ಜಾತಿ ಗಣತಿ ವರದಿ; ಕಾನೂನು ತೊಡಕು ನಿವಾರಿಸಿ ಸರ್ಕಾರಕ್ಕೆ ಸಲ್ಲಿಕೆ- ಕೆ.ಜಯಪ್ರಕಾಶ್ ಹೆಗ್ಡೆ

Spread the love

ಜಾತಿ ಗಣತಿ ವರದಿ; ಕಾನೂನು ತೊಡಕು ನಿವಾರಿಸಿ ಸರ್ಕಾರಕ್ಕೆ ಸಲ್ಲಿಕೆ- ಕೆ.ಜಯಪ್ರಕಾಶ್ ಹೆಗ್ಡೆ

ಚಿಕ್ಕಬಳ್ಳಾಪುರ: ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಗೆ (ಜಾತಿವಾರು ಜನಗಣತಿ) ಸಂಬಂಧಿಸಿದಂತೆ ಎದುರಾಗಿರುವ ಕಾನೂನು ತೊಡಕುಗಳನ್ನು ನಿವಾರಿಸಿದ ನಂತರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರದಿಯನ್ನು ಸುಮ್ಮನೆ ಇಟ್ಟುಕೊಳ್ಳಲು ಸಾಧ್ಯವಿಲ್ಲ. ವರದಿ ವ್ಯರ್ಥವೂ ಆಗಬಾರದು. ಕಾನೂನಿನ ತೊಡಕು ಏನಿದೆಯೊ ಅದನ್ನು ಪರಿಹರಿಸಿಕೊಳ್ಳುತ್ತೇವೆ ಎಂದರು.

ಯಾವುದೇ ವರದಿ ಬರೆದರೂ ಅಧ್ಯಕ್ಷರು, ಸದಸ್ಯರು ಹಾಗೂ ಸದಸ್ಯ ಕಾರ್ಯದರ್ಶಿ ಸಹಿ ಹಾಕಬೇಕು. ಜಾತಿವಾರು ಜನಗಣತಿಯ ಕೊನೆಯ ವರದಿಗೆ ಸದಸ್ಯ ಕಾರ್ಯದರ್ಶಿ ಸಹಿ ಹಾಕಿಲ್ಲ. ಅಂದಿನ ವರದಿಗೆ ಇಂದಿನ ಸದಸ್ಯ ಕಾರ್ಯದರ್ಶಿ ಹೇಗೆ ಸಹಿ ಹಾಕಲು ಸಾಧ್ಯ ಎನ್ನುವ ಪ್ರಶ್ನೆ ಎದುರಾಗುತ್ತದೆ. ಅದನ್ನು ಕಾನೂನಿನಲ್ಲಿ ಅಧಿಕೃತಗೊಳಿಸಲು ಸಾಧ್ಯವೇ ಎನ್ನುವ ಪ್ರಶ್ನೆ ಬರುತ್ತದೆ. ಈ ಎಲ್ಲ ವಿಚಾರಗಳ ಬಗ್ಗೆಯೂ ಚರ್ಚೆ ಆಗುತ್ತಿದೆ ಎಂದು ಹೇಳಿದರು.

ಲಿಂಗಾಯತ ಪಂಚಮಸಾಲಿ ಸಮಾಜವನ್ನು ‘2ಎ’ಗೆ ಸೇರಿಸುವ ಬಗ್ಗೆ ಪರ ಮತ್ತು ವಿರುದ್ಧವಾದ ಅರ್ಜಿಗಳು ಆಯೋಗಕ್ಕೆ ಸಲ್ಲಿಕೆ ಆಗಿವೆ. ಅ.11 ಮತ್ತು 12ಕ್ಕೆ ಸಾರ್ವಜನಿಕ ವಿಚಾರಣೆ ಇದೆ. ಯಾವ ಜಾತಿಯವರು ಎಷ್ಟು ಮಂದಿ ಉದ್ಯೋಗದಲ್ಲಿ ಇದ್ದಾರೆ ಎಂಬ ಮಾಹಿತಿ ನೀಡುವಂತೆ ವಿಶ್ವವಿದ್ಯಾಲಯ, ಸರ್ಕಾರಿ ಇಲಾಖೆಗಳು ಮತ್ತು ಸರ್ಕಾರಿ ಒಡೆತನದ ಸಂಸ್ಥೆಗಳಿಗೆ ತಿಳಿಸಿದ್ದೇವೆ. ಆ ಮಾಹಿತಿ ಬರುತ್ತಿದೆ ಎಂದರು.

ಕೋವಿಡ್ ಕಾರಣದಿಂದ ಕ್ಷೇತ್ರ ಅಧ್ಯಯನ ಸಾಧ್ಯವಾಗಿಲ್ಲ. ಕಚೇರಿಯಲ್ಲಿ ಕುಳಿತು ಮಾಡಬಹುದಾದ ಕೆಲಸಗಳನ್ನು ಪೂರ್ಣಗೊಳಿಸಿದ್ದೇವೆ. ಇನ್ನು ಮುಂದೆ ಸಮುದಾಯದ ಸಾಮಾಜಿಕ ಪರಿಸ್ಥಿತಿ ಹೇಗಿದೆ ಎನ್ನುವುದನ್ನು ತಿಳಿಯಲು ಅವರು ವಾಸಿಸುವ ಸ್ಥಳಗಳಿಗೆ ಭೇಟಿ ನೀಡುತ್ತೇವೆ. ಅಧ್ಯಯನದ ನಂತರ ಶೀಘ್ರದಲ್ಲಿಯೇ ಸರ್ಕಾರಕ್ಕೆ ವರದಿಕೊಡುತ್ತೇವೆ ಎಂದು ಹೇಳಿದರು.

ನಾವು ವರದಿ ಕೊಡದೆ ಸರ್ಕಾರ ಏನನ್ನೂ ಮಾಡಲು ಸಾಧ್ಯವಿಲ್ಲ. ನಾವು ಕೊಟ್ಟ ವರದಿಯನ್ನು ಪರಿಗಣಿಸುವುದು ಸರ್ಕಾರದ ವಿವೇಚನೆಗೆ ಬಿಟ್ಟಿದ್ದು ಎಂದರು.

ಜಾತಿಪಟ್ಟಿಗೆ ಸೇರ್ಪಡೆ ಮತ್ತಿತರ ವಿಚಾರಗಳಿಗೆ ಸಂಬಂಧಿಸಿದ 10 ವರದಿಗಳನ್ನು ಆಯೋಗ ಸಿದ್ಧಮಾಡಿದೆ. ಆಯೋಗದ ಸಭೆಯಲ್ಲಿ ಚರ್ಚಿಸಿ ಶೀಘ್ರದಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗುವುದು. ಕೆಲವರು ಜಾತಿಪಟ್ಟಿಗೆ ಸೇರಬೇಕಾಗಿದೆ. ಅಂತಹವರ ಪಟ್ಟಿಯನ್ನು ಕಳುಹಿಸಿ ಎಂದು ಪಿಡಿಒ, ತಹಶೀಲ್ದಾರರಿಗೆ ಸೂಚಿಸಿದ್ದೇವೆ ಎಂದರು.


Spread the love