Home Mangalorean News Kannada News ಜಿಲ್ಲೆಯಲ್ಲಿ ರೂ.258 ಕೋಟಿ ಬೆಳೆ ಸಾಲ ಮನ್ನಾ ಪ್ರಕ್ರಿಯೆ ಆರಂಭ

ಜಿಲ್ಲೆಯಲ್ಲಿ ರೂ.258 ಕೋಟಿ ಬೆಳೆ ಸಾಲ ಮನ್ನಾ ಪ್ರಕ್ರಿಯೆ ಆರಂಭ

Spread the love

ಜಿಲ್ಲೆಯಲ್ಲಿ ರೂ.258 ಕೋಟಿ ಬೆಳೆ ಸಾಲ ಮನ್ನಾ ಪ್ರಕ್ರಿಯೆ ಆರಂಭ

ಉಡುಪಿ: ಜಿಲ್ಲೆಯ ರೈತರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ವಾಣಿಜ್ಯ ಬ್ಯಾಂಕ್ಗಳಲ್ಲಿ ಪಡೆದಿರುವ ರೂ.258 ಕೋಟಿ ರೂ. ಗಳ ಬೆಳೆ ಸಾಲ ಮನ್ನಾ ಪ್ರಕ್ರಿಯೆ ಆರಂಭಗೊಂಡಿದ್ದು, ಈಗಾಗಲೇ ಕಾರ್ಕಳ ತಾಲೂಕಿನ 15 ರೈತರು ಪ್ರಯೋಜನ ಪಡೆದಿದ್ದು, ರೈತರು ತಮ್ಮ ಹೆಸರುಗಳನ್ನು ನೊಂದಾಯಿಸಲು ಇಂದಿನಿಂದ 2019 ರ ಜನವರಿ 10 ರ ವರೆಗೆ ಕಾಲಾವಕಾಶ ಇದೆ ಎಂದು ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ತಿಳಿಸಿದ್ದಾರೆ. ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.

ಜಿಲ್ಲೆಯಲ್ಲಿ 2009 ರ ಏಪ್ರಿಲ್ 1 ರಂದು ಮತ್ತು ನಂತರದ ದಿನಗಳಲ್ಲಿ ಮಂಜೂರಾದ ಬೆಳೆಸಾಲಗಳು ಮತ್ತು 2017 ರ ಡಿಸೆಂಬರ್ ಅಂತ್ಯದ ವರೆಗೆ ಬಾಕಿ ಇರುವ, ಸಹಕಾರಿ ಬ್ಯಾಂಕ್ ಗಳಲ್ಲಿ ಪಡೆದ ರೂ.1 ಲಕ್ಷ ಮತ್ತು ವಾಣಿಜ್ಯ ಬ್ಯಾಂಕ್ಗಳಲ್ಲಿ ಪಡೆದ ರೂ.2 ಲಕ್ಷ ದವರೆಗಿನ ಸಾಲಗಳು ಈ ಬೆಳೆ ಸಾಲ ಮನ್ನಾ ಯೋಜನೆಗೆ ಒಳಪಡಲಿದ್ದು, ಈಗಾಗಲೇ ಸಾಲ ಪಾವತಿ ಮಾಡಿರುವ ರೈತರಿಗೆ ಅವರ ಉಳಿತಾಯ ಖಾತೆಗಳಿಗೆ ಯೋಜನೆಯ ಹಣ ಜಮೆ ಆಗಲಿದೆ ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದರು.

ಉಡುಪಿ ಜಿಲ್ಲೆಯಲ್ಲಿ 24232 ಮಂದಿ ರೈತರು ಸಹಕರಿ ಕೃಷಿ ಪತ್ತಿನ ಸಹಕಾರ ಸಂಘ ಮತ್ತು ಡಿಸಿಸಿ ಬ್ಯಾಂಕ್ ಗಳಲ್ಲಿ ಸಾಲ ಪಡೆದಿದ್ದು, 4648 ಮಂದಿ ರೈತರು ವಾಣಿಜ್ಯ ಬ್ಯಾಂಕ್ಗಳಲ್ಲಿ ಸಾಲ ಪಡೆದಿದ್ದು, ಜಿಲ್ಲೆಯ ರೈತರಿಗೆ ಒಟ್ಟು 258 ಕೋಟಿ ರೂ. ಗಳ ಸಾಲ ಮನ್ನಾ ಯೋಜನೆಯ ನೆರವು ದೊರೆಯಲಿದೆ, ಸಹಕಾರಿ ಬ್ಯಾಂಕ್ ಗಳಲ್ಲಿ ಈಗಾಗಲೇ ಬೆಳೆ ಸಾಲ ಮನ್ನಾ ಯೋಜನೆಗೆ ಬಹುತೇಕ ರೈತರ ನೊಂದಾವಣೆ ಮುಗಿದಿದ್ದು, ವಾಣಿಜ್ಯ ಬ್ಯಾಂಕ್ಗಳಲ್ಲಿ ನೊಂದಣಿ ನಡೆಯಲಿದೆ, ಸಾಲ ಮನ್ನಾ ಕುರಿತಂತೆ ನೊಂದಾಯಿಸಲು ಸಾಕಷ್ಟು ಕಾಲಾವಕಾಶವಿದ್ದು, ಪ್ರತಿ ರೈತರು ಕಡ್ಡಾಯವಾಗಿ ತಮ್ಮ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ನ ನಕಲು ಪ್ರತಿ ಮತ್ತು ಸಾಲ ಪಡೆದ ಸರ್ವೆ ನಂಬರಿನ ಮಾಹಿತಿಯನ್ನು ಸ್ವಯಂ ದೃಢೀಕರಿಸಿ, ತಾವು ಸಾಲ ಪಡೆದ ಬ್ಯಾಂಕ್ ಗಳಿಗೆ ಸಲ್ಲಿಸಬೇಕು, ಸಹಕಾರಿ ಬ್ಯಾಂಕ್ಗಳಲ್ಲಿ ಬೆಳೆಸಾಲ ಮನ್ನಾ ಪಡೆದ ಫಲಾನುಭವಿಗಳು ವಾಣಿಜ್ಯ ಬ್ಯಾಂಕ್ ಬೆಳೆ ಸಾಲ ಮನ್ನಾ ಯೋಜನೆಯಡಿ ಅರ್ಹರಿರುವುದಿಲ್ಲ ಎಂದು ಅಪರ ಜಿಲ್ಲಾಧಿಕಾರಿ ಹೇಳಿದರು.

ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ರುದ್ರೇಶ್, ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕ ಪ್ರವೀಣ್ ನಾಯಕ್ ಉಪಸ್ಥಿತರಿದ್ದರು.


Spread the love

Exit mobile version