಷ್ಟೇ ಸಂಭ್ರಮದಿAದ ಕೂಡಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಗ್ರಾಮೀಣ ಕ್ರೀಡಾಕೂಟದಲ್ಲಿ ಭಾಗವಹಿಸಿ ಜಯಗಳಿಸಿದ ವಿಜೇತರಿಗೆ ಪ್ರಶಸ್ತಿ ನೀಡಲಾಯಿತು. ಸಂಸದರಾದ ಪ್ರತಾಪ್ ಸಿಂಹ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಯಪುರ ಗ್ರಾ.ಪಂ. ಅಧ್ಯಕ್ಷರಾದ ಎಚ್.ಎನ್.ಮಹಾದೇವಿ, ಉಪಾಧ್ಯಕ್ಷರಾದ ಭೈರೇಶ್, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಡಿ.ಗಿರೀಶ್, ತಹಶಿಲ್ದಾರ್ ಬಿ.ಎನ್.ಗಿರೀಶ್, ಗ್ರಾಮೀಣ ದಸರಾ ಆಚರಣೆ ಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ತಾಲ್ಲೂಕಿನ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒ ರವರು, ಕಂದಾಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.


Spread the love