ಜಾಗತಿಕ ಚಿಂತನೆಗೆ ತೆರೆದುಕೊಳ್ಳಿ: ಡಾ.ಎಂ. ಮೋಹನ ಆಳ್ವ

Spread the love

ಜಾಗತಿಕ ಚಿಂತನೆಗೆ ತೆರೆದುಕೊಳ್ಳಿ: ಡಾ.ಎಂ. ಮೋಹನ ಆಳ್ವ

ವಿದ್ಯಾಗಿರಿ (ಮೂಡುಬಿದಿರೆ): ಇಂದಿನ ವಿದ್ಯಾರ್ಥಿಗಳು ಜಾಗತಿಕ ಚಿಂತನೆಗೆ ತೆರೆದುಕೊಳ್ಳಬೇಕಾಗಿದೆ ಎಂದು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಹೇಳಿದರು.

ಇಲ್ಲಿನ ಆಳ್ವಾಸ್ ಕಾಲೇಜಿನ ಮುಂಡ್ರುದೆಗುತ್ತು ಕೆ.ಅಮರನಾಥ ಶೆಟ್ಟಿ ವೇದಿಕೆಯಲ್ಲಿ ನಡೆದ 10ನೇ ತರಗತಿ ವಿದ್ಯಾರ್ಥಿಗಳ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂದಿನ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ಅವಕಾಶಗಳಿದ್ದು, ಸವಾಲುಗಳೂ ಎದುರಾಗಿವೆ. ಹೀಗಾಗಿ ಅವರ ಚಿಂತನೆಗಳು ಜಾಗತಿಕ ಮಟ್ಟದಲ್ಲಿ ಇರಬೇಕಾಗಿದೆ. ದೇಶಿಯ ಚಿಂತನೆ ಹಾಗೂ ಅವಕಾಶಗಳನ್ನು ಮೀರಿ ಆಲೋಚಿಸಬೇಕಾಗಿದೆ ಎಂದರು.

ಕಾಲಚಕ್ರ ವೇಗವಾಗಿ ತಿರುಗುತ್ತಿದೆ. ಹದಿಹರೆಯದಲ್ಲಿ ದೈಹಿಕ ಹಾಗೂ ಮಾನಸಿಕ ಬದಲಾವಣೆಯು ಪ್ರಕೃತಿ ಸಹಜ ಕ್ರಿಯೆ. 10ನೇ ತರಗತಿ ವಿದ್ಯಾಭ್ಯಾಸವು ನಿಮ್ಮ ಬದುಕಿನ ಅಡಿಪಾಯದ ಕೊನೆಯ ಹಂತ, ಹಾಗಾಗಿ ವಿದ್ಯಾರ್ಥಿಗಳು ತ್ಯಾಗ, ಜವಾಬ್ದಾರಿ ಹಾಗೂ ಬದ್ಧತೆಗಳನ್ನು ಅಳವಡಿಸಿಕೊಳ್ಳಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಉತ್ತೀರ್ಣರಾದರೆ, ಸಾಲದು. ಸ್ಪರ್ಧೆಗಳನ್ನೂ ಎದುರಿಸಬೇಕಾಗುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಪಾಠಗಳ- ಪ್ರವಚನ ನಿರ್ಲಕ್ಷಿಸದೇ, ಪ್ರತಿ ಅಂಕಗಳಿಗೂ ಪ್ರಾಮುಖ್ಯತೆ ನೀಡಬೇಕು ಎಂದರು.

ಹದಿಹರೆಯದಲ್ಲಿ ಎದುರಾಗುವ ಭಾವನಾತ್ಮಕ ಅಂಶಗಳಿಗೆ ಒಳಗಾಗದೆ ಓದಿನ ಕಡೆಗೆ ಗಮನ ಹರಿಸಿ. ಅಭ್ಯಾಸ ಹಾಗೂ ಆರೋಗ್ಯದ ಬಗ್ಗೆ ಎಚ್ಚರವಹಿಸಬೇಕು ಎಂದರು.

ಆಳ್ವಾಸ್ ಶಾಲೆಯ ಆಡಳಿತಾಧಿಕಾರಿ ಪ್ರೀತಮ್ ಕುಂದರ್, ಆಳ್ವಾಸ್ ಕೇಂದ್ರೀಯ ಶಾಲೆಯ ಪ್ರಾಂಶುಪಾಲ ಮೊಹಮ್ಮದ್ ಶಫಿ ಶೇಕ್, ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕ ಪ್ರಶಾಂತ್ ಭಟ್ ಹಾಗೂ ಆಳ್ವಾಸ್ ಇಂಗ್ಲಿಷ್ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ವಿಜಯಾ ಟಿ. ಮೂರ್ತಿ ಇದ್ದರು. ಆಳ್ವಾಸ್ ಇಂಗ್ಲಿಷ್ ಮಾಧ್ಯಮ ಶಾಲೆಯ ಶಿಕ್ಷಕಿ ಸರ್ವಾಣಿ ಟಿ. ಹೆಗ್ಡೆ ಕಾರ್ಯಕ್ರಮವನ್ನು ನಿರೂಪಿಸಿದರು.


Spread the love