
ಜಿಟಿ ಜಿಟಿ ಮಳೆಯೊಂದಿಗೆ ಮಂಜಿನ ನೋಟ
ಮಾಂಡೌಸ್ ಚಂಡ ಮಾರುತದ ಪ್ರಭಾವದಿಂದಾಗಿ ಕತ್ತಲು ಕವಿದ ವಾತಾವರಣ ಜಿಟಿ ಜಿಟಿ ಮಳೆ ಜನರನ್ನು ಮನೆಯಿಂದ ಹೊರಗೆ ಬಾರದಂತೆ ಮಾಡಿದೆ. ಜತೆಗೆ ರೈತಾಪಿ ಜನರು ಸಂಕಷ್ಟ ಪಡುವಂತಾಗಿದೆ. ಈ ಬಾರಿ ಮುಂಗಾರು ಉತ್ತಮವಾದ ಹಿನ್ನಲೆಯಲ್ಲಿ ಕೆರೆಕಟ್ಟೆಗಳು ಭರ್ತಿಯಾಗಿದ್ದರೆ ಇಡೀ ಪರಿಸರ ಹಸಿರಿನಿಂದ ಕಂಗೊಳಿಸುತ್ತಿದೆ.

ಜಿಟಿ ಜಿಟಿ ಮಳೆಯ ನಡುವೆ ಮುಂಜಾನೆಯ ಮಂಜು ಸುಂದರ ದೃಶ್ಯ ಕಾವ್ಯವನ್ನು ಬರೆಯುತ್ತಿದೆ. ಬೆಟ್ಟಗುಡ್ಡ, ಹೊಲಗದ್ದೆಗಳಲ್ಲಿ ಹರಡುವ ಮಂಜಿನ ನೋಟ ಪ್ರಾಂಜಲ ಮನಸ್ಸಿನ ನಿಸರ್ಗಪ್ರೇಮಿಗಳಿಗೆ ಒಂದಷ್ಟು ಖುಷಿ, ಸಂತಸವನ್ನು ತಂದು ಕೊಡುತ್ತಿದೆ. ಇಡೀ ನಿಸರ್ಗವನ್ನು ಮುಸುಕು ಹಾಕಿ ನಲಿಯುವ ಮಂಜಿನ ನೋಟ ರೋಮಾಂಚನ.
ಬಹುಶಃ ಮಂಜಿನ ಸುಂದರ ನೋಟ ಎಲ್ಲರಿಗೂ ಲಭ್ಯವಾಗುವುದಿಲ್ಲ. ಕಾರಣ ಮುಂಜಾನೆಯ ಚಳಿಗೆ ಬೆಚ್ಚಗೆ ಮಲಗುವವರೇ ಹೆಚ್ಚು. ಇವರ ನಡುವೆ ಬೆಳಕು ಹರಿಯುತ್ತಿದ್ದಂತೆಯೇ ಹಾಲು, ಪೇಪರ್ ಹಾಕಲು ಹೊರಡುವವರು, ವಾಯು ವಿಹಾರಕ್ಕೆ ತೆರಳುವವರು, ಉಳುಮೆಗೆಂದು ಹೊಲದತ್ತ ಮುಖ ಮಾಡುವವರಿಗೆ ಮಂಜಿನ ಆಟ, ನೋಟ ನಿತ್ಯದ ದಿನಚರಿಯಾಗುತ್ತದೆ. ಈ ಸಮಯದಲ್ಲಿ ಮಂಜು ಮುಸುಕಿಕೊಳ್ಳುವುದು ಸಾಮಾನ್ಯ. ಕೆಲವೊಮ್ಮೆ ಬೆಳಗ್ಗೆ ಎಂಟು ಗಂಟೆಯಾದರೂ ರವಿಗೆ ತೆರೆ ಎಳೆದು ತಮ್ಮ ವೈಭವ ತೋರುವ ಮಂಜು ನಾಟ್ಯವಾಡುತ್ತಲೇ ಮಾಯವಾಗಿಬಿಡುತ್ತದೆ.
ಮೈಸೂರು ನಗರವಾಸಿಗಳು ಮಂಜಿನ ಲಾಸ್ಯ ನೋಡಬೇಕೆಂದರೆ ಚುಮುಚುಮು ಬೆಳಕಲ್ಲಿ ಚಾಮುಂಡಿಬೆಟ್ಟಕ್ಕೆ ಹೆಜ್ಜೆ ಹಾಕಬೇಕು. ಬೆಟ್ಟದಿಂದ ನಿಂತು ಹಾಗೆ ಸುಮ್ಮನೆ ಕಣ್ಣಾಡಿಸಬೇಕು ಅಲ್ಲಿಂದ ಕಾಣಸಿಗುವ ಸುಂದರ ರಮಣೀಯ ದೃಶ್ಯಗಳು ನಮ್ಮನ್ನು ಕುಣಿದು ಕುಪ್ಪಳಿಸುವಂತೆ ಮಾಡಿ ಬಿಡುತ್ತದೆ. ಹಾಗೆಸುಮ್ಮನೆ ಹಳ್ಳಿಗಳತ್ತ ಮುಖ ಮಾಡಿ ನೋಡಿ ಮಬ್ಬುಗತ್ತಲಲ್ಲೇ ಮಂಜಿಗೆ ಗೋಲಿ ಹೊಡೆದು ಶೀತ ಗಾಳಿಯನ್ನು ಲೆಕ್ಕಿಸದೆ ತಮ್ಮ ಹೊಲದಲ್ಲಿ ದುಡಿಮೆಗೆ ತೊಡಗಿಸಿಕೊಳ್ಳುವ ರೈತಾಪಿ ವರ್ಗ.. ಅದರಾಚೆಗೆ ತಮ್ಮ ದೈನಂದಿನ ಕೆಲಸ ಕಾರ್ಯಗಳಿಗಾಗಿ ಪಟ್ಟಣದತ್ತ ಹೊರಡುವ ಮಂದಿ.. ಇದೆಲ್ಲದರ ನಡುವೆ ಚಳಿಗೆ ಹೆದರಿ ಬೆಚ್ಚಗೆ ಇನ್ನೊಂದಷ್ಟು ಹೊತ್ತು ಮಲಗಿ ಬಿಡೋಣ ಎನ್ನುವ ಸೋಮಾರಿ ಜನ.
ಈಗೀಗ ಜನ ಶೀತಗಾಳಿ, ದಟ್ಟ ಮಂಜಿಗೆ ಹಿಡಿಶಾಪ ಹಾಕಲಾರಂಭಿಸಿದ್ದಾರೆ. ಮೊದಲೇ ಜನರನ್ನು ಹಿಂಡಿ ಹಿಪ್ಪೆ ಮಾಡಿರುವ ಕೊರೊನಾವನ್ನು ಮರೆತು ಮುನ್ನಡೆಯುತ್ತಿರುವ ಜನ ಈಗಿನ ಮಳೆಗಾಳಿಯ ವಾತಾವರಣದ ಬದಲಾವಣೆಗೆ ಶೀತ, ಕೆಮ್ಮು, ನೆಗಡಿಯಿಂದ ಮಕ್ಕಳು, ಹಿರಿಯರು ಹೀಗೆ ಎಲ್ಲರೂ ಬಳಲುತ್ತಿದ್ದಾರೆ. ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿ ಅದರಲ್ಲೂ ನದಿ ಜಲಾಶಯವನ್ನು ಹೊಂದಿರುವ ಪ್ರದೇಶಗಳಂತು ತಣ್ಣಗಿವೆ. ಅದರಲ್ಲೂ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ ಸೇರಿದಂತೆ ದಟ್ಟ ಕಾಡು ಮತ್ತು ನೀರಿನಿಂದ ಸುತ್ತುವರಿದಿರುವ ಹೆಚ್.ಡಿ.ಕೋಟೆಯಲ್ಲಿ ಮಂಜಿನ ಆಟ ಮತ್ತು ಕಾಟ ತುಸು ಜಾಸ್ತಿ ಎಂದರೆ ತಪ್ಪಾಗಲಾರದು.
ಪ್ರತಿ ವರ್ಷವೂ ಡಿಸೆಂಬರ್ ತಿಂಗಳಲ್ಲಿ ದಟ್ಟ ಮಂಜು ಕಾಣಿಸಿಕೊಳ್ಳುವುದು ಸಾಮಾನ್ಯ. ಮುಂಜಾನೆಯ ಮಂಜು ಅಪರೂಪಕ್ಕೆ ನೋಡುವವರಿಗೆ ಶೃಂಗಾರವಾದರೂ ಅದು ಅಪಾಯಕಾರಿ. ಹೀಗಾಗಿ ಜನ ತಮ್ಮ ಆರೋಗ್ಯದತ್ತ ಕಾಳಜಿ ವಹಿಸುವುದರೊಂದಿಗೆ ದೇಹವನ್ನು ಬೆಚ್ಚಗಿಟ್ಟುಕೊಳ್ಳಬೇಕು. ಇದೆಲ್ಲದರ ನಡುವೆ ಮುಂಜಾನೆ ಮಂಜು ದಟ್ಟವಾಗಿ ಆವರಿಸಿಕೊಳ್ಳುವುದರಿಂದ ವಾಹನ ಸವಾರರು ಭಯದಲ್ಲಿಯೇ ವಾಹನ ಚಾಲಿಸುವಂತಾಗಿದೆ. ಸ್ವಲ್ಪ ಎಚ್ಚರ ತಪ್ಪಿದರೂ ಅಪಘಾತ ನಿಶ್ಚಿತ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ದಟ್ಟವಾದ ಮಂಜು ಆವರಿಸಿದ ವೇಳೆ ಬಹಳ ಜಾಗರೂಕರಾಗಿರುವುದು ಅಗತ್ಯವಾಗಿದೆ.
ಇದೀಗ ಸುರಿಯುತ್ತಿರುವ ಮಳೆ ಭಯದ ವಾತಾವರಣವನ್ನು ನಿರ್ಮಾಣ ಮಾಡಿದೆ. ಅದು ಏನೇ ಇರಲಿ ಜಿಟಿ ಜಿಟಿ ಮಳೆ ಮತ್ತು ದಟ್ಟವಾದ ಮಂಜು ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿರುವುದರಿಂದ ಎಚ್ಚೆತ್ತುಕೊಳ್ಳುವುದು ಅಗತ್ಯವಾಗಿದೆ.