
ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಚಾರ ಫಲಕ ಅಳವಡಿಸಲು ಅನುಮತಿ ಪಡೆಯಬೇಕು: ಜಿಲ್ಲಾದಿಕಾರಿ ಕೂರ್ಮಾರಾವ್ ಎಂ.
ಉಡುಪಿ: ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಯಾವುದೇ ಸಭೆ ಸಮಾರಂಭಗಳು, ಕಾರ್ಯಕ್ರಮಗಳಲ್ಲಿ ಪ್ರಚಾರ ಫಲಕಗಳನ್ನು ಅಳವಡಿಸುವ ಮುನ್ನ ಸ್ಥಳೀಯ ಸಂಸ್ಥೆಗಳಿಂದ ಅನುಮತಿ ಪಡೆಯುವುದು ಕಡ್ಡಾಯ. ತಪ್ಪಿದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ತಿಳಿಸಿದ್ದಾರೆ.
ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ನಡೆದ ರಾಜಕೀಯ ಪಕ್ಷಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಚಾರ ಫಲಕಗಳ ಅಳವಡಿಕೆ, ಭಿತ್ತಿಪತ್ರ ಕರಪತ್ರಗಳ ಹಂಚಿಕೆ, ಧ್ವನಿವರ್ಧಕಗಳ ಬಳಕೆ ಹಾಗೂ ಪ್ರಚಾರಕ್ಕೆ ಸಂಬಂಧಪಟ್ಟ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕು. ನಿಯಮ ಉಲ್ಲಂಘಿಸಿದರೆ ಕ್ರಮ ತೆಗೆದುಕೊಳ್ಳಲಾಗುವುದು.
ಅನುಮತಿ ಪಡೆದ ಕಾಲಾವಧಿಯ ಬಳಿಕ ಪ್ರಚಾರ ಫಲಕಗಳನ್ನು ತೆರವುಗೊಳಿಸಬೇಕು. ಸಭೆ, ಸಮಾರಂಭ, ಮೆರವಣಿಗೆ ಮಾಡಲು ಸಹಿತ ಅನುಮತಿ ಕಡ್ಡಾಯ ಎಂದು ಜಿಲ್ಲಾಧಿಕಾರಿ ಹೇಳಿದರು.
ಮತದಾರರ ಪಟ್ಟಿಯಲ್ಲಿ ಜಿಲ್ಲೆಯ ಅರ್ಹ ಮತದಾರರು ಹೆಸರು ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಹೆಸರು ಬಿಟ್ಟು ಹೋಗಿದ್ದಲ್ಲಿ ಕೂಡಲೇ ಹೆಸರು ನೋಂದಾಯಿಸಿಕೊಳ್ಳಬೇಕು, ಮುಂದಿನ ವಾರ ಬಿಎಲ್‌ಒಗಳು ಹಾಗೂ ಚುನಾವಣಾ ಏಜೆಂಟರು ಮತಗಟ್ಟೆ ಕೇಂದ್ರಗಳಲ್ಲಿ ಮತದಾರರ ಪಟ್ಟಿ ಪರಿಶೀಲಿಸಿ ಗೊಂದಲಗಳಿದ್ದಲ್ಲಿ ಚುನಾವಣಾಧಿಕಾರಿ ಗಮನಕ್ಕೆ ತರಬೇಕು ಎಂದು ಸೂಚಿಸಿದರು.
ಪ್ರತಿ ಮತದಾನದ ಕೇಂದ್ರಗಳಲ್ಲಿ ಅಗತ್ಯ ಮೂಲಸೌಕರ್ಯಗಳು ಇರಬೇಕು. ಸೌಲಭ್ಯಗಳು ಇಲ್ಲದಿದ್ದರೆ ಚುನಾವಣಾಧಿಕಾರಿ ಗಮನಕ್ಕೆ ತಂದು ಒದಗಿಸಬೇಕು. ಈ ಬಾರಿ ವಿಶೇಷವಾಗಿ 80 ವರ್ಷ ಮೇಲ್ಪಟ್ಟವರು ಮತ್ತು ಅಂಗವಿಕಲರಿಗೆ ಚುನಾವಣಾ ಆಯೋಗವು ಅಂಚೆ ಮತದಾನ ಮಾಡಲು ಅವಕಾಶ ನೀಡುವ ಸಾಧ್ಯತೆಗಳಿವೆ ಎಂದರು.
ಇ -ಪತ್ರಿಕೆ ಬಿಡುಗಡೆ:
ಜಿಲ್ಲಾಧಿಕಾರಿ ಕೂರ್ಮಾರಾವ್ ಸ್ವೀಪ್ ಚುನಾವಣಾ ಇ -ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮತದಾರರಿಗೆ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಿಕೆತ ಕುರಿತು ವಿವಿಧ ಕಾರ್ಯಕ್ರಗಳನ್ನು ಹಮ್ಮಿಕೊಳ್ಳುವ ಮೂಲಕ ಜನರಲ್ಲಿ ಚುನಾವಣಾ ಸಂಬಂಧಿತ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಸ್ವೀಪ್ ಸಮಿತಿ ಮಾಡುತ್ತಾ ಬಂದಿದ್ದು, ಇದರ ಭಾಗವಾಗಿ ಇ-ಪತ್ರಿಕೆ ಬಿಡುಗಡೆ ಮಾಡಲಾಗಿದೆ ಎಂದರು.
ಜಿಲ್ಲೆಯಲ್ಲಿ ಶೇ 100ರಷ್ಟು ಮತದಾನವಾಗಬೇಕು ಎಂಬ ಗುರಿಯನ್ನು ಸ್ವೀಪ್ ಸಮಿತಿ ಹೊಂದಿದೆ. ಮತದಾರರು ಆಸೆ ಆಮಿಷಗಳಿಗೆ ಬಲಿಯಾಗದೆ, ಮತದಾನದ ದಿನ ಮತಗಟ್ಟೆಗೆ ಬಂದು ಮತ ಚಲಾಯಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷರೂ ಆಗಿರುವ ಎಚ್.ಪ್ರಸನ್ನ ಮಾತನಾಡಿ, ಚುನಾವಣಾ ಪ್ರಕ್ರಿಯೆಯಲ್ಲಿ ಸರ್ವರ ಒಳಗೊಳ್ಳುವಿಕೆ ಅಗತ್ಯವಾಗಿದ್ದು, ಮತದಾನದ ಬಗ್ಗೆ ಜನ ಜಾಗೃತಿ ಮೂಡಿಸಲು 2 ತಿಂಗಳಿನಿಂದ ನಿರಂತರ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಸ್ವೀಪ್ ಕಾರ್ಯಕ್ರಮಗಳ ಸುದ್ದಿಗಳನ್ನು ಇ-ಪತ್ರಿಕೆಯ ಮೂಲಕ ಪ್ರಚುರಪಡಿಸಲಾಗುವುದು ಎಂದರು.
ಎಸ್‌ಪಿ ಹಾಕೆ ಅಕ್ಷಯ್ ಮಚ್ಚೀಂದ್ರ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ, ತಾಲ್ಲೂಕು ಚುನಾವಣಾ ಅಧಿಕಾರಿಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಇದ್ದರು.