ಜಿಲ್ಲೆಯಲ್ಲಿ ಡ್ರಗ್ಸ್ ಮಾಫಿಯಾ ನಿಯಂತ್ರಣಕ್ಕೆ ಪ್ರತ್ಯೇಕ ಘಟಕ ರಚನೆಗೆ ಶಾಸಕ ಯಶ್ಪಾಲ್ ಸುವರ್ಣ ಆಗ್ರಹ 

Spread the love

ಜಿಲ್ಲೆಯಲ್ಲಿ ಡ್ರಗ್ಸ್ ಮಾಫಿಯಾ ನಿಯಂತ್ರಣಕ್ಕೆ ಪ್ರತ್ಯೇಕ ಘಟಕ ರಚನೆಗೆ ಶಾಸಕ ಯಶ್ಪಾಲ್ ಸುವರ್ಣ ಆಗ್ರಹ 

ಉಡುಪಿ ಜಿಲ್ಲೆಯಲ್ಲಿ ಗಣನೀಯ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಯುವ ಜನತೆ ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗುತ್ತಿರುವ ಕಳವಳಕಾರಿ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವತಿಯಿಂದ ಡ್ರಗ್ಸ್ ಮಾಫಿಯಾ ನಿಯಂತ್ರಣಕ್ಕೆ ಪ್ರತ್ಯೇಕ ಘಟಕವನ್ನು ಆರಂಭಿಸುವಂತೆ ಉಡುಪಿ ಶಾಸಕರಾದ ಯಶ್ ಪಾಲ್ ಸುವರ್ಣ ರವರು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೇ ಅಕ್ಷಯ್ ಮಚ್ಚಿಂದ್ರ ರವರನ್ನು ಭೇಟಿ ಮಾಡಿ ಆಗ್ರಹಿಸಿದರು.

ಈ ಬಗ್ಗೆ ಈಗಾಗಲೇ ಗೃಹ ಸಚಿವರಾದ ಜಿ. ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್ ರವರಿಗೆ ಮನವಿ ಸಲ್ಲಿಸಿದ್ದು ಪ್ರತಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಹಸ್ತಾಂತರಿಸಿದರು.

ಉಡುಪಿ ಜಿಲ್ಲೆ ಶೈಕ್ಷಣಿಕ, ಧಾರ್ಮಿಕ, ಬ್ಯಾಂಕಿಂಗ್, ಮೀನುಗಾರಿಕೆ, ಆರೋಗ್ಯ ಕ್ಷೇತ್ರದಲ್ಲಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ.

ಉಡುಪಿ ಮಣಿಪಾಲ ಸೇರಿದಂತೆ ವಿವಿಧ ಭಾಗಗಳಲ್ಲಿ ಅವ್ಯಾಹತವಾಗಿ ಮಾದಕ ದ್ರವ್ಯಜಾಲ ಸಕ್ರಿಯವಾಗಿದ್ದು, ಯುವ ಜನತೆ ಮಾದಕ ದ್ರವ್ಯದ ವ್ಯಸನಿಗಳಾಗಿ ತಮ್ಮ ಭವಿಷ್ಯವನ್ನು ಹಾಳು ಮಾಡುವ ಜೊತೆ ಜೊತೆಗೆ ಸಮಾಜದಲ್ಲಿ ಅಪರಾಧಿ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿರುವ ಬಗ್ಗೆ ದೂರುಗಳು ಕೇಳಿಬರುತ್ತಿದೆ.

ಪೊಲೀಸ್ ಇಲಾಖೆ ಈ ಪಿಡುಗನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲೆಯ ಪ್ರತಿ ಠಾಣೆಯಲ್ಲಿ ಡ್ರಗ್ಸ್ ದಂಧೆಯಲ್ಲಿ ತೊಡಗಿರುವ ವಿರುದ್ಧ ಕಠಿನ ಕ್ರಮ ಹಾಗೂ ಜಿಲ್ಲಾ ಮಟ್ಟದಲ್ಲಿ ಪ್ರತ್ಯೇಕ ಘಟಕ ರಚಿಸುವ ಮೂಲಕ ಡ್ರಗ್ಸ್ ಮಾಫಿಯಾ ವಿರುದ್ಧ ನಿರಂತರವಾಗಿ ಕಾರ್ಯಾಚರಣೆ ನಡೆಸುವಂತೆ ತಿಳಿಸಿದ್ದಾರೆ.


Spread the love