ಜಿಲ್ಲೆಯಲ್ಲಿ ಶಾಲೆಗಳ ಆರಂಭಕ್ಕೆ ಸಕಲ ಸಿದ್ದತೆ – ಜಿಲ್ಲಾಧಿಕಾರಿ ಜಿ ಜಗದೀಶ್

Spread the love

ಜಿಲ್ಲೆಯಲ್ಲಿ ಶಾಲೆಗಳ ಆರಂಭಕ್ಕೆ ಸಕಲ ಸಿದ್ದತೆ – ಜಿಲ್ಲಾಧಿಕಾರಿ ಜಿ ಜಗದೀಶ್

ಉಡುಪಿ : ಉಡುಪಿ ಜಿಲ್ಲೆಯಲ್ಲಿ ಹೊಸ ವರ್ಷದ ಮೊದಲ ದಿನದಿಂದ ಎಸೆಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿದಿನ ತರಗತಿ ಹಾಗೂ 6ರಿಂದ 9ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ‘ವಿದ್ಯಾಗಮ-2’ ಪ್ರಾರಂಭಿಸಲು ಬೇಕಾದ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.

ಈ ಕುರಿತು ಮಣಿಪಾಲ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಎಲ್ಲಾ 5 ವಲಯಗಳಲ್ಲಿ ಎಲ್ಲಾ ಶಾಲಾ ಮುಖ್ಯಸ್ಥರ ಸಭೆ ಮಾಡಿ, ಶಾಲಾ ಪ್ರಾರಂಭದ ಬಗ್ಗೆ ಸೂಕ್ತ ತಿಳುವಳಿಕೆ ನೀಡಲಾಯಿತು. ಈ ಸಭೆಯಲ್ಲಿ ಮಕ್ಕಳು ಶಾಲೆಗೆ ಬಂದ ನಂತರ, ವಸ್ತುಗಳನ್ನು ಬಳಕೆ ಮಾಡುವ ಬಗ್ಗೆ, ಅವುಗಳನ್ನು ಪದೇ ಪದೇ ಮುಟ್ಟದಿರುವ ಬಗ್ಗೆ, ಕೋವಿಡ್ ಮುನ್ನೆಚ್ಚರಿಕೆ ಬಗ್ಗೆ ತಿಳುವಳಿಕೆ ನೀಡಲು ಮಾರ್ಗದರ್ಶನ ನೀಡಲಾಗಿದೆ.

ಶಾಲಾ ಆರಂಭಕ್ಕೂ ಮುನ್ನ ಶಾಲಾ ಆವರಣ ಮತ್ತು ಶಾಲಾ ಆವರಣದಲ್ಲಿ ಕಂಡುಬರುವ ಎಲ್ಲಾ ಕೊಠಡಿಗಳು, ಕಿಟಕಿ ಬಾಗಲುಗಳು, ಪೀಠೋಪಕರಣಗಳನ್ನು , ಶೌಚಾಲಯಗಳನ್ನು ಗ್ರಾಮ ಪಂಚಾಯತ್ / ನಗರಸಭೆ/ಪುರಸಭೆಯ ಸಹಕಾರದಿಂದ ಸ್ವಚ್ಛತಾ ಕಾರ್ಯ ಆಗಿದೆ. ಸ್ಯಾನಿಟೈಸ್ ಮಾಡಿಸಲಾಗುತ್ತಿದೆ.

ಎಲ್ಲಾ ಬಿಇಓರವರು ತಾಲೂಕು ಆರೋಗ್ಯಾಧಿಕಾರಿಗಳನ್ನು ಸಂಪರ್ಕಿಸಿದ್ದು, ಎಲ್ಲಾ ಶಿಕ್ಷಕರು ಶಾಲೆ ಪ್ರಾರಂಭವಾಗುವ 72 ಗಂಟೆಗಳ ಮೊದಲು ಕೋವಿಡ್-19ಗೆ ಸಂಬಂಧಿಸಿದ ಪರೀಕ್ಷೆ ಮಾಡಿಸಿಕೊಳ್ಳಲು ಸರದಿ ನಿಗದಿಪಡಿಸಲಾಗಿದೆ. ಹಾಗೂ ನೆಗೆಟಿವ್ ವರದಿ ಇದ್ದವರು ಮಾತ್ರ ಶಾಲೆಗೆ ಹಾಜರಾಗಲು ಸೂಚಿಸಿದೆ.
ಪ್ರತೀ ಶಾಲೆಯಲ್ಲಿ ಎಲ್ಲಾ ಮಕ್ಕಳ ಪೋಷಕರ ಸಭೆ ಮಾಡಿ, ಕೋವಿಡ್-19 ಮುನ್ನೆಚ್ಚರಿಕೆ ಕ್ರಮದ ಬಗ್ಗೆ, ಮಕ್ಕಳ ಸುರಕ್ಷತೆಯ ಬಗ್ಗೆ, ವೇಳಾಪಟ್ಟಿಯ ಬಗ್ಗೆ, ಮಕ್ಕಳ ಆಹಾರ ಮತ್ತು ಕುಡಿಯುವ ನೀರಿನ ಬಗ್ಗೆ ಅರಿವು ಮೂಡಿಸಲಾಗಿದೆ.

SOPಯ ಪ್ರತಿಯನ್ನು ಎಲ್ಲಾ ಪೋಷಕರಿಗೆ | ವಿದ್ಯಾರ್ಥಿಗಳಿಗೆ ವಾಟ್ಸಾಪ್ ಮೂಲಕ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಕೊರೋನಾ ಭಯ ನಿವಾರಣೆಗಾಗಿ “ಶಾಲೆಗೆ ಬನ್ನಿ ಮಕ್ಕಳೇ, ಮಹಾಮಾರಿ ಓಡಿಸೋಣ, ಮಕ್ಕಳನ್ನು ಓದಿಸೋಣ”, “ಶಾಲೆಯು ಮಕ್ಕಳ ಸುರಕ್ಷತಾ ಕೇಂದ್ರ” , “ನಮ್ಮ ಶಾಲೆ ಸೋಂಕನ್ನು ಉಂಟು ಮಾಡುವುದಿಲ್ಲ, ಸೋಂಕನ್ನು ಹರಡುವುದಿಲ್ಲ” ಇತ್ಯಾದಿ ಘೋಷಣಾ ವಾಕ್ಯಗಳನ್ನು ವಾಟ್ಸಾಪ್ ಮೂಲಕ ಮಕ್ಕಳಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ.

ದಿನಾಂಕ:01.01.2021ರಂದು ಶಾಲಾ ಪ್ರಾರಂಭದ ದಿನ ವಿದ್ಯಾರ್ಥಿಗಳನ್ನು ತಳಿರು ತೋರಣ, ರಂಗೋಲಿ, WELCOME/ಸುಸ್ವಾಗತ ಫಲಕ ಹಾಗೂ ಮತ್ತಿತರ ನಾವಿನ್ಯಯುತ ಚಟುವಟಿಕೆಗಳಿಂದ ಸ್ವಾಗತಿಸಲು ಕ್ರಮ ವಹಿಸಲು ತಿಳಿಸಿದೆ.

10ನೇ ತರಗತಿ ವಿದ್ಯಾರ್ಥಿಗಳಿಗೆ ನಿಗದಿಪಡಿಸಿದ ವೇಳಾಪಟ್ಟಿಯಂತೆ ಅರ್ಧ ದಿನ ತರಗತಿಗಳನ್ನು ಮೂರು ಅವಧಿಗೆ ಮಾತ್ರ ನಡೆಸುವ ಬಗ್ಗೆ, ಶಾಲೆಯಲ್ಲಿರುವ ಮಕ್ಕಳ ಸಂಖ್ಯೆ, ಶಿಕ್ಷಕರ ಸಂಖ್ಯೆ ಮತ್ತು ಕೊಠಡಿಗಳ ಸಂಖ್ಯೆಗನುಗುಣವಾಗಿ ಒಂದು ತಂಡದಲ್ಲಿ 15 ವಿದ್ಯಾರ್ಥಿಗಳು ಮಾತ್ರ ಇರುವಂತೆ ಮಕ್ಕಳ ತಂಡ ರಚಿಸಿಕೊಳ್ಳಲಾಗಿದೆ.

ಶಾಲಾ ಆವರಣದಲ್ಲಿ 6 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಗಮ 2 ಕಾರ್ಯಕ್ರಮವನ್ನು ಪ್ರಾರಂಭಿಸಲು ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದಲ್ಲಿ ಕ್ರಮ ವಹಿಸಲಾಗಿದೆ.

ಶಾಲೆಗಳು ಪ್ರಾರಂಭಗೊಂಡರೂ ಮಧ್ಯಾಹ್ನ ಬಿಸಿಯೂಟವನ್ನು ಈಗ ಪ್ರಾರಂಭಿಸುವುದಿಲ್ಲ. ಮಕ್ಕಳು ಮನೆಯಿಂದಲೇ ಆಹಾರ, ಕುಡಿಯುವ ನೀರನ್ನು ತರಬೇಕು. ಒಬ್ಪರ ಆಹಾರವನ್ನು ಇನ್ನೊಬ್ಬರು ಬಳಸುವಂತಿಲ್ಲ. ಎಲ್ಲರಿಗೂ ಮಾಸ್ಕ್ ಕಡ್ಡಾಯ. ಸುರಕ್ಷತಾ ಅಂತರ, ಸ್ಯಾನಟೈಸ್ ಬಳಕೆ ಎಲ್ಲವೂ ಕಡ್ಡಾಯವಾಗಿದೆ ಎಂದು ಜಗದೀಶ್ ತಿಳಿಸಿದರು.

ಜ.1ರಂದು ಶಾಲೆ ಪ್ರಾರಂಭದ ದಿನ ವಿದ್ಯಾರ್ಥಿಗಳನ್ನು ತಳಿರು-ತೋರಣ, ರಂಗೋಲಿ, ಸುಸ್ವಾಗತ ಫಲಕ ಹಾಗೂ ಮತ್ತಿತರ ಚಟುವಟಿಕೆ ಗಳಿಂದ ಸ್ವಾಗತಿಸಲು ಕ್ರಮಕೈಗೊಳ್ಳುವಂತೆ ತಿಳಿಸಲಾಗಿದೆ. ಪ್ರತಿ ಶಾಲೆಯಲ್ಲಿ ಓರ್ವ ಶಿಕ್ಷಕರನ್ನು ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಲು ಮೆಂಟರ್ ಆಗಿ ನೇಮಿಸಲಾಗಿದೆ. ಅದೇ ರೀತಿ ಶಾಲೆಯ ಒಂದು ಕೊಠಡಿಯನ್ನು ಐಸೋಲೇಷನ್ ಕೊಠಡಿಯಾಗಿ ಗುರುತಿಸ ಲಾಗಿದೆ.

ಯಾವುದೇ ಮಕ್ಕಳು ಕೊವಿಡ್ ಟೆಸ್ಟ್ ಮಾಡಿಸಬೇಕೆಂದು ತಿಳಿಸಿದರೆ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರದ ಮೂಲಕ ಮಾಡಿಸಲು ಪೋಷಕರಿಗೆ ಶಾಲಾ ಹಂತದ ಪಾಲಕರ ಸಭೆಯಲ್ಲಿ ಸೂಕ್ತ ಮಾರ್ಗದರ್ಶನ ನೀಡಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ನವೀನ್ ಭಟ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಹಾಗೂ ಇತರರು ಉಪಸ್ಥಿತರಿದ್ದರು.


Spread the love