
ಜಾಯಿಂಟ್ ವ್ಹೀಲ್‌ನಿಂದ ಗಾಯ: ತನಿಖೆಗೆ ಒತ್ತಾಯ
ಶ್ರೀರಂಗಪಟ್ಟಣ: ಜಾಯಿಂಟ್ ವ್ಹೀಲ್‌ಗೆ ಬಾಲಕಿಯ ಕೂದಲು ಸಿಲುಕಿ ದುರಂತ ನಡೆದಿರುವುದಕ್ಕೆ ಬಾಲಕಿಗೆ ಪರಿಹಾರ, ಆಸ್ಪತ್ರೆಯ ಚಿಕಿತ್ಸೆಯ ವೆಚ್ಚವನ್ನು ಭರಿಸಬೇಕು, ಶ್ರೀರಂಗಪಟ್ಟಣ ತಹಸೀಲ್ದಾರ್ ಶ್ವೇತಾ ರವೀಂದ್ರ, ಮುಖ್ಯಾಧಿಕಾರಿ, ಶ್ರೀರಂಗನಾಥ ದೇವಸ್ಥಾನದ ಆಡಳಿತಾಧಿಕಾರಿಗಳ ಮೇಲೆ ಪ್ರಕರಣ ದಾಖಲು ಮಾಡಬೇಕೆಂದು ರಾಜ್ಯ ಮುಖ್ಯಕಾರ್‍ಯದರ್ಶಿಗಳು ಹಾಗೂ ಜಿಲ್ಲಾಧಿಕಾರಿಗಳನ್ನು ಕರ್ನಾಟಕ ರಾಜ್ಯ ರೈತಸಂಘದ ಮುಖಂಡರಾದ ಮೋಹನ್‌ಕುಮಾರ್ ಅಲಿಯಾಸ್ ಕಿರಂಗೂರು ಪಾಪು ಒತ್ತಾಯಿಸಿದ್ದಾರೆ.
ಶ್ರೀರಂಗಪಟ್ಟಣ ಒಂದು ಐತಿಹಾಸಿಕ ಸ್ಥಳವಾಗಿದ್ದು, ರಂಗನಾಥ ದೇವಾಲಯ ಆವರಣದಲ್ಲಿ ಪ್ರತಿವರ್ಷವೂ ವಿಜೃಂಭಣೆಯಿಂದ ರಾಜ್ಯದ ಮೂಲೆಮೂಲೆಗಳಿಂದ ಭಕ್ತಾಧಿಗಳು, ಜನಸಾಮಾನ್ಯರು ಜಾತ್ರೆ, ದರ್ಶನ, ರಥೋತ್ಸವಕ್ಕೆ ಬರುತ್ತಾರೆ. ಇದರ ಉಸ್ತುವಾರಿಯು ಮುಜರಾಯಿ ಅಧಿಕಾರಿ, ತಹಸೀಲ್ದಾರ್, ಪುರಸಭಾ ಮುಖ್ಯಾಧಿಕಾರಿ ಇತರೆ ಅಧಿಕಾರಿಗಳು ಜವಾಬ್ದಾರಿ ಹೊತ್ತಿರುತ್ತಾರೆ.
ಜಾತ್ರೆ, ರಥೋತ್ಸವ ನಡೆಯುವ ಸ್ಥಳದಲ್ಲಿ ಅಧಿಕಾರಿಗಳು ಸಾಧಕ-ಬಾಧಕ ಪರಿಶೀಲನೆ ಮಾಡಿ, ಷರತ್ತುಗಳನ್ವಯದಲ್ಲಿ ಅನುಮತಿ ಪಡೆಯಬೇಕು. ಜಾಯಿಂಟ್ ವೀಲ್‌ಗೆ ಅನುಮತಿ ಪಡೆಯಬೇಕಾದರೆ ಮುಂಜಾಗ್ರತಾ ಕ್ರಮ ವಹಿಸಬೇಕು. ಗುತ್ತಿಗೆದಾರರಿಗೆ ಷರತ್ತುಬದ್ಧ ಅನುಮತಿ ನೀಡಬೇಕು. ಅಲ್ಲಿ ಪಾಲಿಸಬೇಕಾದ ತುರ್ತು ನಿಯಮಗಳನ್ನು ದಪ್ಪ ಅಕ್ಷರಗಳಲ್ಲಿ ಬರೆಯಬೇಕು. ಜಾಯಿಂಟ್ ವೀಲ್‌ನಂಥ ಕ್ರೀಡೆಯನ್ನು ಆಡಲು ಹೋದಾಗ ಮುಗ್ದ ಬಾಲಕಿಗೆ ಆಟದ ಆಸೆಗೆ ಕೂದಲು ಸಿಲುಕಿಕೊಂಡು ತಲೆ ಬುರುಡೆ, ಚರ್ಮವೆದ್ದು ತುಂಬಾ ಅನಾಹುತ ಸಂಭವಿಸಿದೆ. ಮೈಸೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಸಾವು-ಬದುಕಿನ ಹೋರಾಟ ನಡೆಸುತ್ತಿರುವ ಮುಗ್ಧ ಬಾಲಕಿಗೆ ಉಸ್ತುವಾರಿ ಸಚಿವರು, ಕ್ಷೇತ್ರದ ಶಾಸಕರು ತಕ್ಷಣ ಪರಿಹಾರ ಹಾಗೂ ಆಸ್ಪತ್ರೆ ವೆಚ್ಚ ಭರಿಸಬೇಕು. ಬೇಜವಾಬ್ದಾರಿ ಅಧಿಕಾರಿಗಳ ಮೇಲೆ ಶಿಸ್ತು ಕ್ರಮಕೈಗೊಳ್ಳಬೇಕಾಗಿದೆ.
ಬಾಲಕಿಗೆ ರಕ್ತಸ್ರಾವವಾಗಿ ಜಾತ್ರೆಯಲ್ಲಿ ಆಂಬುಲೆನ್ಸ್ ವ್ಯವಸ್ಥೆಯೂ ಇಲ್ಲದೆ, ಆಯೋಜಕರು, ತಹಸೀಲ್ದಾರ್‌ರವರು ಜಾತ್ರೆಯಲ್ಲಿರಬೇಕಾಗಿತ್ತು. ಮೇಲ್ಕಂಡ ಸಿಬ್ಬಂದಿಗಳು ಯಾವುದನ್ನು ಗಮನವಹಿಸದೆ ಈ ರೀತಿ ಅನಾಹುತಕ್ಕೆ ಕಾರಣವಾಗಿದೆ. ಬಾಲಕಿಗೆ ಹೆಚ್ಚಿನ ಪರಿಹಾರ ನೀಡಿ, ಆಸ್ಪತ್ರೆ ಚಿಕಿತ್ಸೆಯ ವೆಚ್ಚ ಭರಿಸಬೇಕು, ಜಾಯಿಂಟ್ ವೀಲ್‌ನ ನಡೆಸುವವರು, ತಹಸೀಲ್ದಾರ್, ಗುತ್ತಿಗೆದಾರ, ಪುರಸಭಾ ಮುಖ್ಯಾಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸರ್ಕಾರ, ಮುಖ್ಯಕಾರ್‍ಯದರ್ಶಿಗಳು ಹಾಗೂ ಜಿಲ್ಲಾಧಿಕಾರಿಗಳನ್ನು ಪಾಪು ಒತ್ತಾಯಿಸಿದ್ದಾರೆ.