ಜಿಎಸ್‌ಟಿ ಇಳಿಕೆಗೆ ಕರಾವಳಿಯ ಬಿಜೆಪಿ ಜನಪ್ರತಿನಿಧಿಗಳ ಕೊಡುಗೆ ಏನು? : ಐವನ್ ಡಿಸೋಜಾ
ಮಂಗಳೂರು: ಕೇಂದ್ರ ಸರ್ಕಾರ ಜಿಎಸ್‌ಟಿ ತೆರಿಗೆ ಕಡಿತಗೊಳಿಸಿರುವುದು ಜನತೆಗೆ ದೀಪಾವಳಿ ಗಿಫ್ಟ್ ಎಂದು ಕರಪತ್ರ ಮುದ್ರಿಸಿ ಅಂಚೆ ಮೂಲಕ ಕಳುಹಿಸುತ್ತಿರುವ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಹಾಗೂ ಕರಾವಳಿಯ ಬಿಜೆಪಿ ಜನಪ್ರತಿನಿಧಿಗಳಿಂದ ಜಿಎಸ್‌ಟಿ ಇಳಿಕೆಗೆ ಮಾಡಿರುವ ಹೋರಾಟವೇನು ಎಂಬುದನ್ನು ತಿಳಿಸಲಿ ಎಂದು ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾ ಸವಾಲು ಹಾಕಿದ್ದಾರೆ.
ಗುರುವಾರ ಸುದ್ದಿಗೋಷ್ಟಿಯಲ್ಲಿ ಈ ಸವಾಲು ಹಾಗಿರುವ ಐವನ್ ಡಿಸೋಜಾ, ಕಳೆದ ಎಂಟು ವರ್ಷಗಳಿಂದ ಕೇಂದ್ರ ಸರ್ಕಾರ ದುಬಾರಿ ಸ್ಲ್ಯಾಬ್‌ಗಳಲ್ಲಿ ಜಿಎಸ್‌ಟಿ ವಸೂಲಿ ಮಾಡುತ್ತಿದ್ದರೂ ಮಾತನಾಡದ ಬಿಜೆಪಿ ಶಾಸಕರು ಹಾಗೂ ಸಂಸದರು ಈಗ ಮಾತ್ರ ದೀಪಾವಳಿ ಗಿಫ್ಟ್ ಎನ್ನುತ್ತಿರುವುದು ನಾಚಿಕೆಗೇಡು ಎಂದು ಟೀಕಿಸಿದ್ದಾರೆ.
ಜಿಎಸ್‌ಟಿಯಡಿ ಕಳೆದ ಎಂಟು ವರ್ಷಗಳಲ್ಲಿ ವಸೂಲಿ ಮಾಡಿದ ಜಿಎಸ್‌ಟಿ ಮೊತ್ತ ಎಷ್ಟು ಹಾಗೂ ಅದನ್ನು ಯಾವುದಕ್ಕೆಲ್ಲ ಖರ್ಚುಮಾಡಲಾಗಿದೆ? ಈ ವೇಳೆ ರಾಜ್ಯಕ್ಕೆ ನೀಡಿದ ಯೋಜನೆ ಏನು ಎಂಬ ಬಗ್ಗೆ ಶ್ವೇತಪತ್ರ ಹೊರಡಿಸಬೇಕು. ಈವರೆಗೆ ರಾಜ್ಯ ಸರ್ಕಾರ ಪಾವತಿ ಮಾಡಿದ ಜಿಎಸ್‌ಟಿ ಬಗ್ಗೆ ವಿವರ ನೀಡಬೇಕು. ಕೇಂದ್ರದಿಂದ ರಾಜ್ಯಕ್ಕೆ ೧೧,೪೯೫ ಕೋಟಿ ರು. ಜಿಎಸ್‌ಟಿ ಮೊತ್ತ ಪಾವತಿ ಬಾಕಿ ಇದ್ದು, ಇದರ ಬಗ್ಗೆ ಬಿಜೆಪಿ ಶಾಸಕರು, ಸಂಸದರು ಮಾತನಾಡುತ್ತಿಲ್ಲ. ಇಂತಹ ದೀಪಾವಳಿ ಗಿಫ್ಟ್ ಎಂಬ ಕರಪತ್ರಗಳಿಗೆ ಜನತೆ ಸೊಪ್ಪು ಹಾಕುವುದಿಲ್ಲ ಎಂದರು.
ಪುಕ್ಸಟೆ ಪ್ರಚಾರವನ್ನು ಪ್ರಧಾನಿ ಮೋದಿಯವರ ಫೋಟೋ ಬಳಸಿ ಮಾಡುವ ಸ್ಥಳೀಯ ಶಾಸಕರಿಗೆ ಅದನ್ನು ನೇರವಾಗಿ ಜರಿಗೆ ಕೊಡಲು ಆಗದೆ ಅಂಚೆಯವರ ಮೂಲಕ ಕಳುಹಿಸುತ್ತಿದ್ದಾರೆ. ಅಂಚೆಯವರು ಕೆಲ ಮನಗಳಿಗೆ ನಾಲ್ಕೈದರಂತೆ ಈ ಕರಪತ್ರಗಳನ್ನು ಇಟ್ಟು ತೆರಳಿದ್ದಾರೆ ಎಂದವರು ಆಕ್ಷೇಪಿಸಿದರು.
ಜಿಎಸ್‌ಟಿ ಕಡಿಮೆ ಮಾಡಿದ ಯಶಸ್ಸು ಬಿಜೆಪಿಗೆ ಅಲ್ಲ, ಕಾಂಗ್ರೆಸ್‌ಗೆ ಸಲ್ಲಬೇಕು. ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟದ ಸತತ ಹೋರಾಟದ ಫಲವಾಗಿ ಕೇಂದ್ರ ಸರ್ಕಾರ ಜಿಎಸ್‌ಟಿ ತೆರಿಗೆ ಇಳಿಕೆ ಮಾಡಿದೆ. ಇದರಲ್ಲಿ ಬಿಜೆಪಿ ಸಾಧನೆ ಏನೂ ಇಲ್ಲ ಎಂದರು. ಜಿಎಸ್‌ಟಿ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಇಲ್ಲಿನ ಸಂಸದರು ಕ್ಷುಲ್ಲಕವಾಗಿ ಮಾತನಾಡಿದ್ದಾರೆ. ಸಿಎಂ ಅವರು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ. ದ.ಕ. ಜಿಲ್ಲೆಯ ರಸ್ತೆ ಹದಗೆಟ್ಟಿದ್ದು, ರೈಲ್ವೆ ಕಾಮಗಾರಿ ಹಳ್ಳ ಹಿಡಿದಿದೆ. ಆದರೆ ರಾಜ್ಯ ಸರ್ಕಾರ ಪಂಚಗ್ಯಾರಂಟಿ ಸಹಿತ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತರುವ ಮೂಲಕ ಜನರ ಆರ್ಥಿಕ ಮಟ್ಟವನ್ನು ಸುಧಾರಿಸಿದೆ ಎಂದರು.